27 April 2013

ಮಾರಲ್ ಪೋಲೀಸಗಿರಿಯ ಹೊಸ ಮಾದರಿ

* ಪ್ರೊ. ಜೆ.ಎಸ್. ಸದಾನಂದ



ಬ್ಲಾಗ್  ಒಂದರಲ್ಲಿ ಪ್ರಕಟವಾದ ರಾಜೇಂದ್ರ ಚೆನ್ನಿಯವರ ಲೇಖನಕ್ಕೆ ಪ್ರತಿಕ್ರಿಯೆ
ಪ್ರಾರಂಭದಲ್ಲಿಯೇ ವೈಜ್ಞಾನಿಕ ಸಂಶೋಧನೆಯ ಬಗ್ಗೆ ನಮ್ಮ ನಿಲುವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.
ಪ್ರಚಲಿತ ವಿದ್ಯಮಾನವನ್ನು ಕುರಿತಾದ ಯಾವುದೇ ಸಂಶೋಧನೆಯೂ ಕೂಡ ಅಂತಹ ವಿದ್ಯಮಾನದ ಕುರಿತು ಈಗಾಗಲೆ ಇರುವ ವಿವರಣೆಗಳು ಎಷ್ಟು ಸಮರ್ಪಕ/ಅಸಮರ್ಪಕವಾಗಿವೆ ಎನ್ನುವುದರಿಂದ ಪ್ರಾರಂಭವಾಗುತ್ತದೆ. ವಿವರಣೆ ಅಥವಾ ವಿವರಣೆಗಳಲ್ಲಿ ಸಾಕಷ್ಟು ಅಂತರ್ವ್ಯೆರುಧ್ಯಗಳಿದ್ದರೆ ಮತ್ತು ವಿದ್ಯಮಾನದ ಎಲ್ಲ ಆಯಾಮಗಳನ್ನು ಹಿಡಿದಿಡಲು ಅದು ಅಸಮರ್ಥವಾಗಿದ್ದರೆ ಅದಕ್ಕಿರಬಹುದಾದ ಕಾರಣಗಳನ್ನು ಹುಡುಕಿ ಕ್ಯೆಗೆತ್ತಿಕೊಳ್ಳಬೇಕಾದ ಸಮಸ್ಯೆಯ  ಸ್ವರೂಪವನ್ನು ರಚಿಸಬೇಕಾಗುತ್ತದೆ. ಸಂಶೋಧಕನು ಈಗಾಗಲೇ ಇರುವ ವಿವರಣೆಗಳಿಲ್ಲರಬಹುದಾದ ದೋಷಗಳನ್ನು ಮತ್ತು ಅದಕ್ಕಿರಬಹುದಾದ ಕಾರಣಗಳನ್ನು ತರ್ಕಬದ್ಧವಾಗಿ ಊಹಿಸಿ ಅದರ ಆಧಾರದ ಮೇಲೆ ಒಂದು ಪ್ರಾಕ್ ಕಲ್ಪನೆಯನ್ನು ರಚಿಸಿ ವಿದ್ಯಮಾನಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಸಂಗ್ರಹಿಸಿ ತರ್ಕಬದ್ಧ ವಾದವನ್ನು ಮಂಡಿಸುವ ಮೂಲಕ ತನ್ನದೇ ಆದ ಪರ್ಯಾಯ ವಿವರಣೆಯನ್ನು ಕೊಡಬೇಕಾಗುತ್ತದೆ. ಅಂತಹ ವಿವರಣೆಯು ಹಳೆಯ ವಿವರಣೆಗಳಲ್ಲಿರುವ ದೋಷಗಳನ್ನು/ಮಿತಿಗಳನ್ನು ಮೀರಿದ್ದಲ್ಲಿ ಮಾತ್ರ ವಿದ್ಯಮಾನಕ್ಕೆ ಸಂಬಂಧಿಸಿದ ಜ್ಞಾನದ ಮುಂದುವರಿಕೆಗೆ ಕೊಡುಗೆ ಸಲ್ಲಿಸಿದಂತಾಗುತ್ತದೆ. ನಾವು ತಿಳಿದುಕೊಂಡಂತೆ ಸಂಶೋಧನೆಯು ಮಾಡಬೇಕಾದ ಎರಡು ಪ್ರಮುಖ ಕೆಲಸಗಳೆಂದೆರೆ: 1) ವಿದ್ಯಮಾನದ ಬಗ್ಗೆ ಈಗಾಗಲೇ ಇರುವ ವಿವರಣೆಯ ಮಿತಿಯನ್ನು ತೋರಿಸುವುದು; 2) ಸಂಶೋಧನೆಯ ಫಲಿತವಾದ ಹೊಸ ವಿವರಣೆಯು ಅಂತಹ ಮಿತಿಗಳನ್ನು ಮೀರಿ ವಿದ್ಯಮಾನದ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತದೆ ಎಂದು ಸಾಬೀತುಪಡಿಸುವುದು.

23 April 2013

* ಡಂಕಿನ್ ಝಳಕಿ


`ಪ್ರಜಾವಾಣಿ’ಯಲ್ಲಿ ವಚನಗಳ ಕುರಿತ ನಮ್ಮ ಸಂಶೋಧನೆಯ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಒಂದು ಸಮಸ್ಯೆ ಮತ್ತೆ ಮತ್ತೆ ಚರ್ಚೆಗೆ ಬಂದಿದೆ. ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ಮುಂದಿನ ಮಾತುಗಳನ್ನು ಕುರಿತು ನಾವು ಚಿಂತಿಸಬೇಕು: “ವಚನಕಾರರು ಜಾತಿಯ ಬಗ್ಗೆ ತಮ್ಮ ಸಿಟ್ಟು, ಅಸಮಾಧಾನ ಮತ್ತು ಕೊರಗುಗಳನ್ನು ಹೇಳಿದ್ದಾರೆಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ವಚನಗಳಲ್ಲಿ ತೋರಿಸಬಹುದು. ಅವುಗಳ ಸಂಖ್ಯೆ ವಿರಳವೆಂಬುದು ಅವುಗಳ ಪ್ರಾಮುಖ್ಯವನ್ನು ಕುಂದಿಸುವುದಿಲ್ಲ”.

ಶಿವಪ್ರಕಾಶರ ಈ ಹೇಳಿಕೆಯ ಎರಡನೇ ಸಾಲನ್ನು ಗಮನಿಸಿ. ಈ ಸಾಲನ್ನು ನೋಡಿದಾಗಲೆಲ್ಲಾ ನನಗೆ ಅನಿಸಿದ್ದು ಈ ಆಕ್ಷೇಪಣೆಗೆ ಸಮರ್ಪಕವಾದ ಉತ್ತರ ನಮ್ಮ ಲೇಖನದಲ್ಲೇ ಇದೆಯಲ್ಲಾ ಎಂದು. ಹಾಗೇಕೆ ಅನಿಸುತ್ತದೆ ಎಂದೂ ಹೇಳಿ ಬಿಡುತ್ತೇನೆ. ಸಮಗ್ರ ವಚನ ಸಂಪುಟಗಳಲ್ಲಿರುವ ಒಟ್ಟು 21,788 ವಚನಗಳಲ್ಲಿ, ನಮ್ಮ ಲೇಖನ ತೋರಿಸುವ ಪ್ರಕಾರ, ಜಾತಿ ವಿರೋಧಿ ಚಳವಳಿ ಎಂಬ ವಿಷಯದ ಚರ್ಚೆಗೆ ಸರಿಯಾಗಿ ಉಳಿದುಕೊಳ್ಳುವ ವಚನಗಳು 72 ಮಾತ್ರ.

19 April 2013

* ಕೃಷ್ಣಮೂರ್ತಿ ಚಂದರ್‌, ಇಂಗ್ಲಿಷ್‌ ಉಪನ್ಯಾಸಕರು, ಮೈಸೂರು ವಿ.ವಿ 


ವಚನ ಸಾಹಿತ್ಯದ ಬಗ್ಗೆ ಸತತವಾಗಿ ಲೇಖನಗಳು, ಪ್ರತಿಕ್ರಿಯೆಗಳು ಪ್ರಕಟವಾಗುತ್ತಿವೆ. ನಾನು ಕಂಡಂತೆ ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ಇತ್ತೀಚೆಗೆ ಈ ರೀತಿಯ ಗಂಭೀರ ಚರ್ಚೆ ನಡೆದದ್ದೇ ಇಲ್ಲ. ಬಸವಲಿಂಗಪ್ಪನವರ `ಬೂಸಾ' ಪ್ರಕರಣದ ಸಂದರ್ಭದಲ್ಲಿ ನಡೆದ ಸಾಹಿತ್ಯದ ಚರ್ಚೆಯ ನಂತರದಲ್ಲಿ ಈ ರೀತಿ ನಡೆಯುತ್ತಿದೆ. ಇದಕ್ಕಾಗಿ `ಪ್ರಜಾವಾಣಿ' ಗೆ ನಮ್ಮ ವಂದನೆಗಳು.

ಈ ಸರದಿಯಲ್ಲಿ ವಿಜಯಕುಮಾರ್ ಬೋರಟ್ಟಿಯವರ ಲೇಖನ (ಏ. 11) ಸದುದ್ದೇಶದಿಂದ ಕೂಡಿರುವುದಾದರೂ ರಾಜಾರಾಮ ಹೆಗಡೆ, ಡಂಕಿನ್, ಬಾಲಗಂಗಾಧರ ಹಾಗೂ ಶಿವಪ್ರಕಾಶರು ಇತಿಹಾಸದ ಸಂಕೀರ್ಣತೆಯನ್ನು ಅರ್ಥೈಸುವುದರ ಜೊತೆಗೆ ತಿರುಚುವ ಪ್ರಯತ್ನ ಮಾಡಿದ್ದಾರೆ ಅನ್ನುವುದು ಒಪ್ಪಲಾಗದ ಮಾತು.

18 April 2013

* ಪ್ರೊ.ಎಸ್‌.ಎನ್‌ ಬಾಲಗಂಗಾಧರ 


ವಚನಗಳ ಉದ್ದೇಶವು ಜಾತಿವಿನಾಶ ಚಳವಳಿಯಲ್ಲ ಎಂಬ ನನ್ನ ಹಾಗೂ ನನ್ನ ಸಹಸಂಶೋಧಕರ ವಾದವು `ಪ್ರಜಾವಾಣಿ'ಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನನ್ನ ವಾದಕ್ಕೆ ಪ್ರತಿಕ್ರಿಯಿಸಿದವರೆಲ್ಲರೂ ನನ್ನ ವಾದವು ವಚನಗಳ ಹಿರಿಮೆಯನ್ನು ಅಲ್ಲಗಳೆಯುತ್ತಿದೆ ಎಂಬುದಾಗಿ ಭಾವಿಸಿದ್ದಾರೆ. ಅದನ್ನು ಸ್ಪಷ್ಟೀಕರಿಸಲು ವಚನಗಳನ್ನು ಆಧ್ಯಾತ್ಮಿಕ ಸಂದರ್ಭದಲ್ಲಿಟ್ಟು ನೋಡಬೇಕೆಂಬುದು ನಮ್ಮ ವಾದವೆಂಬುದನ್ನು ಓದುಗರ ಗಮನಕ್ಕೆ ತಂದಿದ್ದೂ ಆಗಿದೆ. ಆ ಹೇಳಿಕೆಯ ಕುರಿತೂ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಪ್ರತಿಕ್ರಿಯೆಗಳಲ್ಲಿ ಪರೋಕ್ಷವಾಗಿ ಇವರೆಲ್ಲರೂ ಅಧ್ಯಾತ್ಮ ಸಂಪ್ರದಾಯವನ್ನು ಬ್ರಾಹ್ಮಣರಿಗೆ ಸಮೀಕರಿಸುವುದು ಕಂಡುಬರುತ್ತದೆ. ಇಲ್ಲಿ ಬಹುಶಃ ಈ ಅಭಿಪ್ರಾಯಗಳಿಗೆ ಉತ್ತರ ನೀಡುವುದಕ್ಕಿಂತ ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಮತ್ತೂ ಸ್ಪಷ್ಟೀಕರಿಸುವುದು ಸೂಕ್ತ ಎನ್ನಿಸುತ್ತದೆ.

ಭಾರತೀಯ ಅಧ್ಯಾತ್ಮ ಪರಂಪರೆಯು ಇಂದಿನವರೆಗೂ ಐತಿಹಾಸಿಕ ಏಳು ಬೀಳುಗಳನ್ನೆಲ್ಲ ದಾಟಿಕೊಂಡು ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ.

15 April 2013

* ಜೆ.ಎಸ್‌ ಸದಾನಂದ 



ವಚನ ಸಾಹಿತ್ಯ ಹಾಗು ಜಾತಿ ವ್ಯವಸ್ಥೆಯ ಕುರಿತಾದ ಸಂಶೋಧನೆಯ ಮೇಲಿನ ಚರ್ಚೆ ಎಚ್.ಎಸ್.ಶಿವಪ್ರಕಾಶ್ ಹಾಕಿಕೊಟ್ಟ ಅಕಡೆಮಿಕ್ ಅಡಿಪಾಯವನ್ನು ಬಿಟ್ಟು ಅತ್ತಿತ್ತ ಓಲಾಡತೊಡಗಿದೆ ಎಂದು ನನಗನಿಸುತ್ತಿದೆ. ಕೆಲವು ನಿರ್ದಿಷ್ಟ ಲಕ್ಷಣಗಳನ್ನೊಳಗೊಂಡ ಬ್ರಾಹ್ಮಣ ಪುರೋಹಿತಶಾಹಿ ಪ್ರಚೋದಿತ ಜಾತಿ ವ್ಯವಸ್ಥೆ ಅಸ್ತಿತ್ವದಲ್ಲಿದೆ ಎನ್ನುವ ಪೂರ್ವನಂಬಿಕೆಯಿಂದ ವಚನ ಸಾಹಿತ್ಯವನ್ನು ನೋಡಿದಾಗ ಅವು ಜಾತಿ ವ್ಯವಸ್ಥೆಯ ವಿರುದ್ಧದ ಚಳವಳಿಗಳಂತೆ ನಮಗೆ ಕಾಣಿಸುತ್ತದೆ. ಅಂತಹ ಬೌದ್ಧಿಕ ಚೌಕಟ್ಟಿನಿಂದ ಹೊರಬಂದು ವಚನಗಳನ್ನು ಓದಿದಾಗ ಅವು ಜಾತಿ ವ್ಯವಸ್ಥೆಯ ವಿರುದ್ಧದ ಚಳವಳಿ ಎಂದು ಸಿದ್ಧಪಡಿಸಿ ತೋರಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ಡಂಕಿನ್‌ರವರ ವಾದದ ಸಾರಾಂಶ ಎಂದು ನಾನು ತಿಳಿದುಕೊಂಡಿದ್ದೇನೆ.

14 April 2013

* ಡಾ. ವಿಜಯಕುಮಾರ್ ಎಂ. ಬೋರಟ್ಟಿ


ಈ ಲೇಖನ ರಾಜಾರಾಮ ಹೆಗಡೆ ಅವರ  `ವಚನ ಚಳವಳಿಗಳ ಸೈದ್ಧಾಂತಿಕ ಹಿನ್ನೆಲೆಯ ಕುರಿತು...' ಲೇಖನಕ್ಕೆ ಪ್ರತಿಕ್ರಿಯೆ.
ಮೊದಲು ಅವರು ವಚನಗಳ ಬಗ್ಗೆ ಏನು ಹೇಳಿದ್ದಾರೆ ಅನ್ನೋದನ್ನು ಪರಿಶೀಲಿಸೋಣ. ಅವರ ವಾದಗಳನ್ನು ಸ್ಥೂಲವಾಗಿ ಹೀಗೆ ಪಟ್ಟಿ ಮಾಡಬಹುದು:
ಅ) ವಚನ ಸಾಹಿತ್ಯವು ಜಾತಿ ವಿರೋಧಿ ಎಂಬುದು ಸತ್ಯವಲ್ಲ.
ಆ) ಜಾತಿ ವಿರೋಧಿ ಅಭಿಪ್ರಾಯವು ಪ್ರೊಟೆಸ್ಟಂಟ್ ಪೂರ್ವಗ್ರಹಗಳಿಂದ ಕೂಡಿರುವಂತದ್ದು,
ಇ) ಈ ಪೂರ್ವಗ್ರಹಕ್ಕೆ ಪಾಶ್ಚಾತ್ಯರು ಉಂಟು ಮಾಡಿದ  ಜ್ಞಾನಧಾರೆಯೇ ಮುಖ್ಯ ಕಾರಣ,
ಈ) ವಚನಗಳನ್ನು ಭಾರತೀಯ ಆಧ್ಯಾತ್ಮಿಕತೆಯ ಅಖಂಡತೆಯಲ್ಲಿ ನೋಡಿದರೆ ನಮ್ಮ ಪೂರ್ವಗ್ರಹಗಳು ಪರಿಹಾರವಾಗಿ ಬಿಡುತ್ತವೆ,

ಉ) ವಚನಗಳು ಹೊರಸೂಸುವ ಆಧ್ಯಾತ್ಮಿಕತೆಯನ್ನ ನಾವು ಸಾಮಾಜಿಕ ಚಳವಳಿಗಳೆಂದು ತಿಳಿದುಕೊಳ್ಳುವುದು ತಪ್ಪು. ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸದಿದ್ದರೆ ನಾವು ಪ್ರೊಟೆಸ್ಟಂಟ್ ಪೂರ್ವಗ್ರಹಗಳಿಂದ ಹೊರ ಬರಲು ಸಾಧ್ಯವಿಲ್ಲ ಎಂದು ಅವರು ಘೋಷಿಸಿದ್ದಾರೆ. ಬಾಲಗಂಗಾಧರ ಮತ್ತು ಡಂಕಿನ್ನರು `ಚಿಂತನ ಬಯಲು' ಎಂಬ ಪತ್ರಿಕೆಯಲ್ಲಿ ಇತ್ತೀಚೆಗೆ ವಚನಗಳ ಬಗ್ಗೆ ಲೇಖನವನ್ನು ಪ್ರಕಟಿಸಿ ಬಹುತೇಕ ಹೆಗಡೆಯ ತರಹದ ವಾದಗಳನ್ನು ಮಂಡಿಸಿದ್ದಾರೆ.

10 April 2013

* ಅಕ್ಷರ ಕೆ.ವಿ

ವಚನಸಾಹಿತ್ಯದಲ್ಲಿ ವಿಶೇಷಜ್ಞನೇನೂ ಅಲ್ಲದಿರುವ ನನಗೆ ಡಂಕನ್ ಝಳಕಿ ಮತ್ತು ಅವರ ಪ್ರತಿವಾದಿಗಳ ನಡುವಿನ ವಾಗ್ವಾದದಲ್ಲಿ ಒಂದು ಮುಖ್ಯ ಸಮಸ್ಯೆಯಿರುವುದು ಕಂಡಿದೆ. ಅದನ್ನು ಇದುವರೆಗೆ ಯಾರೂ ಪ್ರಸ್ತಾಪಿಸಿಲ್ಲವೆಂಬ ಕಾರಣದಿಂದ ನಾನೀಗ ಈ ಚರ್ಚೆಗೆ ಪ್ರವೇಶಿಸುತ್ತಿದ್ದೇನೆ.

ಮೊದಲಿಗೆ ಝಳಕಿ ಅವರನ್ನು ವಿರೋಧಿಸುವವರ ಧೋರಣೆಯ ಸಮಸ್ಯೆಯನ್ನು ಎತ್ತಿಕೊಳ್ಳುತ್ತೇನೆ.  ಈ ಧೋರಣೆಯನ್ನು ತಳೆಯುವ ಬಹುತೇಕರಲ್ಲಿ 12ನೆಯ ಶತಮಾನದ ವಚನಸಾಹಿತ್ಯದಲ್ಲಿಯೇ 20ನೆಯ ಶತಮಾನದ ಸಾಮಾಜಿಕ ನ್ಯಾಯದ ಪರಿಕಲ್ಪನೆಯೂ ಇತ್ತು - ಎಂಬ ಭಾವನೆಯು ಹಿನ್ನೆಲೆಯಲ್ಲಿ ಒಂದು ಸ್ಥಾಯಿಯಾಗಿ ಕಾಣಿಸಿಕೊಳ್ಳುತ್ತದೆ. ಇದು `ವೇದಕಾಲದಲ್ಲಿಯೇ ವಿಮಾನವೂ ಇತ್ತು' ಎಂಬ ಪ್ರಸ್ತಾಪದಷ್ಟೇ ಸಮಸ್ಯಾತ್ಮಕ. ವಚನಗಳು ಪ್ರಸ್ತಾಪಿಸುವ ಸಮಾನತೆಯು ಜಾತಿಮತಗಳ ರೂಢಿಯನ್ನು ಮೀರಿ ಯಾರೂ ಯಾವುದೇ ಬಗೆಯ ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಬಹುದು ಎಂಬ ಅರ್ಥದ ಪಾರಮಾರ್ಥಿಕ ಸಮಾನತೆಯೇ ಹೊರತು, ಅದು ಫ್ರೆಂಚ್ ಕ್ರಾಂತಿಯ ಅನಂತರ ಹುಟ್ಟಿದ ಲೌಕಿಕ ಸ್ವಾತಂತ್ರ್ಯ, ಸಮಾನತೆಗಳಲ್ಲ. ಯಾವ ಕಾಯಕದವನೂ ಕೈಲಾಸಕ್ಕೆ ಅರ್ಹ ಎಂಬುದು ವಚನದ ಧೋರಣೆಯೇ ಹೊರತು, ಯಾವುದೇ ಕಾಯಕದವನಿರಲಿ ಅವನಿಗೆ ಅಥವಾ ಅವಳಿಗೆ ಸಮಾನ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳಿವೆ - ಎಂಬರ್ಥದ ಆಧುನಿಕ ಸಮಾನತೆಯ ಪರಿಕಲ್ಪನೆ ಅಲ್ಲಿ ಇಲ್ಲ.  ಹಾಗೆಯೇ, ಗಂಡು-ಹೆಣ್ಣುಗಳ ನಡುವೆ ಸುಳಿಯುವುದು ಒಂದೇ ಆತ್ಮ ಎಂದು ವಚನ ಹೇಳುತ್ತದೆಯೇ ಹೊರತು, ಅವರಿಬ್ಬರೂ ಸಮಾನ ಹಕ್ಕುಳ್ಳವರು ಎಂದು ವಚನ ಹೇಳುವುದಿಲ್ಲ. ಈ ದೃಷ್ಟಿಯಿಂದ ವಚನಸಾಹಿತ್ಯವೂ ಸೇರಿದಂತೆ ಎಲ್ಲ ಕಾಲದ ಸಾಹಿತ್ಯಗಳೂ ಆಯಾ ಯುಗಧರ್ಮಕ್ಕೆ ಬದ್ಧವಾದ ಪ್ರಕಾರಗಳೇ ಹೊರತು ಅವನ್ನು ಅನಾಮತ್ತಾಗಿ ಇನ್ನೊಂದು ಕಾಲಕ್ಕೆ ಅನ್ವಯಿಸುವುದು ಅಸಾಧ್ಯ; ಹಾಗೆ ಮಾಡಹೊರಟರೆ ಎರಡೂ ಕಾಲಕ್ಕೂ ನಾವು ಅನ್ಯಾಯ ಮಾಡಿದ ಹಾಗೆ. ಝಳಕಿ ಅವರ ಲೇಖನವು ಪರೋಕ್ಷವಾಗಿ ಇಂಥ ಯುಗಲಂಘನವನ್ನು ವಿರೋಧಿಸುತ್ತ, ವಚನಗಳನ್ನು ಅದರ ಪಠ್ಯಪರಿಧಿಯ ಕಾಲದೇಶಗಳಲ್ಲೇ ಇಟ್ಟು ಹಿಸ್ಟಾರಿಸೈಸ್ ಮಾಡಲು ಹೊರಟಿರುವುದು ನನಗೆ ಸ್ವಾಗತಾರ್ಹವಾಗಿ ಕಾಣುತ್ತದೆ.

ಆದರೆ, 12ನೆಯ ಶತಮಾನವನ್ನು ಒಂದು ರೂಪಕವಾಗಿ ಕಂಡು, ಅದನ್ನು ನಮ್ಮ ಕಾಲದ ಸಾಮಾಜಿಕ ಕ್ರಿಯಾಶೀಲತೆಗೆ ಸ್ಫೂರ್ತಿಯಾಗಿ ಬಳಸುವುದರಲ್ಲಿ ಸಮಸ್ಯೆಯೇನೂ ಇಲ್ಲ. ಅಂಥ ಹೋರಾಟಕ್ಕೆ ವಚನ ಪಠ್ಯಗಳ ನೆರವು ಪಡೆಯುವುದು, ಅದು ಸೃಜನಶೀಲವಾದ ತಪ್ಪು ಓದಿನಿಂದ ಕೂಡಿದ್ದಾಗಿದ್ದರೂ ಕೂಡ, ಅದು ಅಸಾಧುವಲ್ಲ. ಇಂಥ ಸೃಜನಶೀಲ `ತಪ್ಪು' ಓದುಗಳಿಂದಲೇ ಹೊಸ ಕಾಲದ ಸಾಹಿತ್ಯ-ಸಂಸ್ಕೃತಿಗಳು ಪ್ರೇರಿತವಾಗುತ್ತಿರುತ್ತವೆ ಎಂಬುದು ಜಾಗತಿಕ ಸಾಂಸ್ಕೃತಿಕ ಚರಿತ್ರೆಯ ಮೇಲೆ ಕಣ್ಣಾಡಿಸಿದವರಿಗೆಲ್ಲ ತಿಳಿದಿರುತ್ತದೆ. ಉದಾಹರಣೆಗೆ, ಹರಳಯ್ಯ, ಮಧುವರಸರ ಕುಟುಂಬದ ಮಧ್ಯೆ ನಡೆಯಿತೆಂದು ಉಲ್ಲೇಖಿಸಲಾಗುವ ಅಂತರ್ಜಾತೀಯ ವಿವಾಹಕ್ಕೆ ಐತಿಹಾಸಿಕವಾಗಿ ಯಾವ ಆಧಾರವಿಲ್ಲದಿದ್ದರೂ ಅದನ್ನು ಆಧುನಿಕ ಕನ್ನಡದ ಹಲವು ನಾಟಕ, ಕಾದಂಬರಿಗಳು ಆ ಕಾಲದ ಒಂದು ಕೇಂದ್ರ ಐತಿಹ್ಯವೆಂದು ಉಲ್ಲೇಖಿಸುವುದರಲ್ಲಿ ನನಗೆ ಯಾವ ಸಮಸ್ಯೆಯೂ ಕಾಣುವುದಿಲ್ಲ. ಝಳಕಿ ಅವರ ವಾದವು ಇಂಥ ಸೃಜನಶೀಲ ಲಂಘನ ಮಾಡುತ್ತಿರುವವರನ್ನೆಲ್ಲ ದಡ್ಡರು ಎಂದು ತಿರಸ್ಕಾರದಿಂದ ನೋಡುವುದು, ಈ ಕಾಲಕ್ಕೆ ಮಾಡುವ ಅನ್ಯಾಯವಾಗುತ್ತದೆ. 12ನೆಯ ಶತಮಾನವನ್ನು ಹಿಸ್ಟಾರಿಸೈಸ್ ಮಾಡುವಂತೆ 20ನೆಯ ಶತಮಾನವನ್ನೂ ನಾವು ಹಿಸ್ಟಾರಿಸೈಸ್ ಮಾಡಲು ಸಿದ್ಧರಿರಬೇಕಲ್ಲವೆ?

ಹೀಗೆ, ಇತಿಹಾಸ ಮತ್ತು ಐತಿಹ್ಯಗಳ ನಡುವಿನ ಹಾಗೂ ವಾಸ್ತವ ಮತ್ತು ರೂಪಕಗಳ ನಡುವಿನ ಭಿನ್ನತೆಗಳಿಗೆ ಆದಷ್ಟೂ ಎಚ್ಚರವಾಗಿದ್ದುಕೊಂಡು - ಅದು ಭಾರತದ ಸಂದರ್ಭದಲ್ಲಿ ಸುಲಭದ ಕೆಲಸವೇನೂ ಅಲ್ಲ - ಅದರೊಂದಿಗೇ ಹಳೆಗಾಲದ ಸಾಹಿತ್ಯವೊಂದನ್ನು ಓದುವ ಪ್ರಯತ್ನಕ್ಕೆ ತೊಡಗಿದರೆ ಮಾತ್ರ, ಈಗ `ಪ್ರಜಾವಾಣಿ'ಯಲ್ಲಿ ನಡೆಯುತ್ತಿರುವ ಸಂವಾದಕ್ಕೆ ಒಂದು ಉಪಯುಕ್ತ ಭವಿಷ್ಯವಿದೆ. ಅರ್ಥಾತ್, ಇತಿಹಾಸ ಮತ್ತು ಐತಿಹ್ಯದ ದೃಷ್ಟಿಗಳಲ್ಲಿ ಒಂದು ಮಾತ್ರವೇ ಸಾಧ್ಯ ಎಂಬ ಹಠಕ್ಕಿಳಿಯದೆ, ಎರಡನ್ನೂ ಅದರದರ ಉಪಯುಕ್ತತೆಯಲ್ಲಿ ಬಳಸುವುದು ಸಾಧ್ಯ ಎಂಬ ವಿವೇಕದಲ್ಲಿ ಈ ಚರ್ಚೆ ಮುನ್ನಡೆದರೆ, ಇದರಿಂದ ತುಂಬ ಲಾಭವಾದೀತು - ಎಂಬುದು ನನ್ನ ಆಶಯ.

08 April 2013

* ಡಾ.ಜಿ.ಬಿ. ಹರೀಶ

ಕನ್ನಡದಲ್ಲಿ ಈ ತನಕ ಇನ್ನೂರು ವರ್ಷಗಳಲ್ಲಿ ನಡೆದಿರುವ ವಚನ ಸಂಬಂಧಿತ ತಿಳಿವಳಿಕೆಯನ್ನು ಒಂದು ಹಂತದಲ್ಲಿ ಪ್ರಶ್ನಿಸುವ ಕೆಲಸವನ್ನು ಡಂಕಿನ್ ಝಳಕಿ ಅವರ ಮೂಲ ಥೀಸಿಸ್ (ಪಿ.ಎಚ್.ಡಿ. ಪ್ರಬಂಧ) ಮಾಡುತ್ತದೆ. ಅದಕ್ಕೆ ಅವರು ಅವರ ಪ್ರಕಾರ ಕೆಲವು ಪ್ರಮುಖ ವಚನ ವಿದ್ವಾಂಸರನ್ನು ಮಾದರಿಗಾಗಿ ತೆಗೆದುಕೊಂಡಿದ್ದಾರೆ.: ಡಾ.ಎಂ.ಎಂ. ಕಲಬುರ್ಗಿ, ಡಾ. ಚಿದಾನಂದಮೂರ್ತಿ, ಡಾ.ಡಿ.ಆರ್. ನಾಗರಾಜ್, ಡಾ.ಎಚ್. ತಿಪ್ಪೇರುದ್ರಸ್ವಾಮಿ. ಅಲ್ಲಲ್ಲಿ ಪ್ರೊ.ಕೆ.ಜಿ. ನಾಗರಾಜಪ್ಪ, ಒಂದು ಕಡೆ ಶಂಕರಮೊಕಾಶಿ ಪುಣೇಕರ ಅವರನ್ನು ಉಲ್ಲೇಖಿಸುತ್ತಾರೆ.

ವಚನ ಸಾಹಿತ್ಯದ ಬಗ್ಗೆ ಅಪಾರ ಒಳನೋಟವಿರುವ ಬರಹಗಳನ್ನು ಬರೆದಿರುವ ಜ.ಚ.ನಿ. ಸಿದ್ದೇಶ್ವರಸ್ವಾಮಿಗಳಾಗಲಿ, ಕಪಟರಾಳ ಕೃಷ್ಣರಾವ್, ಎಂ.ಆರ್. ಶ್ರಿನಿವಾಸಮೂರ್ತಿಯವರಾಗಲಿ, ಈ ಬರಹದುದ್ದಕ್ಕೂ ಎಲ್ಲೂ ಕಾಣಿಸುವುದಿಲ್ಲ. ಕಿ.ರಂ. ನಾಗರಾಜರೂ ಇಲ್ಲಿ ಗೈರುಹಾಜರಿ. (ಅವರ ಮೌಖಿಕ ಕ್ಯಾಸೆಟ್‌ಗಳು ಹಲವೆಡೆ ಆಸಕ್ತರ ಬಳಿ ಇದೆ).
ಕನ್ನಡ ವಚನ ಪರಂಪರೆ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ತಳೆದ ವಿವಿಧ ಬದಲಾವಣೆಗಳನ್ನು, ಆಗಮ-ತಂತ್ರಗಳು ವಚನ ಸಾಹಿತ್ಯದೊಳಗೆ ನಿಹಿತವಾಗಿರುವುದನ್ನೂ ಅಖಿಲ ಭಾರತೀಯ ಮಟ್ಟದಲ್ಲಿ ಗೋಪಿನಾಥ ಕವಿರಾಜ ತೋರಿಸಿಕೊಟ್ಟಿದ್ದಾರೆ. (ಭಾರತೀಯ ಸಂಸ್ಕೃತಿ ಔರ್ ಸಾಧನಾ ). ವಚನಗಳ ತಾಂತ್ರಿಕ ಪರಿ ತೀಕ್ಷ್ಣವನ್ನು ಕೆ.ಜಿ. ನಾಗರಾಜಪ್ಪ ತೋರಿಸಿದ್ದಾರೆ (ಅಲ್ಲಮನ ವಚನಗಳ ಬಗ್ಗೆ).

ವಚನ ಸಂಪ್ರದಾಯವಾಗಿ ಕನ್ನಡ ನಾಡಿನ ಜನರ ಆತ್ಮವಾಯಿತು. ಶೂನ್ಯ ಸಂಪಾದನೆಗಳು ಸಂಕಲನಗೊಂಡವು. ಸ್ವರ ವಚನ ಸಾಹಿತ್ಯ, ಉದ್ಧರಣೆ ಸಾಹಿತ್ಯ, ಬಂದಿತು. ಕನ್ನಡದಲ್ಲಿ ತತ್ತ್ವಪದಕಾರರು ಕಾಣಿಸಿಕೊಳ್ಳುವ ಸುಮಾರಿಗೆ ಡಂಕಿನ್ ಹೇಳುವ ಪ್ರಾಟೆಸ್ಟೆಂಟ್ ಮನೋಭಾವದ ಸಂಶೋಧನೆ, ದೃಷ್ಟಿಕೋನ ಈ ಮಣ್ಣಿಗೆ ಪರಿಚಿತವಾದದ್ದು. ಹನ್ನೆರಡರಿಂದ ಹದಿನೇಳನೇ ಶತಮಾನದಲ್ಲೇ ವಚನಗಳಲ್ಲಿ ಉಂಟಾದ ಆಂತರಿಕ ಬದಲಾವಣೆ ಡಂಕಿನ್ ಅವರು ಗಮನಿಸಿಯೇ ಇಲ್ಲ.
ಡಾ. ಬಾಲಗಂಗಾಧರ ಮತ್ತು ಡಾ. ಡಂಕಿನ್ ಅವರ ಸಂಶೋಧನೆಯ ದೊಡ್ಡ ಸಮಸ್ಯೆಯೆಂದರೆ ತಾವು ಹಿಡಿದಿರುವ ವೈಧಾನಿಕತೆಯ ಪರಮ ಪ್ರಾಮಾಣ್ಯವನ್ನು ಮಾತ್ರ ನೋಡುವುದು. ಹಳೆಯ ಸಂಸ್ಕೃತ-ತರ್ಕ ಪಾಂಡಿತ್ಯದವರ ದಾರಿ ಇದಾಗಿತ್ತು. ಈಗ ಕನ್ನಡವಿರಲಿ, ಉಳಿದ ಸ್ಥಳೀಯ ಭಾಷೆಗಳಿರಲಿ (ಅವರದ್ದು ಸ್ಥಳೀಯ ಸಂಸ್ಕೃತಿಗಳ ಸಂಶೋಧನಾ ಕೇಂದ್ರವಾದ್ದರಿಂದ ಈ ಮಾತು ಹೇಳುತ್ತೇನೆ) ಕೇವಲ ನಿಗಮನ ಅನುಗಮನ ತರ್ಕವನ್ನಾಗಲಿ, ನಾಲ್ಕು-ಐದು ಪ್ರಮಾಣಗಳ ತರ್ಕವನ್ನಾಗಲಿ ಇಟ್ಟುಕೊಂಡು ಬದುಕುತ್ತಿಲ್ಲ. ಲೋಕತರ್ಕ, ನಿಸರ್ಗತರ್ಕವನ್ನೂ ಅವು ಒಳಗೊಂಡಿವೆ. (ಅವುಗಳ ವಿವರಣೆ ಅಗತ್ಯವಿದ್ದರೆ ನೀಡಲು ಸಿದ್ಧ).

ಇದುವರೆಗೂ ಕನ್ನಡದಲ್ಲಿ ವಚನ ಸಂಶೋಧನೆ `ಸರಿಯಾಗಿ'  ನಡೆದಿಲ್ಲ ಎಂದು ಹೇಳುವ ಇವರಿಗೆ ಕರ್ನಾಟಕ ಸರ್ಕಾರ ಸಮಗ್ರ ವಚನಗಳ 15 ಸಂಪುಟ ಪ್ರಕಟಿಸಿದೆ ಎಂದು ತಿಳಿಯದೆ  `14'  ಎಂದು ಹೇಳುತ್ತಾರೆ.  `15' ನೆಯದು ವಚನ ಪರಿಭಾಷಾಕೋಶ. ಅದರ ಬಳಕೆ ಡಂಕಿನ್ ಬರವಣಿಗೆಯಲ್ಲಿ ಆದಂತಿಲ್ಲ. ಇದೊಂದು ಮುಖ್ಯ ದೋಷ.

ಸ್ಟಾನ್ಲಿವುಲ್ ಡರ್ಟ್ ಮುಂತಾದವರು ಹಿಂದೆಯೇ ವೀರಶೈವದ `ವೀರ' ಆಯಾಮವನ್ನು ತಮ್ಮ  `ಗಾಡ್ ಮೆನ್ ಆನ್ ವಾರ್ ಪಾತ್' ಕೃತಿಯಲ್ಲಿ ತೋರಿಸಿದ್ದಾರೆ. ಆದರೆ ಕನ್ನಡದ ಭಾಷೆಯ ಸೊಬಗು, ಇಲ್ಲಿಯ ಆಧ್ಯಾತ್ಮಿಕತೆ - ಸಾಮಾಜಿಕತೆ ಬೆರೆತ ಬನಿ ಪಾಶ್ಚಾತ್ಯರಿಗೆ ತಿಳಿಯದಿರುವುದು ಸಹಜ. ಆದರೆ ಉಪನಿಷತ್ ಋಷಿಗಳು, ಶಂಕರ, ಅಭಿನವಗುಪ್ತರಂತೆ ಸಂಪೂರ್ಣ ಲೋಕವಿಮುಖರಾಗದ ಅವಲೋಕಿತೇಶ್ವರರ, ಅವಧೂತರ ದಾರಿ ಕನ್ನಡದಲ್ಲೂ ಇದೆ.

ಅವರೇ ನಮ್ಮ ವಚನಕಾರರು. ವಚನಕಾರರನ್ನು ಇಂದಿನ ಬೀದಿ ಚಳವಳಿಗಾರರ ಮಟ್ಟಕ್ಕೆ ಇಳಿಸಬಾರದು ಎಂಬ ಡಂಕಿನ್ ಕಾಳಜಿ ಅರ್ಥವಾಗುತ್ತದೆ. ಆದರೆ ವಚನಕಾರರು ಕಾಡು, ಗುಹೆ ಸೇರಿ ಏಕಾಂತದಲ್ಲಿದ್ದವರಲ್ಲ, ಬದಲಿಗೆ ಈ ಲೋಕದಲ್ಲೇ ಇದ್ದವರು, ತಂತ್ರದ ಭುಕ್ತಿ-ಮುಕ್ತಿ ಸಿದ್ಧಾಂತ ಒಪ್ಪಿದವರು ಎಂಬುದು ಅಷ್ಟೇ ಮುಖ್ಯ. ಫೇಸ್‌ಬುಕ್ಕಿನ ಒಂದು ಕಮೆಂಟ್‌ನಲ್ಲಿ ಡಂಕಿನ್ ಅವರು ಶಂಕರರು ಹೇಳಿದ್ದಕ್ಕಿಂತ ವಚನಕಾರರು ಬೇರೆ ಏನನ್ನು ಹೊಸದಾಗಿ ಹೇಳಿದ್ದಾರೆ ಎಂದು ಐದು ವರ್ಷ ಪಿಎಚ್‌ಡಿ ಮಾಡಿದ ನಂತರ ಪ್ರಶ್ನಿಸಿದರೆ ಏನು ಮಾಡುವುದು? ಅವರೇ ಉತ್ತರಿಸಲಿ.

ಎಲ್ಲಕ್ಕಿಂತ ಮುಖ್ಯ ಪ್ರಶ್ನೆ ಇರುವುದು, ಈ ಸಂಶೋಧಕರ ಧೋರಣೆಯ ಬಗ್ಗೆ. ವಸಾಹತುಶಾಹಿ ಅಥವಾ ಪ್ರಾಟೆಸ್ಟೆಂಟ್ ಪ್ರಭಾವಕ್ಕೆ ಇಡೀ ಸಮಾಜವೇ ಕಣ್ಮುಚ್ಚಿಕೊಂಡು ಒಳಗಾಗಿ ಬಿಟ್ಟಿತು. ಹಾಗಾಗಿಯೇ ವೇದ ವಿರೋಧಿ, ಜಾತಿ ಪದ್ಧತಿ  ಧೋರಣೆಯನ್ನು ಬೆಳೆಸಿಕೊಂಡಿತು ಎಂಬುದು ಅತಿರೇಕದ ವಾದ. ಹಾಗಾದರೆ ವೀರಶೈವರಲ್ಲೇ ಯಾರೂ ಈ ಬಾಹ್ಯ ಪ್ರಭಾವಕ್ಕೆ ಒಳಗಾಗದೇ ಉಳಿಯಲಿಲ್ಲವೇ? ಅಥವಾ ಎಲ್ಲಾ ವಚನ ವಿದ್ವಾಂಸರೂ ಪ್ರಾಟೆಸ್ಟೆಂಟರು `ತೋರಿಸಿಕೊಟ್ಟ'  ಜಾತಿ `ಪದ್ಧತಿ'  ಯನ್ನೇ ನಂಬಿಬಿಟ್ಟರೆ? ಜಾತಿಪದ್ಧತಿಯ ನಿರೂಪಣೆಯಲ್ಲಿ ಬಹುತ್ವವಿದೆ, ಹಲವು ಐಡಿಯಾಲಜಿಗಳಿವೆ, ಅದರಲ್ಲಿ ಡಂಕಿನ್ ಅವರದೂ ಒಂದು ಪ್ರಯತ್ನ ಮಾತ್ರ ಎಂದು ನೋಡಬೇಕೇ ಹೊರತು ಅದೇ ಅಂತಿವಲ್ಲ.

ಸದ್ಯಕ್ಕೆ ಬಾಲಗಂಗಾಧರ ಮತ್ತು ಡಂಕಿನ್ ಮಾಡಿರುವ ಪ್ರಯತ್ನದಲ್ಲಿ  `ಚೌಕಟ್ಟಿನ'  (ಫ್ರೇಂವರ್ಕ್) ವಿಜೃಂಭಣೆಯೇ ಅತಿಯಾಗಿದೆ. ಇವರು ವಚನ ಅಧ್ಯಯನದ ಪ್ರದಕ್ಷಿಣೆಕಾರರ ಈಗಿರುವ ದೊಡ್ಡ ಗುಂಪಿಗೆ ಹೊಸ ಸೇರ್ಪಡೆಯಾಗಬಲ್ಲರೇ ಹೊರತು ಗರ್ಭಗುಡಿಗೆ ಹೋಗುವ ಸಾಮರ್ಥ್ಯ ಡಂಕಿನ್ ಅವರು ಮಂಡಿಸಿ ಡಾಕ್ಟರೇಟ್ ಪಡೆದಿರುವ ಪಿಎಚ್‌ಡಿ. ಮಹಾಪ್ರಬಂಧಕ್ಕೆ ಇಲ್ಲ. ಇದೇ ಮಾತು ಎಚ್.ಎಸ್. ಶಿವಪ್ರಕಾಶ್ ಮೊದಲಿಗೆ ಚರ್ಚಿಸಿದ್ದ ಡಂಕಿನ್‌ರ ಲೇಖನಕ್ಕೂ ಸಲ್ಲುತ್ತದೆ.
* ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು

ವಚನ ಚಳವಳಿಯ ಸೈದ್ಧಾಂತಿಕ ಹಿನ್ನೆಲೆ ಕುರಿತು ಸಂಗತದಲ್ಲಿ ಚರ್ಚೆ ನಡೆಯುತ್ತ ಬಂದಿದೆ. ಜಾತಿಯ ಬೇಲಿಯನ್ನು ಕಿತ್ತು ಮನುಷ್ಯರೆಲ್ಲರೂ ಒಂದೆಡೆ ಸೇರುವಂತಹ ಮಹಾಸಾಹಸವನ್ನು ಶರಣರು ತೋರಿದರು. ಅವರ ಅನುಭವಗಳ ಅಭಿವ್ಯಕ್ತಿಯಾದ ವಚನ ರಚನೆಯು ಅವರ ಉದ್ದೇಶಗಳಲ್ಲಿ ಒಂದು. ವಚನಗಳನ್ನು ರಚಿಸಿದ ಶರಣರೆಲ್ಲ ಸಂಸ್ಕೃತ ಪಂಡಿತರಾಗಿರಲಿಲ್ಲ.
ಅವಲ್ಲಿ ಬಸವಣ್ಣ, ಚನ್ನಬಸವಣ್ಣ, ಅಲ್ಲಮ ಮುಂತಾದ ಕೆಲವೇ ಶರಣರಿಗೆ ಸಂಸ್ಕೃತ ಜ್ಞಾನವಿತ್ತು. ಉಳಿದಂತೆ ಎಲ್ಲ ಶರಣರು ಕನ್ನಡಪ್ರಿಯರು. ಕೆಲಶರಣರಿಗೆ ಕನ್ನಡವಲ್ಲದೆ ತೆಲುಗು (ತೆಲುಗು ಬೊಮ್ಮಯ್ಯ), ತಮಿಳು (ಮಾದಾರ ಚೆನ್ನಯ್ಯನವರು ತಮಿಳುನಾಡಿನ ಚೋಳದೇಶದಿಂದ ಬಂದವರೆಂದು ಹೇಳಲಾಗಿದೆ). ಮರಾಠಿ, ಹಿಂದಿ (ಉತ್ತರ ಭಾರತದಿಂದ ಬಂದಂತಹ ಶರಣರ ಭಾಷೆ). ಅವರೆಲ್ಲ ಸಂಸ್ಕೃತವನ್ನು ಕಡ್ಡಾಯವೆಂದು ಭಾವಿಸಿರಲಿಲ್ಲ.

ಸಂಸ್ಕೃತದಲ್ಲಿ ಮಾತನಾಡಿದರೆ ಮತ್ತು ವಚನ ರಚಿಸಿದರೆ ಕೆಲವರಷ್ಟೇ ಅರ್ಥ ಮಾಡಿಕೊಳ್ಳಬಹುದಾಗಿತ್ತು. ಎಲ್ಲರಿಗೂ ಅರ್ಥವಾಗಲಿ ಮತ್ತು ಅಭಿವ್ಯಕ್ತಿ ಒಂದೇ ಭಾಷೆಗೆ ಸೀಮಿತವಾಗುವುದು ಬೇಡವೆಂದು ಕನ್ನಡದಲ್ಲಿ ವಚನ ರಚಿಸಿ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದರು. ಸಂಸ್ಕೃತದಲ್ಲಿ ವಚನ ರಚನೆಗೆ ಇಳಿದಿದ್ದರೆ, ಭಗವದ್ಗೀತೆಯಂತೆ ವ್ಯಾಪಕತೆಯನ್ನು ಪಡೆಯಬಹುದಾಗಿತ್ತೇನೋ. ಶರಣರಿಗೆ ಅವರ ವ್ಯಾಪ್ತಿಗಿಂತ ಪ್ರಯೋಗ ಪ್ರಮುಖವಾಗಿತ್ತು. ಜನಸಾಮಾನ್ಯರನ್ನು ಚಳವಳಿಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕಾಗಿತ್ತು. ಇದಲ್ಲದೆ ಸಂಸ್ಕೃತ ಕಲಿತವರ ಮೇಲರಿಮೆ; ಕನ್ನಡ ಕಲಿತವರ ಕೀಳರಿಮೆಯನ್ನು ಅವರು ಕಿತ್ತುಹಾಕಬೇಕಾಗಿತ್ತು.

ವಚನಕಾರರು ಕೇವಲ ವಚನ ಸಾಹಿತ್ಯಕ್ಕೆ ತಮ್ಮನ್ನು ಸಂಕುಚಿತಗೊಳಿಸಿಕೊಳ್ಳುವುದಿಲ್ಲ. ಬದಲಾಗಿ ಅವರು ಪ್ರಯೋಗಶೀಲರಾಗಿದ್ದರು. ಒಂದೆಡೆ ಜಾತಿಯು ಸೃಷ್ಟಿಸುತ್ತಿದ್ದಂತಹ ಅಸಮಾನತೆಯನ್ನು ತೊಡೆಯುವುದು ಅವರ ಮುಖ್ಯ ಉದ್ದೇಶವಾಗಿತ್ತು. ಇಂದಿಗೂ ತಳಮಟ್ಟದ ಸಮುದಾಯಗಳು ಅಸ್ಪೃಶ್ಯತೆಯ ಅತೀವ ಯಾತನೆಯನ್ನು ಅನುಭವಿಸುತ್ತಿವೆ. ಜಾತೀಯತೆಯ ತೀವ್ರತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಅವರ ಪ್ರಮುಖ ಪ್ರಯೋಗ. ಜಾತ್ಯತೀತ ಭಾವನೆಯ ಮುಖಾಂತರ ಏಳುನೂರೈವತ್ತು ಅಮರಗಣಂಗಳು ಒಂದೆಡೆ ಸೇರುವುದೇ ಒಂದು ಮಹಾ ಸಾಹಸ. ಜಾತಿಯ ಜಟಿಲತೆಯನ್ನು ಕರಗಿಸುವುದು ಎಂದೆಂದಿಗೂ ಕ್ಲಿಷ್ಟಕರ.

ಜಾತ್ಯತೀತತೆಯೆಂದರೆ ಮಾನವೀಯತೆ. ಮಾನವೀಯ ಕಾಳಜಿಯಿಂದ ಸಮಾನತೆಯನ್ನು ತರಲು ಅವರಿಗೆ ಸಾಧ್ಯವಾಯಿತು. ಶರಣರೆಲ್ಲ ಜೀವಕಾರುಣ್ಯ ಹೊಂದಿದವರು. ಆದ್ದರಿಂದಲೇ ಶೋಷಿತರ ಅವಮಾನದ ಕಾವನ್ನು ಕಡಿಮೆ ಮಾಡಲು ಹರಸಾಹಸ ಮಾಡಿದ್ದಾರೆ. ವಚನ ರಚನೆ ಪರಿವರ್ತನೆಯ ಸ್ವರೂಪ. ಪ್ರಯೋಗವೆಂದರೆ ಪರಿವರ್ತನೆ. ತಾನು ಪರಿವರ್ತನೆ ಆಗದೆ ಇತರರಲ್ಲಿ ಪರಿವರ್ತನೆ ತರಲು ಸಾಧ್ಯವಿಲ್ಲವೆಂಬುದನ್ನು ಅವರು ಅರಿತಿದ್ದರು. ಪರಿವರ್ತನೆಯು ತನ್ನಿಂದಲೇ ಆರಂಭವಾಗಲಿ ಎಂಬುದು ಅವರ ಆಶಯ. ಸಮಗಾರ ಹರಳಯ್ಯ, ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ ಮುಂತಾದ ಭಾಗಶಃ ಶರಣರಿಗೆ ಪರಿವರ್ತನೆಯೇ ಪ್ರಮುಖವಾದ ಅಂಶವಾಗಿತ್ತು.

ಅಲ್ಲಮ, ಅಕ್ಕಮಹಾದೇವಿ, ಚನ್ನಬಸವಣ್ಣ, ಮೋಳಿಗೆ ಮಾರಯ್ಯ ಮುಂತಾದವರು ಪರಿವರ್ತನೆಯ ಪರವಾಗಿದ್ದರೂ ಅನುಭವದ ಹಂಬಲಕ್ಕೆ ಒಳಗಾಗಿದ್ದರು. ಅಲ್ಲಮ ಸುತ್ತಾಟವನ್ನು ಆರಂಭಿಸಿಕೊಂಡು, ನದಿ-ತಟಾಕ-ಗುಹೆ ಮುಂತಾದೆಡೆಯಲ್ಲಿ ಏಕಾಂತ ಸಾಧನೆ ಮಾಡುತ್ತಾ, ಆಧ್ಯಾತ್ಮಿಕವಾದ ಆನಂದವನ್ನು ಅನುಭವಿಸಿದ್ದಾನೆ. ಅಲ್ಲದೆ ಸಿದ್ಧರು - ಸಾಧಕರನ್ನು ಸಂದರ್ಶಿಸುತ್ತ ಚರ್ಚೆಗೆ ಇಳಿದಿದ್ದಾನೆ.  ಅಲೆಮಾರಿ ಅಲ್ಲಮ , ಮುಂದೆ  ಅನುಭಾವಿ ಅಲ್ಲಮ ನೆನಿಸಿಕೊಳ್ಳುತ್ತಾನೆ.

ಲೋಕಾನುಭವ ಮತ್ತು ಸಿದ್ಧಿ ಸಂಪಾದನೆ ಮಹಾನುಭಾವಿ ಆಗುತ್ತಾನೆ. ಅನೇಕ ಸಂದರ್ಭದಲ್ಲಿ ಅವನು ಏಕಾಂತ ಸಾಧಕ. ಏಕಾಂತ ಮತ್ತು ಲೋಕಾಂತ ಎರಡನ್ನು ಸಾಧಿಸಿದ ಅಧ್ಯಾತ್ಮ ಸಾಧಕ. ಆಧ್ಯಾತ್ಮವು ಶರಣರ ಒಂದು ಸಾಧನೆ ಆಗಿತ್ತು. ಅಕ್ಕಮಹಾದೇವಿಯು ಕೌಶಿಕನ ಅರಮನೆಯನ್ನು ತೊರೆದಿದ್ದೇ ಆಧ್ಯಾತ್ಮಿಕ ಹಂಬಲದಿಂದ. ಅದು ಪರಮಾನಂದ. ಪರಮಾನಂದ ಪ್ರಾಪ್ತಿಗಾಗಿ ಒಬ್ಬಂಟಿಯಾಗಿ ನಿಸರ್ಗವನ್ನು ಅನುಭವಿಸುತ್ತ, ಎದುರಾದ ಕಷ್ಟ-ನಷ್ಟಗಳನ್ನು ಧೈರ್ಯವಾಗಿ ಎದುರಿಸುತ್ತ, ಕಲ್ಯಾಣದತ್ತ ಸಾಗಿ, ಶರಣ ತಿಂಥಿಣಿಯನ್ನು ಸೇರಿಕೊಂಡಳು. ಅಲ್ಲಿ ಆಕೆಯ ಬದುಕನ್ನು ಎತ್ತರಿಸುವಂತಹ  ಶರಣರ ಸಂಗ . ಶರಣರ ಸಂಗದಿಂದ ಆಧ್ಯಾತ್ಮಿಕ ಆನಂದವನ್ನು ಅನುಭವಿಸಿದ ಮಹಾನ್ ಸಾಧಕಿ.

ಆಂದೋಲನ ಮತ್ತು ಅಧ್ಯಾತ್ಮ ಎರಡೂ ವಚನಕಾರರ ಧ್ಯೇಯವಾಗಿದ್ದವು. ಬಸವಣ್ಣನವರ ಆಂತರ್ಯದಲ್ಲಿ ಆಧ್ಯಾತ್ಮ; ಬಹಿರಂಗದಲ್ಲಿ ಪರಿವರ್ತನಶೀಲ ಪವೃತ್ತಿ. ಪ್ರಭುದೇವ ಮತ್ತಿತರ ಶರಣರ ಅಂತರಂಗದಲ್ಲಿ ಸುಧಾರಣೆ; ಬಹಿರಂಗದಲ್ಲಿ ಆಧ್ಯಾತ್ಮಿಕ ಜಿಜ್ಞಾಸೆ. ವಚನಗಳಲ್ಲಿ ಜೀವಪ್ರೀತಿಯಿದೆ, ನಿಸರ್ಗದ ಆರಾಧನೆ, ಸತ್ಯದ ಅನ್ವೇಷಣೆ, ಮಾನವೀಯ ಮೌಲ್ಯಗಳ ಕಾಳಜಿ, ಪರಿವರ್ತನಾಪರವಾದ ಆಶಯ, ಸ್ವಾತಂತ್ರ - ಸ್ವಾಭಿಮಾನ, ಜೀವನ ಶಿಕ್ಷಣ, ಪ್ರಜಾಪ್ರಭುತ್ವ ಪರವಾದ ಚಿಂತನೆ, ಸಾಮ್ರೋಜ್ಯಶಾಹಿ ಮತ್ತು ಪೌರೋಹಿತ್ಯಶಾಹಿಯ ಖಂಡನೆ, ಶೋಷಣೆಯ ವಿಮೋಚನೆ, ಲಿಂಗ ತಾರತಮ್ಯದ ನಿವಾರಣೆ ಇತ್ಯಾದಿ. ನಮಗೆ ಬೇಕಾಗಿರುವುದನ್ನು ಅದರಲ್ಲಿ ಆಯ್ದುಕೊಳ್ಳಬಹುದು. ಜಾತಿ ವ್ಯವಸ್ಥೆಯ ಶೋಷಣೆಯ ಸಂಕಷ್ಟಗಳಾಗಲೀ, ವರ್ಣಾಶ್ರಮ ಫಲಿತ ಭೇದಗಳಾಗಲೀ ಅಂದು ಸ್ಥಾಯಿಯಾಗಿರದಿದ್ದರೆ ಶರಣಚಳವಳಿ ಮೂಡಿಬರಲು ಸಾಧ್ಯವಿರಲಿಲ್ಲವೆನ್ನುವುದೂ ಸಹ ಸತ್ಯ.
* ಡಂಕಿನ್ ಝಳಕಿ

ಪ್ರಜಾವಾಣಿಯ  ಪ್ರತಿಸ್ಪಂದನ  ( ಮಾ.15 ) ಅಂಕಣದಲ್ಲಿ ಎಚ್.ಎಸ್. ಶಿವಪ್ರಕಾಶರು ವಚನಗಳ ಕುರಿತ ಬಾಲಗಂಗಾಧರರ ಮತ್ತು ನನ್ನ ವಾದಗಳ ಕುರಿತು ಬರೆದಿದ್ದರು. ವೈಯಕ್ತಿಕ ವಿಚಾರಗಳನ್ನೆಲ್ಲಾ ಬದಿಗೊತ್ತಿ, ಒಂದು ಸಂಶೋಧನೆಯನ್ನು ಚರ್ಚೆಗೆತ್ತಿಕೊಂಡ ಈ ರೀತಿಯ ಪ್ರಯತ್ನಗಳು ಆಧುನಿಕ ಕನ್ನಡ ಸಾರಸ್ವತ ಲೋಕದಲ್ಲಿ ಇಲ್ಲವೆನ್ನುವಷ್ಟು ಕಡಿಮೆ. ಒಂದು ಆರೋಗ್ಯವಂತ ಚರ್ಚೆಗೆ ಹೀಗೆ ಅನುವು ಮಾಡಿಕೊಟ್ಟಿರುವ ಪ್ರಜಾವಾಣಿಗೆ ನನ್ನ ನಮ್ರ ವಂದನೆಗಳು. ತಮ್ಮ ಅಂಕಣದಲ್ಲಿ ಅವರು ಎತ್ತಿರುವ ಪ್ರಶ್ನೆಗಳಿಗೆ ಇದು ನನ್ನ ಸಂಕ್ಷಿಪ್ತ ಉತ್ತರ.

ವಚನಗಳ ಕುರಿತ ನಮ್ಮ ವಾದವನ್ನು ಸಂಗ್ರಹಿಸುತ್ತಾ ಶಿವಪ್ರಕಾಶರು “ವಚನಕಾರರು ಜಾತಿಯ ಬಗ್ಗೆ ತಮ್ಮ ಸಿಟ್ಟು, ಅಸಮಾಧಾನ ಮತ್ತು ಕೊರಗುಗಳನ್ನು ಹೇಳಿದ್ದಾರೆಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ವಚನಗಳಲ್ಲಿ ತೋರಿಸಬಹುದು. ಅವುಗಳ ಸಂಖ್ಯೆ ವಿರಳವೆಂಬುದು ಅವುಗಳ ಪ್ರಾಮುಖ್ಯವನ್ನು ಕುಂದಿಸುವುದಿಲ್ಲ” ಎನ್ನುತ್ತಾರೆ.

ಈ ಆಕ್ಷೇಪಣೆಗೆ ನಮ್ಮ ಉತ್ತರ ಹೀಗಿದೆ. ಸಮಗ್ರ ವಚನ ಸಂಪುಟಗಳಲ್ಲಿರುವ ಒಟ್ಟು 21,788 ವಚನಗಳಲ್ಲಿ, ಜಾತಿ, ಕುಲ ಮತ್ತು ಅವುಗಳಿಗೆ ಸಂಬಂಧಿಸಿದ ಇತರ ವಿಚಾರಗಳ ಕುರಿತು ಮಾತನಾಡುವಂತೆ ತೋರುವ ವಚನಗಳ ಸಂಖ್ಯೆ 458. ಈ ಪೈಕಿ 101 ವಚನಗಳು ಜಾತಿ ಕುರಿತ ಪದಗಳನ್ನು ಬಳಸಿದರೂ ಜಾತಿ ಸಮಸ್ಯೆಗಳ ಕುರಿತು ಏನನ್ನೂ ಹೇಳುವುದಿಲ್ಲ.
ಸುಮಾರು 145 ವಚನಗಳಲ್ಲಿ ಕೆಳಜಾತಿ ಮತ್ತು ಕುಲಗಳನ್ನು (ಎಲ್ಲಿ ಹೊಲೆಯ ಮತ್ತು ಮಾದಿಗ ಎಂಬ ಪದಪ್ರಯೋಗವಾಗಿದೆಯೊ) ನಿಂದನಾತ್ಮಕ ಅರ್ಥ ಬರುವಂತೆ ಬಳಸಲಾಗಿದೆ. ಉಳಿದ 219 ವಚನಗಳಲ್ಲಿ 34 ವಚನಗಳು ಜಾತಿಗಳ ಕುರಿತು ಏನನ್ನು ಹೇಳುತ್ತಿವೆ ಎಂಬುದರ ಕುರಿತು ಸ್ಪಷ್ಟತೆಯೇ ಇಲ್ಲ, ಹಾಗೂ 113 ವಚನಗಳು ಜಾತಿ ಅಥವಾ ಕುಲದ ಕುರಿತು ಪ್ರಾಸಂಗಿಕವಾಗಿ ಮಾತನಾಡುತ್ತವೆ.

ಹಾಗಾಗಿ ಕಡೆಗೂ ಲಿಂಗಾಯತ ಚಳವಳಿಯು ಜಾತಿ ವಿರೋಧಿ ಚಳವಳಿ ಎಂಬ ವಿಷಯದ ಚರ್ಚೆಗೆ ಸರಿಯಾಗಿ ಉಳಿದುಕೊಳ್ಳುವ ವಚನಗಳು 72 ಮಾತ್ರ. (ಅಂದರೆ ಒಟ್ಟೂ ವಚನಗಳ 0.33% ಭಾಗ ಮಾತ್ರ.) ಈ 72 ವಚನಗಳಲ್ಲಿ ಜಾತ್ಯಾಭಿಮಾನವನ್ನು ಹಾಗೂ ಕೆಲವು ಜಾತಿ ಆಚರಣೆಗಳನ್ನು ಖಂಡಿಸಿದ ಮಾತ್ರಕ್ಕೆ ಅದು ಜಾತಿವ್ಯವಸ್ಥೆಯ ವಿರೋಧವಾಗುವುದಾದರೆ ಅದರ ದುಪ್ಪಟ್ಟು, ಅಂದರೆ 145 ವಚನಗಳು ಹೊಲೆಯ ಮಾದಿಗ ಎನ್ನುವ ಶಬ್ದಗಳನ್ನು ನಿಂದನಾತ್ಮಕವಾಗಿ ಬಳಸಿವೆ. ನಮ್ಮ ಸಂಶೋಧನೆ ಇದನ್ನು ವಚನಕಾರರ ಚಿಂತನೆಯ ದೋಷವೆಂದಾಗಲೀ, ಭಾಷಾ ಬಳಕೆಯಲ್ಲಿನ ಸಮಸ್ಯೆಯೆಂದಾಗಲೀ ಆರೋಪಿಸುವುದಿಲ್ಲ.

ಆಡು ಮಾತಿನಲ್ಲಿ ನಾವು ಭಾಷೆಯನ್ನು ಬಳಸುವುದೇ ಹೀಗೆ. ವಚನಗಳನ್ನು ಜಾತಿ ವಿರೋಧಿ ಸಾಹಿತ್ಯವೆಂದು ನಾವು ಕರೆಯುವುದಾದರೆ, ಇಂತಹ ವಚನಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಇಷ್ಟು ಸಾಲದೆಂಬಂತೆ 100ಕ್ಕೂ ಹೆಚ್ಚು ವಚನಗಳು ಪರಸ್ತ್ರೀಯರಿಗೆ ಆಸೆ ಪಡುವವರನ್ನು ಖಂಡಿಸುತ್ತವೆ.

ಅದರ ದುಪ್ಪಟ್ಟು ವಚನಗಳು ಪರದೈವಗಳನ್ನು, ಅವುಗಳನ್ನು ಪೂಜಿಸುವವರನ್ನು ಹಾಗೂ ಜೈನರನ್ನು ದೂಷಿಸುತ್ತವೆ. ಈ 72 ವಚನಗಳಲ್ಲಿನ ಎಂಟು ಹತ್ತು ವಚನಗಳನ್ನು ಮತ್ತೆಮತ್ತೆ ಉಲ್ಲೇಖಿಸಿ ವಚನಗಳ ಜಾತಿವಿರೋಧಿ ನಿಲುವಿನ ಬಗ್ಗೆ ಬರೆಯುತ್ತಾ ಬಂದಿರುವ ನಮ್ಮ ಬರಹಗಾರರಿಗೆ ವಚನಕಾರರ ಇನ್ನುಳಿದ 99%ಗಿಂತ ಹೆಚ್ಚಿನ ವಚನಗಳಲ್ಲಿ ಏನನ್ನು ಹೇಳುತ್ತಿದ್ದಾರೆ ಎಂಬುದೇ ಮುಖ್ಯವಾಗುವುದಿಲ್ಲವೇಕೆ? ಒಟ್ಟಿನಲ್ಲಿ ಜಾತಿವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವುದು ವಚನಕಾರರ ಮೂಲಭೂತ ಗುರಿಯಾಗಿತ್ತು ಎನ್ನುವುದು ಒಂದು ಅಸಂಬದ್ಧವಾದ ವಾದ.

ನಮ್ಮ ಈ ವಾದದೊಳಗಿನ ತರ್ಕವನ್ನು ಮುಂದುವರೆಸಿದರೆ, “ಅಡಿಗರ ಕಾವ್ಯದಲ್ಲಿ ಕನ್ನಡವೆಂಬ ಪದ ಬಹಳ ಕಡಿಮೆ ಬರುವುದರಿಂದ ಅಡಿಗರು ಕನ್ನಡದ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ” ಎಂದ ಹಾಗಾಗುತ್ತದೆ ಎನ್ನುತ್ತಾರೆ ಶಿವಪ್ರಕಾಶರು. ಅವರ ಈ ವಾದ ಸರಿಯಲ್ಲ.  `ವಚನಗಳು ಜಾತಿ ವಿರೋಧಿ' ಎಂಬ ಇಂದಿನ ಪ್ರಚಲಿತ ವಾದದಲ್ಲಿರುವ ಸಮಸ್ಯೆಯನ್ನು ಎತ್ತಿತೋರಿಸಲು ನಾವು ಈ ತರ್ಕವನ್ನು ಬಳಸಿರುವುದು. ಜಾತಿವ್ಯವಸ್ಥೆಯ ವಿರೋಧವನ್ನು ಮಾಡುವುದೇ ವಚನಕಾರರ ಚಳವಳಿಯಾಗಿತ್ತು ಎನ್ನುವುದಾದರೆ ಇಷ್ಟೊಂದು ಕಡಿಮೆ ವಚನಗಳಲ್ಲಿ ಇಷ್ಟೊಂದು ಅಸ್ಪಷ್ಟವಾಗಿ, ಪ್ರಾಸಂಗಿಕವಾಗಿ, ಅಪಾರ್ಥ ಬರುವಂತೆ ಅವರೇಕೆ ಹೇಳುತ್ತಿದ್ದರು? ಇದು ನಮ್ಮ ಪ್ರಶ್ನೆ.

ಅಡಿಗರಿಗೆ ಅನ್ವಯಿಸಿ ಹೇಳುವುದಾದರೆ, ಒಂದು ವೇಳೆ ಅಡಿಗರನ್ನು ಯಾರಾದರೂ 20ನೇ ಶತಮಾನದ ಅತ್ಯಂತ ಪ್ರಸಿದ್ಧ ಕನ್ನಡ ಹೋರಾಟಗಾರರು ಎಂದು ಕರೆದರೆ, ಅವರ ಕಾವ್ಯದಲ್ಲಿ ಕನ್ನಡವೆಂಬ ಪದದ ಬಳಕೆಯೇ ಇಲ್ಲದಿದ್ದ ಪಕ್ಷದಲ್ಲಿ ಅಡಿಗರು ಕನ್ನಡದ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ವಾದಿಸುವುದು ತರ್ಕಬದ್ಧವಾಗಿಯೇ ಇರುತ್ತದೆ.

ವಚನಕಾರರ ಜಾತಿ ಕುರಿತ ನಿಲುವಿಗೆ ಉದಾಹರಣೆಯಾಗಿ ಶಿವಪ್ರಕಾಶರು ಮಾದಾರ ಚನ್ನಯ್ಯನ ವಚನವೊಂದನ್ನು ಉಲ್ಲೇಖಿಸುತ್ತಾ ಹೀಗೆ ಹೇಳುತ್ತಾರೆ: ` ಕುಲವೇನೋ ಅವಂದಿರ ಕುಲವೇನೋ?'  ಎಂದು ಬಸವಣ್ಣ ಕೇಳಿದಾಗ  `ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ?'  ಎಂದು ಸರ್ವಜ್ಞ ನುಡಿದಾಗ,  `ಕುಲಕುಲವುಲವೆಂದು ಹೊಡೆದಾಡದಿರಿ' ಎಂದು ಕನಕದಾಸರು ಅರುಹಿದಾಗ ಅವರೆಲ್ಲರೂ ಸಾಮಾಜಿಕ ಅಸಮಾನತೆಯನ್ನೇ ನಿರ್ದೇಶಿಸಿದರೆಂಬುದು ಸ್ಪಷ್ಟ.  ವಚನಗಳು ಜಾತಿ ಆಭಿಮಾನ ಅಥವಾ ಕುಲಮದದ ಕುರಿತು ಏನನ್ನೂ ಹೇಳುವುದಿಲ್ಲವೆಂದು ನಮ್ಮ ಸಂಶೋಧನೆ ಎಲ್ಲಿಯೂ ಹೇಳಿಲ್ಲ.
ಅಧ್ಯಾತ್ಮದ ಚರ್ಚೆ ನಡೆಯುವಾಗ ಈ ರೀತಿಯ ಬಿಗುಮಾನಗಳ, ದುರಭಿಮಾನಗಳ ಕುರಿತು ಮಾತನಾಡದಿರಲು ಹೇಗೆ ಸಾಧ್ಯ? ವಸಾಹತು ಬರಹಗಾರರು ಮಾಡಿದ್ದು ಮತ್ತು ನಾವು ಅವರಿಂದ ಕಲಿತದ್ದು ಏನೆಂದರೆ, ಈ ರೀತಿಯ ಚರ್ಚೆಗಳನ್ನು ಭಾರತದಲ್ಲಿ ಒಂದು ಜಾತಿವ್ಯವಸ್ಥೆ(caste system) ಇದೆ ಮತ್ತು ಅದು ಇಡೀ ಸಮಾಜವನ್ನು ತನ್ನ ಅಂಕೆಯಲ್ಲಿಟ್ಟುಕೊಂಡು, ಅನೈತಿಕತೆಯನ್ನು ಹರಡುತ್ತಿದೆ ಎಂಬುದಕ್ಕೆ ಪುರಾವೆಯಾಗಿ ಬಳಸಿದ್ದು.

ಇದು ತಪ್ಪು ಎನ್ನುವುದಕ್ಕೆ ಹಲವು ವಾದಗಳನ್ನು ಮುಂದಿಡಬಹುದು. ಉದಾಹರಣೆಗೆ ಇವೆರಡನ್ನು ಗಮನಿಸಿ. ಒಂದು, ಜಾತಿಯ ಕುರಿತು ಮಾತನಾಡುವ ವಚನಗಳು ಅಥವಾ  ಕುಲಕುಲವೆಂದು ಹೊಡೆದಾಡದಿರಿ  ಎಂಬಂಥ ಮಾತುಗಳು ಬ್ರಾಹ್ಮಣರ ಅಥವಾ ಮೇಲ್ಜಾತಿ ಜನರಲ್ಲಿರುವ ಜಾತಿಕುರಿತ ತಪ್ಪು ಕಲ್ಪನೆಗಳ ಕುರಿತು ಮಾತ್ರ ಮಾತನಾಡುತ್ತದೆ ಎಂದು ಹೇಳುವುದಾದರೂ ಹೇಗೆ?

ಒಬ್ಬ ಹೊಲೆಯನಿಗೂ ತನ್ನ ಜಾತಿ ಕುರಿತ (ಆಧ್ಯಾತ್ಮಿಕ ಮಾರ್ಗದಲ್ಲಿ ಅಡಚಣೆಯಾಗಬಲ್ಲ) ಅಹಂ, ದುರಾಭಿಮಾನಗಳು ಇರಬಹುದಲ್ಲ. ಎರಡು, ಜಾತಿ, ಕುಲಗಳಲ್ಲಿ ನಮಗಿರುವ ಈ ರೀತಿಯ ಅಹಂ, ದುರಭಿಮಾನಗಳ ಕುರಿತ ಚರ್ಚೆ ಕೇವಲ ವಚನಕಾರರು, ಕನಕದಾಸರ ಬರಹಗಳಿಗೆ ಸೀಮಿತವಲ್ಲ. (ಅಧ್ಯಾತ್ಮ ಸಾಧನೆಯ ಕುರಿತು ಮಾತನಾಡಿರುವ ಚಿಂತಕರೆಲ್ಲರೂ ಜಾತಿಯ ಕುರಿತು ಈ ರೀತಿಯ ವಿಚಾರಗಳನ್ನೇ ಹೇಳಿದ್ದು. ಬೇಕಾದರೆ ಆದಿಶಂಕರರ ಕೃತಿಗಳನ್ನು ನೋಡಿ. ಜಾತಿ ಭೇದವನ್ನು ಮತ್ತು ವೇದಗಳನ್ನೂ ಅಲ್ಲಗಳೆಯುವ ಅವರ ಆತ್ಮ ಶಟಕಂನ 14 ಮತ್ತು 17ನೆಯ ಸಾಲುಗಳು ಹೀಗಿವೆ:  ನ ಮಂತ್ರೋ ನ ತೀರ್ಥ, ನ ವೇದಾನ ಯಜ್ಞ ;  ನಮೇ ಜಾತಿ ಭೇದಃ .) ಹಾಗೆಯೇ ಅವರ ಅಸಮಾಧಾನ ಜಾತಿಯ ವಿಷಯಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ಅಧ್ಯಾತ್ಮ ಗಳಿಕೆಯ ಹಾದಿಗೆ ಅಡ್ಡಿಪಡಿಸುವ ಎಲ್ಲದರ ಕುರಿತು ಅವರು ತಮ್ಮ ಅಸಮಾಧಾನವನ್ನು ತೋರಿಸಿದ್ದಾರೆ.

ವಚನ ಸಾಹಿತ್ಯದ ಕುರಿತ ಆಧುನಿಕ ಚಿಂತಕರ ತೀರ್ಮಾನವನ್ನು ಒಂದು ಉದಾಹರಣೆಯ ಮೂಲಕ ವಿವರಿಸುವುದಾದರೆ, ಶಾಲೆಗಳಲ್ಲಿ ಕೆಲವು ಶಿಕ್ಷಕರು ಇತ್ತೀಚಿನ ದಿನಗಳಲ್ಲಿ ಕೆಟ್ಟ ಕೆಲಸಗಳಲ್ಲಿ ತೊಡಗುವುದನ್ನು ನೋಡುತ್ತೇವೆ. ಅಂತಹ ಶಿಕ್ಷಕರ ವಿರುದ್ಧ ಹಲವರು ತಮ್ಮ ಆಕ್ರೋಶ, ಕೋಪವನ್ನೆಲ್ಲಾ ವ್ಯಕ್ತಪಡಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರು ಇಡೀ ಶಿಕ್ಷಣ ವ್ಯವಸ್ಥೆಯನ್ನೇ ತೊಲಗಿಸಬೇಕೆಂದು ಪ್ರತಿಪಾದಿಸುತ್ತಿದ್ದಾರೆ ಎಂದು ಹೇಳುವುದು ಮೂರ್ಖತನದ ನಿರ್ಧಾರವಾಗುತ್ತದೆ. ಹಾಗೆಯೇ ವಚನಗಳ ಕುರಿತ ತೀರ್ಮಾನ ಕೂಡ.

ಇಂತಹ ಸಂದರ್ಭದಲ್ಲಿ ಕೆಲವು ಪ್ರಮುಖ ಪ್ರಶ್ನೆಗಳು ಏಳುತ್ತವೆ: ಜಾತಿ ಕುರಿತು ನಡೆದ ಈ ರೀತಿಯ ಚರ್ಚೆಯನ್ನು, ಭಾರತೀಯ ಸಮಾಜದಲ್ಲಿ ಅನೈತಿಕ  `ಜಾತಿವ್ಯವಸ್ಥೆ'ಯೊಂದು ಇದೆ ಎನ್ನುವುದಕ್ಕೆ ಪುರಾವೆಯಾಗಿ ನೋಡಲು ನಾವು ಕಲಿತದ್ದು ಯಾವಾಗ? ಯಾರಿಂದ? ಹೇಗೆ? ಭಾರತೀಯ ಅಧ್ಯಾತ್ಮ ಚಿಂತಕರೆಲ್ಲರೂ ಇದೇ ರೀತಿಯ ವಿಚಾರಗಳನ್ನು ಹೇಳಿರುವಾಗಲೂ, ಬಸವ, ಕನಕದಾಸ ಮುಂತಾದ ಒಂದಷ್ಟು ಚಿಂತಕರಿಗೆ ಮಾತ್ರ  ಸಮಾಜ ಸುಧಾರಕರು  ಎಂಬ ಪಟ್ಟವನ್ನು ಕಟ್ಟಿ ಉಳಿದವರೆಲ್ಲರಿಗೂ ಜಾತೀಯತೆಯ ಹರಿಕಾರರು ಎಂಬ ದೂಷಣೆಯೊಂದಿಗೆ ಕಟಕಟೆಯನ್ನೇರಿಸಿದ್ದು ಏಕೆ? ಎಂದಿನಿಂದ? ನಮ್ಮ ಸಂಶೋಧನೆಯ ಪ್ರಕಾರ ಇದೆಲ್ಲಾ ನಡೆದದ್ದು ವಸಾಹತುಶಾಹಿ ಪ್ರಜ್ಞೆಯ ಪ್ರಭಾವದಡಿ. ಅಂದರೆ  ವಚನಗಳನ್ನು ಕನ್ನಡ ಭಾಷಿಕರು ಧುತ್ತೆಂದು ವಸಾಹತುಶಾಹಿ ಇಂಜೆಕ್ಷನ್ ಚುಚ್ಚಿದಾಗ ನೆನಪಿಸಿ ಕೊಂಡರು ಎಂದಲ್ಲ.

ವಸಾಹತುಶಾಹಿ ಕಾಲದಲ್ಲಿ ನಡೆದದ್ದು ಏನು ಮತ್ತು ಹೇಗೆ ಎನ್ನುವುದರ ಸಂಪೂರ್ಣ ಚಿತ್ರಣ ದೊರಕಬೇಕಾದರೆ ನೂರಾರು ಹೊಸ ಸಂಶೋಧನೆಗಳು ನಡೆಯಬೇಕು. ಶಿವಪ್ರಕಾಶರೇ ಒದಗಿಸುವ ಪುರಾವೆಗಳನ್ನು ನೋಡಿ. 12ನೇ ಶತಮಾನದಿಂದ 19ನೇ ಶತಮಾನದ ಅಂತ್ಯದವರೆಗೆ ವಚನಗಳ ಕುರಿತು ನಮಗೆ ಸಿಗುವುದು ಬೆರಳೆಣಿಕೆಯಷ್ಟು ಕೃತಿಗಳು ಮಾತ್ರ. ಆದರೆ 20ನೇ ಶತಮಾನದ ಮೊದಲ ಎರಡು ಮೂರು ದಶಕಗಳು ಕಳೆಯುವಷ್ಟರಲ್ಲಿ ವಚನಗಳ ಕುರಿತು ಬಂದ ಕೃತಿಗಳು ನೂರಾರು.
ಹೀಗೆ ವಚನಗಳಿಗೆ ಹಿಂದೆಂದೂ ಇಲ್ಲದ ಹೊಸ ಮನ್ನಣೆ ಸಿಗಲು ಆಗ ಇದ್ದ ಸಾಮಾಜಿಕ ಒತ್ತಡಗಳೇನು? ಈ ಕುರಿತು ಸದ್ಯಕ್ಕೆ ಇಷ್ಟನ್ನು ಮಾತ್ರ ಹೇಳಬಹುದು: ಭಾರತದಲ್ಲಿ ಒಂದು ಜಾತಿವ್ಯವಸ್ಥೆ ಇದೆ, ಅದು ಅನೈತಿಕವಾದುದು ಮತ್ತು ಅದರ ವಿರುದ್ಧ ಹೋರಾಡುವುದು ಪ್ರಗತಿಪರವಾದದ್ದು ಎಂಬ ವಿಚಾರವನ್ನು ನಮಗೆ ಕಲಿಸಿಕೊಟ್ಟವರು ಯೂರೋಪಿನ ಚಿಂತಕರು. ಭಾರತೀಯ ಚಿಂತಕರು ಇದನ್ನು ಯಾವುದೇ ತಕರಾರಿಲ್ಲದೆ ಒಪ್ಪಿಕೊಂಡದ್ದರಿಂದ ತಮ್ಮನ್ನು, ತಮ್ಮಲ್ಲಿರುವುದೆಲ್ಲವನ್ನೂ  ಪ್ರಗತಿಪರವಾದದ್ದು  ಎಂದು ತೋರಿಸುವ ಒತ್ತಡಕ್ಕೆ ಒಳಗಾದರು. ಆಧುನಿಕ (ಶಿಕ್ಷಿತ) ಲಿಂಗಾಯತ ಸಮುದಾಯದವರೂ ಇದಕ್ಕೆ ಹೊರತಲ್ಲ.

ತಮ್ಮ ಸಮಾಜ, ಗತ, ಸಾಹಿತ್ಯವೆಲ್ಲವನ್ನೂ ಜಾತಿ ವಿರೋಧಿ ಮತ್ತು ಆ ಕಾರಣಕ್ಕಾಗಿ ಪ್ರಗತಿಪರವಾದದ್ದು ಎಂದು ತೋರಿಸುವ ಅವರ ಪ್ರಯತ್ನದ ಫಲವಾಗಿಯೇ ವಚನಗಳನ್ನು  ಜಾತಿವಿರೋಧಿ ಸಾಹಿತ್ಯ/ಚಳುವಳಿ  ಎಂದು ನೋಡಿದ್ದು. ನಮ್ಮ ಈ ವಾದವನ್ನು ಶಿವಪ್ರಕಾಶರು ತಪ್ಪಾಗಿ  ಆಧುನಿಕ ವೀರಶೈವ ಸಮುದಾಯದವರು ತಮ್ಮ ಮೇಲುಚಲನೆಗಾಗಿ ಕಲ್ಪಿಸಿಕೊಂಡ ಒಂದು ಮಿಥ್ಯ ಕಲ್ಪನೆ  ಎಂದು ನಾವು ಹೇಳುತ್ತಿರುವುದಾಗಿ ಗ್ರಹಿಸುತ್ತಾರೆ.

* ಚಂದ್ರಶೇಖರ ಕಂಬಾರ 


ಈಚಿನ ದಿನಗಳಲ್ಲಿ  `ಪ್ರಜಾವಾಣಿ' ಯ ಸಂಗತದಲ್ಲಿ ಅಚ್ಚಾಗುತ್ತಿರುವ ವಚನಕಾರರ ಬಗೆಗಿನ ಚರ್ಚೆಯನ್ನು ಕುತೂಹಲದಿಂದ ಗಮನಿಸುತ್ತಾ ಬಂದಿದ್ದೇನೆ. ಕರ್ನಾಟಕದ ಸಂಸ್ಕೃತಿ ಮತ್ತು ಚಿಂತನೆಯ ನಿರ್ಮಾಣದಲ್ಲಿ ಅತ್ಯಂತ ವಿಶಿಷ್ಟ ಮತ್ತು ನಿರ್ಣಾಯಕ ಪಾತ್ರ ವಹಿಸಿದ ವಚನ ಪರಂಪರೆಯ ಕುರಿತ ಯಾವುದೇ ಚರ್ಚೆ ತುಂಬಾ ಮಹತ್ವಪೂರ್ಣವಾದುದು. ಅದರಲ್ಲೂ ಒಬ್ಬ ವ್ಯಕ್ತಿಯಾಗಿ, ಬರಹಗಾರನಾಗಿ, ಕನ್ನಡ ಜಾನಪದ ಮತ್ತು ಸಾಹಿತ್ಯದ ವಿದ್ಯಾರ್ಥಿಯಾಗಿರುವ ನನ್ನ ಸಂವೇದನೆ ಮತ್ತು ಸೃಜನಶೀಲತೆಗೆ ಬಹು ದೊಡ್ಡ ಕೊಡುಗೆ ನೀಡಿರುವ, ಕಳೆದ ನಾಲ್ಕೈದು ದಶಕಗಳಿಂದ ನನ್ನ ಆತ್ಮಸಂಗಾತದಲ್ಲಿರುವ ವಚನಕಾರರ ಕುರಿತ ಚರ್ಚೆಯಲ್ಲಿ ನಾನೂ ದನಿಗೂಡಿಸಬೇಕು ಅನಿಸಿದೆ.

ಪ್ರಸ್ತುತ ಚರ್ಚೆಯಲ್ಲಿರುವ ಸಂಗತಿಗಳಿಗೆ ನನ್ನ ಪ್ರತಿಕ್ರಿಯೆ ನೀಡುವ ಮೊದಲು ಅವಕ್ಕೆ ಭಿತ್ತಿಯಾಗಿ ಕೆಲವು ಅಂಶಗಳನ್ನು ದಾಖಲಿಸಬಯಸುತ್ತೇನೆ.

04 April 2013

* ಡಂಕಿನ್ ಝಳಕಿ

ಇಂದಿನ ಪ್ರಜಾವಾಣಿಯಲ್ಲಿ (೦೪/೦೪/೨೦೧೩) ಎಂ.ಎಸ್. ಆಶಾದೇವಿಯವರು ಬರೆದ ವಚನ ಕುರಿತ ಚರ್ಚೆಯ ಬರಹಕ್ಕೆ ಇದು ನನ್ನ ಉತ್ತರ.

ನಮ್ಮ ಸಂಶೋಧನೆಯ ಕುರಿತು ಇವರು ಮಾಡುವ ಗುರುತರ ಆಪಾದನೆಯೆಂದರೆ, ಇದಕ್ಕೆ ವಚನಗಳ “ಜೀವಪರ ನಿಲುವು” ಕಾಣಿಸುವುದಿಲ್ಲ. ಏಕೆಂದರೆ ಈ ಸಂಶೋಧನೆಗೆ ಒಂದು “ವೈಧಾನಿಕತೆಯ ಕಣ್ಕಟ್ಟು” ಇದೆ. ಯಾವುದಿದು ವೈಧಾನಿಕತೆಯ ಕಣ್ಕಟ್ಟು? ಆಧ್ಯಾತ್ಮಿಕ ವಿಚಾರವನ್ನು ಅಕಾಡೆಮಿಕ್ ಅಧ್ಯಯನದಲ್ಲಿ ತರುವ ಪ್ರಯತ್ನವೇ ಈ ಕಣ್ಕಟ್ಟು ಅಥವಾ ಮಾಯೆ. ಮುಂದುವರೆಸಿ ಇವರು ಹೇಳುತ್ತಾರೆ, ಈ ಕುರುಡು ವೈಧಾನಿಕತೆಯು ಈ ಮುಂದಿನ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ: “ಆ ಆಧ್ಯಾತ್ಮಿಕ ಪರಂಪರೆಯ ಸ್ವರೂಪ ಮತ್ತು ವ್ಯಾಖ್ಯಾನ ಯಾವುದು?”

ಇವರ ಈ ಹೇಳಿಕೆಗಳನ್ನು ನಾನು ‘ಆಪಾದನೆ’ ಎಂದು ಯಾಕೆ ಹೇಳಿದೆನೆಂದರೆ ಇವರು ತಮ್ಮ ಈ ಹೇಳಿಕೆಗಳನ್ನು ಮುಂದೆ ಎಲ್ಲೂ ವಿವರಿಸುವುದೂ ಇಲ್ಲ, ಸಮರ್ಥನೆ ಮಾಡಿಕೊಳ್ಳುವುದೂ ಇಲ್ಲ. ಈ ಆಪಾದನೆಯ ನಂತರ ಇವರ ಲೇಖನ ಬೇರೆಡೆ ಹೊರಳುತ್ತದೆ. ತಮ್ಮ ಹೇಳಿಕೆಗಳನ್ನು ಇವರು ತಾವೇ ವಿವರಿಸದೆ ಹೋಗುವುದರಿಂದ ಅದನ್ನು ಅರ್ಥಮಾಡಿಕೊಳ್ಳುವುದು ಓದುಗನಿಗೆ ಬಿಟ್ಟ ಕೆಲಸ. ನನಗೆ ಇವರ ಕಷ್ಟದ ಭಾಷೆ ಅರ್ಥವಾದ ಮಟ್ಟಿಗೆ ಹೇಳುವುದಾದರೆ, ಯಾವುದೇ ಸಂಶೋಧನೆ ಮಾಡದೆ, ನೂರು ವರ್ಷಗಳಿಂದ ಹೇಳುತ್ತಾ ಬಂದಿರುವ ‘ವಚನಗಳು ಜಾತಿವಿರೋಧಿ’ ಎಂಬ ವಿಚಾರವನ್ನು ಒಪ್ಪಿಕೊಳ್ಳುವುದೇ ವಚನಗಳ ಜೀವಪರ ನಿಲುವನ್ನು ಗುರುತಿಸುವ ವೈಧಾನಿಕತೆ ಎಂದಾಯಿತು ಅಲ್ಲವೇ?

(ರಾಜರಾಮರು ತಮ್ಮ ಲೇಖನದಲ್ಲಿ ಕಲಬುರ್ಗಿಯ ಕುರಿತು ಹೇಳಿದ್ದು ಇದನ್ನೇ.) ವಚನಗಳಲ್ಲಿ ಜಾತಿ-ವಿರೋಧಿ ನಿಲುವನ್ನು ನಾವು ಹುಡುಕತೊಡಗಿದ್ದು ವಸಾಹತುಶಾಹಿ ಪ್ರಜ್ಞೆಯ ಪ್ರಭಾವದಡಿ ಎಂಬುದು ನಮ್ಮ ಸಂಶೋಧನೆ ಆಧಾರ ಸಮೇತ ತೋರಿಸುತ್ತದೆ. (ಇದನ್ನು ಈವರೆಗೂ ಆಶಾದೇವಿಯವರೂ ಸೇರಿದಂತೆ ಯಾರೂ ಆಧಾರ ಸಮೇತ ಅಲ್ಲಗಳೆದು ತೋರಿಸಿಲ್ಲ.) ಅಂದ ಮೇಲೆ, ವಚನಗಳಲ್ಲಿ ಇದೆ ಎಂದು ಆಶಾದೇವಿ, ಕಲಬುರ್ಗಿ ಮುಂತಾದವರು ಹೇಳುವ ಈ ಜೀವಪರ ನಿಲುವು ಅದಕ್ಕೆ ತುಂಬಿದ್ದು ವಸಾಹತುಷಾಹಿ ಚಿಂತಕರು ಮತ್ತು ಅವರಂತೆಯೇ ಯೋಚಿಸಲು ಕಲಿತ ‘ವಿದ್ಯಾವಂತರು’. ನಮ್ಮ ಸಂಶೋಧನೆಯ ತೊಂದರೆ ಎಂದರೆ ನಾವೂ ಇದನ್ನು ಪ್ರಶ್ನಿಸುತ್ತಿರುವುದು. (ಇದಕ್ಕೂ ಹೊರತಾಗಿ ಆಶಾದೇವಿಯವರು ಇನ್ನೇನಾದರೂ ಹೇಳುತ್ತಿದ್ದರೆ ಅವರು ಅದನ್ನು ವಿವರವಾಗಿ ಅರ್ಥವಾಗುವ ಕನ್ನಡದಲ್ಲಿ ಬರೆದು ತಿಳಿಸಲಿ.)

ಆಶಾದೇವಿಯವರು ಕೇಳುವ ಮತ್ತೊಂದು ಪ್ರಶ್ನೆ ಇದು: ಶಂಕರರನ್ನೂ ಬಸವನನ್ನೂ ಒಂದೇ ಪರಂಪರೆಯಲ್ಲಿಡಲು ಸಾಧ್ಯವೆ? … ವಿರಕ್ತಮಠಗಳಲ್ಲಿರುವ ಮುಕ್ತತೆ ಶಂಕರಮಠಗಳಲ್ಲಿದೆಯೆ? ಇಲ್ಲಿ ಈ ಪ್ರಶ್ನೆಯ ಪ್ರಸ್ತುತತೆ ಏನೆಂದರೆ, “ವಿರಕ್ತ ಮಠಗಳ ಮುಕ್ತತೆಯ ಹಿಂದೆ ಕೆಲಸ ಮಾಡಿರುವುದು ಜಾತಿವಿನಾಶದ ಗುರಿ” ಎಂಬ ಅವರ ನಂಬಿಕೆ. ಮುಂದುವರೆಸಿ ಹೇಳುತ್ತಾರೆ, ಇದನ್ನು ವಚನಗಳ ಸಂಖ್ಯೆಯ ಆಧಾರದ ಮೇಲೆ ಅಲ್ಲಗಳೆಯಲು ಆಗುವುದಿಲ್ಲ. ಅಷ್ಟೇ ಅಲ್ಲ, “ಮಂಟೆಸ್ವಾಮಿಯಂತಹವರು ರೂಪುಗೊಳ್ಳುವ ಪರಂಪರೆಯನ್ನೂ ಅಂಥ ಸಾಧ್ಯತೆಯನ್ನೇ ಹತ್ತಿಕ್ಕುವ ವೈದಿಕ ಪರಂಪರೆಯನ್ನೂ ಸಮಾನ ಪಾತಳಿಯಲ್ಲಿಡಲು ಸಾಧ್ಯವಿಲ್ಲ. ಇಂಥ ಸಾಧ್ಯತೆಯ ಪ್ರತಿಪಾದನೆಯೇ ಈ ತಥಾಕಥಿತ `ಒಳ್ಳೆಯ ಸಂಶೋಧನೆಯ’ ಬಗ್ಗೆ ಅನುಮಾನಗಳನ್ನು ವಿದ್ವಾಂಸರಲ್ಲಿ ಮಾತ್ರವಲ್ಲ ಹುಲುಮಾನವರಲ್ಲೂ ಹುಟ್ಟಿಸುತ್ತದೆ.” ಈ ವಾದದಲ್ಲಿನ ತೊಂದರೆ ಎಂದರೆ, ನಾವು ಸಂಶೋಧನೆ ಮಾಡ ಹೊರಟಿದ್ದು ಮಠಗಳ ಕುರಿತು ಅಲ್ಲ, ಅವುಗಳ ಇತಿಹಾಸದ ಕುರಿತೂ ಅಲ್ಲ. ಮಠಗಳು ಮತ್ತು ಮಠಗಳ ಸ್ವಾಮೀಜಿಯವರು ಒಂದು ಜಾತಿ, ಪಂಥಕ್ಕೆ ಸೇರಿದ ವಿಧಿ ಆಚರಣೆಗಳನ್ನು ಅನುಷ್ಠಾನಕ್ಕೆ ತರುವ, ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಹೊತ್ತವರು. ಅವರ ಕುರಿತು ನಮಗೆ (ಆಧುನಿಕ ಜಗತ್ತು ತೋರಿಸುವ) ಯಾವ ಅಸಮಧಾನ, ಶಂಕೆಗಳು ಇಲ್ಲ. ನಮ್ಮ ವಾದವಿರುವುದು ವಚನ ಚಿಂತಕರ ಜೊತೆಗೆ. ಅಷ್ಟಕ್ಕೂ, “ವಿರಕ್ತ ಮಠಗಳ ಮುಕ್ತತೆಯ ಹಿಂದೆ ಕೆಲಸ ಮಾಡಿರುವುದು ಜಾತಿವಿನಾಶದ ಗುರಿ” ಎಂಬುದು ಆಶಾದೇವಿಯವರ ಹೇಳಿಕೆಯೇ ಹೊರತು ಸಂಶೋಧನೆ ಮಾಡಿ ತೋರಿಸಿದ ವಿಚಾರವಲ್ಲ. ಅಂತೆಯೇ, ಶಂಕರಮಠಗಳು ಕರೆದು ಯಾರಿಗೋ ಊಟ ಹಾಕಿಲ್ಲ ಅಥವಾ ಇನ್ಯಾರಿಗೋ ಒಂದೇ ಪಂಕ್ತಿಯಲ್ಲಿ ಕೂರಿಸಿಲ್ಲ ಎಂದ ಮಾತ್ರಕ್ಕೆ ಅವು ಮುಕ್ತವಲ್ಲ ಎಂದು ವಾದಿಸುವುದು ಹೇಗೆ ಸಾಧು? ಸಾಹಿತ್ಯದ, ಸಂಶೋಧನೆಯ ವಿಚಾರ ಮಾತನಾಡುವಾಗ ಮಠಗಳ ವಿಚಾರ ತರುವುದು ಯಾಕೆ?

ಹೀಗೆ ತಪ್ಪು ದಾರಿ ಹಿಡಿಯುವ ಇವರ ವಾದ ಮುಂದೆ ನಮ್ಮ ಲೇಖನ ಮತ್ತು ಸಂಶೋಧನೆಗೆ ಸಂಬಂಧವಿರದ ವಿಚಾರಗಳ ಕುರಿತು ಭಾಷಣ ಮಾಡುತ್ತಾ ಹೋಗುತ್ತದೆ. ಕಡೆಗೊಮ್ಮೆ ಇದ್ದಕಿದ್ದಂತೆ “0.03 ವಚನಗಳಲ್ಲಿ ಮಾತ್ರ ಜಾತಿವಿರೋಧಿ ಮಾತುಗಳಿವೆ  ಎನ್ನುವುದು ತರ್ಕದ ಮಾತೂ ಅಲ್ಲ, ತಾತ್ವಿಕತೆಯ ನಿಲುವೂ ಆಗಲಾರದು” ಎಂದು ಘೋಷಿಸುತ್ತದೆ. ಏಕೆಂದರೆ ಹೀಗೆ “ಅಂಕಿ ಅಂಶಗಳ ಪುರಾವೆಗಳನ್ನೂ ಸಮರ್ಥನೆಯನ್ನೂ ಮೀರಿದ ಸಾವಯವ ಪುರಾವೆಗಳಿರುವಾಗ ಅವುಗಳಿಗೇ ಜೋತುಬೀಳುವುದು ಅವರ ವೈಧಾನಿಕತೆಯ ಮಿತಿ” ಮಾತ್ರ ಎಂದು ಸಾರುತ್ತದೆ. ಅಂಕಿಯ ಹಿಂದೆ ಹೋದರೆ ವಚನಗಳ ಜೀವದ್ವನಿ ಕೇಳಿಸುವುದಿಲ್ಲ ಎಂಬುದು ಇವರ ವಾದ. ಆದರೆ ಇದೊಂದು ಎಲ್ಲರೂ ಮತ್ತೆ ಮತ್ತೆ ಹೇಳುತ್ತಿರುವ, ಮತ್ತು ಯಾರೂ ಇದವರೆಗೂ ಯಾಕೆ ಮತ್ತು ಹೇಗೆ ಎಂದು ತೋರಿಸಿಕೊಡದ ವಿಚಾರ. ಅಷ್ಟಕ್ಕೂ, ಈ ಹಿಂದೆಯೇ ತೋರಿಸಿದಂತೆ, ಇವರು ಯಾವುದನ್ನು ವಚನಗಳ ‘ಜೀವಪರ ನಿಲುವು’ ಎನ್ನುತ್ತಾರೋ ಅದು ೧೯ನೆ ಶತಮಾನದದಿಂದ ಈಚೆಗೆ ನಾವು ಹೇಳಲು ಕಲಿತ ವಿಚಾರ. ಬಸವಣ್ಣ ಮತ್ತು ಇತರ ವಚನಕಾರರನ್ನು, ವಚನಗಳನ್ನು ಜಾತಿ-ವಿರೋಧಿ ಎಂದು ಹರಿಹರ, ಚಾಮರಸ ಮುಂತಾದ ಯಾವ ಕವಿಯೂ ಹೇಳುವುದಿಲ್ಲ. ಅಂದರೆ ನಮ್ಮ ಸಂಶೋಧನೆ ಈ ಮಹಾ ಕವಿಗಳ ಸಾಲಿಗೆ ಸೇರಿತು ಎಂದಾಗುತ್ತದೆ. ಇದು ನಮಗೊಂದು ಹೆಮ್ಮೆಯ ವಿಚಾರವೇ.

ಈ ಎರಡು ಹೇಳಿಕೆಗಳ ನಂತರ ಇವರ ಲೇಖನ ಮತ್ತೆ ನಮ್ಮ ಸಂಶೋಧನೆ ಮತ್ತು ಲೇಖನಕ್ಕೆ ಸಂಬಂಧ ಪಡದ ವಿಚಾರದತ್ತ ಹೊರಳಿ ಆಧಾರವಿಲ್ಲದ ಬರಿಯ ಭಾಷಣದ ರೂಪ ತಾಳುತ್ತದೆ. ಅದಕ್ಕೆ ಸಂಶೋಧನೆಯ ಸಭ್ಯತೆಯ ಮಿತಿಯಲ್ಲಿ (ಅಂದರೆ ಆಪಾದನೆಗಳನ್ನು ಮಾಡದೆ) ಉತ್ತರಿಸುವುದು ಸಾಧ್ಯವಿಲ್ಲದ ಮಾತು.
* ಎಂ.ಎಸ್‌ ಆಶಾದೇವಿ

ಕನ್ನಡ ಸಂಸ್ಕೃತಿಗೆ ಒಳ್ಳೆಯ ಹೆಸರು ಬರಲೆಂದೇ ವಚನಗಳು ಜಾತಿವಿರೋಧಿ  ಎನ್ನುವ ಪ್ರತಿಪಾದನೆಯನ್ನು ಪ್ರೊ ಎಂ. ಎಂ. ಕಲ್ಬುರ್ಗಿಯವರು ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಇದನ್ನು ವಿರೋಧಿಸುವ ಮತ್ತು  ನಿರಾಕರಿಸುವ ಡಾ. ರಾಜಾರಾಮ ಹೆಗಡೆಯವರ ಚರ್ಚೆಯಲ್ಲಿ  ಕೆಲವು ಸಂಗತಿಗಳಿವೆ.

1. `ಒಳ್ಳೆಯ ಸಂಶೋಧನೆ' ಮಾಡಬೇಕೆನ್ನುವುದು.
2. ಜಾಗತಿಕವಾಗಿ ಕನ್ನಡದ ಸ್ಥಾನಮಾನ ಹೆಚ್ಚಿಸುವುದು.
3 ಯಾವುದೇ  ಐಡಿಯಾಲಜಿಯನ್ನು ಸಮರ್ಥಿಸದೇ ಇರುವುದು.

ಈ ಎಲ್ಲದಕ್ಕೂ ಮೂಲವಾಗಿ ಅವರು ಇತಿಹಾಸವನ್ನೂ, ಇತಿಹಾಸ ರಚನೆಗೆ ಆಧಾರವಾಗಿರುವ ಸಾಹಿತ್ಯವನ್ನೂ ಬಳಸಿಕೊಳ್ಳುತ್ತಿರುವುದಾಗಿ ತಿಳಿಸುತ್ತಾರೆ. ಇವರು ನಂಬಿರುವಂತೆ ಪ್ರೊಟೆಸ್ಟಂಟ್ ಪೂರ್ವಗ್ರಹಗಳಿಂದ ರಚಿಸಲ್ಪಟ್ಟ ವಚನಸಾಹಿತ್ಯವನ್ನು ಈಗ ಮರುಓದಿಗೆ ಒಳಪಡಿಸಿ ಸರಿಯಾದ ಇತಿಹಾಸ ರಚನೆಗೆ ಬುನಾದಿ ಹಾಕಬೇಕೆನ್ನುವುದು ಇವರ ಒತ್ತಾಸೆ.

ಈ ಕಾರ್ಯಕ್ಕೆ ಇವರು ಆಶ್ರಯಿಸಿರುವ ವೈಧಾನಿಕತೆ ಯಾವುದು? ಪ್ರೊಟೆಸ್ಟಂಟ್ ಪೂರ್ವಗ್ರಹಗಳಿಂದ ವಚನಸಾಹಿತ್ಯವನ್ನು ಹೊರತಂದು  ಭಾರತೀಯ ಆಧ್ಯಾತ್ಮಿಕ ಪರಂಪರೆಯ ಅಖಂಡತೆಯಲ್ಲಿ ಇಡುವುದು ಮತ್ತು ಹೀಗೆ ಮಾಡಿದಾಗ ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನೂ, ವಚನ ಚಳವಳಿಯನ್ನೂ  ಜಾತಿ ಆಧರಿತ ವಿಭಜನೆಯಿಂದ ಪಾರುಮಾಡುವುದು ಸಾಧ್ಯವಾಗುತ್ತದೆ ಎನ್ನುವ ನಂಬಿಕೆ ಮತ್ತು ಗುರಿ.

ಇವರ ಅಧ್ಯಯನವು ಮೂಲತಃ ಇತಿಹಾಸ ಮತ್ತು ಸಾಹಿತ್ಯಗಳ ಅಂತರ್‌ಶಿಸ್ತೀಯ ಮತ್ತು ಅಂತರ್ ಪಠ್ಯೀಯ ಓದಿನ ಪ್ರಯತ್ನ. ಆದರೆ ಈ ತಾತ್ವಿಕ  ಪರಿವೇಷದಲ್ಲಿಯೂ ಈ ವೈಧಾನಿಕತೆಯು ಇನ್ನೊಂದು ಆಯಾಮವನ್ನು ತನ್ನೊಳಗೆ ಸೇರಿಸಿಕೊಂಡಿದೆ. ಅದೆಂದರೆ ಆಧ್ಯಾತ್ಮಿಕ ಪರಿಭಾಷೆ. ಆಧ್ಯಾತ್ಮಿಕ ಪರಿಭಾಷೆಯನ್ನು ಅದರೆಲ್ಲ ಅಮೂರ್ತ ವಿವರಗಳಲ್ಲಿ ಬಳಸಿಕೊಳ್ಳುವುದರ ಮೂಲಕವೇ ಇದೊಂದು ಅಕಾಡೆಮಿಕ್ ಅಧ್ಯಯನವೆನ್ನುವ ಕಣ್ಕಟ್ಟನ್ನು ಅಥವಾ ಮಾಯೆಯನ್ನು ಈ ಸ್ವಘೋಷಿತ `ಒಳ್ಳೆಯ ಸಂಶೋಧನೆ' ಸೃಷ್ಟಿಸುತ್ತಿದೆ.

ಯಾವ ಭಾರತೀಯ ಆಧ್ಯಾತ್ಮಿಕತೆಯ ಭಿತ್ತಿಯ್ಲ್ಲಲಿ ಇಡುವ ಮೂಲಕವೇ ತಮ್ಮ ತಾತ್ವಿಕತೆಯನ್ನು ಬೆಳೆಸಲು ಇವರು ಪ್ರಯತ್ನಿಸುತ್ತಿದ್ದಾರೋ ಆ ಆಧ್ಯಾತ್ಮಿಕ ಪರಂಪರೆಯ ಸ್ವರೂಪ ಮತ್ತು ವ್ಯಾಖ್ಯಾನ ಯಾವುದು? ಭಾರತೀಯ ಇತಿಹಾಸ ಮತ್ತು ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಚರ್ಚಿಸುವಾಗ ಆಧ್ಯಾತ್ಮಿಕ ಪರಂಪರೆಯನ್ನು ಹಲವು ಪಾತಳಿಗಳಲ್ಲಿಟ್ಟು ನೋಡಬೇಕಾದ್ದು ಅನಿವಾರ್ಯ. ಶಂಕರರನ್ನೂ ಬಸವನನ್ನೂ ಒಂದೇ ಪರಂಪರೆಯಲ್ಲಿಡಲು ಸಾಧ್ಯವೆ? ಈ ಪರಿಕಲ್ಪನೆಯೇ ಹಲವು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ.

ವಿರಕ್ತಮಠಗಳಲ್ಲಿರುವ ಮುಕ್ತತೆ ಶಂಕರಮಠಗಳಲ್ಲಿದೆಯೆ? ವಿರಕ್ತ ಮಠಗಳ ಮುಕ್ತತೆಯ ಹಿಂದೆ ಕೆಲಸ ಮಾಡಿರುವುದು ಜಾತಿವಿನಾಶದ ಗುರಿಯೇ ಎನ್ನುವುದನ್ನು ವಚನಗಳ ಸಂಖ್ಯೆಯ ಆಧಾರದ ಮೇಲೆ ಅಲ್ಲಗಳೆಯುವುದನ್ನು ಸಂಶೋಧನೆ ಎಂದು ಒಪ್ಪಿಕೊಳ್ಳುವುದು ಹೇಗೆ? ಮಂಟೆಸ್ವಾಮಿಯಂತಹವರು ರೂಪುಗೊಳ್ಳುವ ಪರಂಪರೆಯನ್ನೂ ಅಂಥ ಸಾಧ್ಯತೆಯನ್ನೇ ಹತ್ತಿಕ್ಕುವ ವೈದಿಕ ಪರಂಪರೆಯನ್ನೂ ಸಮಾನ ಪಾತಳಿಯಲ್ಲಿಡಲು ಸಾಧ್ಯವಿಲ್ಲ. ಇಂಥ ಸಾಧ್ಯತೆಯ ಪ್ರತಿಪಾದನೆಯೇ ಈ ತಥಾಕಥಿತ `ಒಳ್ಳೆಯ ಸಂಶೋಧನೆಯ' ಬಗ್ಗೆ ಅನುಮಾನಗಳನ್ನು ವಿದ್ವಾಂಸರಲ್ಲಿ ಮಾತ್ರವಲ್ಲ ಹುಲುಮಾನವರಲ್ಲೂ ಹುಟ್ಟಿಸುತ್ತದೆ.

ಆತ್ಮಜ್ಞಾನಕ್ಕೆ ಅಡ್ಡಿ ಎಂದು ಇವರು ಗುರುತಿಸುವ ಯಾವೆಲ್ಲ ಅಂಶಗಳಿವೆಯೋ ಅವೆಲ್ಲವೂ ...ಜಾತಿ, ಅಂತಸ್ತು, ಐಶ್ವರ್ಯ ಇತ್ಯಾದಿಗಳು ....ಇವೆಲ್ಲದರ ವಿರುದ್ಧ ನಡೆಸುವ ಹೋರಾಟಗಳು. ಬಸವನೂ ಸೇರಿದಂತೆ ಇಡೀ ವಚನ ಚಳವಳಿ ವ್ಯಕ್ತಿ ಮತ್ತು ಸಮುದಾಯದ ಡಂಭಾಚಾರದ ವಿರುದ್ಧ ಮತ್ತು ಮುಕ್ತಿಯ ಹಾದಿಯಲ್ಲಿನ ಉಪಾಧಿಗಳ ವಿರುದ್ಧ ನಡೆಸುವ ಹೋರಾಟವೆಂದೇ ತಿಳಿಯೋಣ. ಹೀಗಿದ್ದೂ ವಚನಗಳು ವ್ಯಕ್ತಿಯ ಅಥವಾ ಭಕ್ತನ ಅಂತರಂಗದ ಮಾತ್ರವಲ್ಲ ಬಹಿರಂಗದ  ಮತ್ತು ವ್ಯಕ್ತಿಯ ಮಾತ್ರವಲ್ಲ ಸಮುದಾಯದ ತಲ್ಲಣಗಳಾಗಿ ವಿಸ್ತಾರವನ್ನು ಪಡೆದದ್ದು ಹೇಗೆ ಮತ್ತು ಏಕೆ? ಇದಕ್ಕೆ ಎರಡು ಕಾರಣಗಳನ್ನು ಗುರುತಿಸಬಹುದು.

ಒಂದು, ಯಾವ ತರತಮಗಳು ಭಕ್ತನ ದಾರಿಯಲ್ಲಿನ ಅಡ್ಡಿಗಳಾಗಿದ್ದವೋ ಅವು ಆ ಕಾಲದ ಸಾಮಾಜಿಕ ಮತ್ತು ರಾಜಕೀಯ ತರತಮಗಳೂ ಆಗಿದ್ದವು. ಎಂತಲೇ ಅವು ಏಕಕಾಲಕ್ಕೆ ಭಕ್ತನು ಎದುರಿಸಬೇಕಾದ ಉಪಾಧಿಗಳೂ ಭವಿಯು ಎದುರಿಸಬೇಕಾದ ಉಪಾಧಿಗಳೂ ಆಗಿದ್ದವು. ಇವುಗಳ ಅಖಂಡತೆಯನ್ನು ಸಂಶೋಧನೆಗಳಾಗಲೀ, ಇತಿಹಾಸವನ್ನು ಸರಿಪಡಿಸುವ ದೃಷ್ಟಿಕೋನಗಳಾಗಲೀ ಬದಲಿಸುವುದು ಶಕ್ಯವಿಲ್ಲ.

ಏಕೆಂದರೆ ಸಂಶೋಧನೆಯೆನ್ನುವುದು ವಿವರಗಳನ್ನು ಕುರಿತ ನಮ್ಮ ದೃಷ್ಟಿಕೋನದ ಪಲ್ಲಟಕ್ಕೆ ಅವಕಾಶ ಮಾಡಿಕೊಡುತ್ತದೆಯೇ ಹೊರತು ವಿವರಗಳನ್ನೇ ಇಲ್ಲವಾಗಿಸುವುದಕ್ಕಲ್ಲ. ಎರಡನೆಯದು ಕಲಾಮೀಮಾಂಸೆಯ ಪ್ರಶ್ನೆ. ಅನುಭವದ ಪ್ರಾಮಾಣಿಕತೆಯು ಅಭಿವ್ಯಕ್ತಿಯ ತೀವ್ರತೆಯಲ್ಲಿ ಬೆರೆತಾಗ ಹುಟ್ಟುವ ಅಪ್ಪಟ ಕಾವ್ಯವು ಮನುಷ್ಯ ನಾಗರಿಕತೆಯಲ್ಲಿ ಅದರ ಸೌಂದರ್ಯಕ್ಕಾಗಿ ಮಾತ್ರವಲ್ಲ ಆತ್ಯಂತಿಕ ಸತ್ಯಕ್ಕಾಗಿಯೂ ಸ್ಥಾಪಿತವಾಗಿದೆ.  ವ್ಯಕ್ತಿಯ ನೆಲೆಯನ್ನು ಮೀರಿ ಸಾಧಾರಣೀಕರಣದ ನೆಲೆಯನ್ನು ತಲುಪುವುದೇ  ಕಲೆಯ ಮಾಂತ್ರಿಕ ಶಕ್ತಿ. ಕಲೆಯ ಮತ್ತು ಸಾಹಿತ್ಯ ರಚನೆಯ  ಘೋಷಿತ ಉದ್ದೇಶವಿಲ್ಲದೆಯೂ ಸೃಷ್ಟಿಯಾದ ಈ ವಚನಗಳು ಕನ್ನಡ ಸಮುದಾಯದ ಸಂವೇದನೆಯ ಅಭಿನ್ನ ಭಾಗವೇ ಆಗಿಬಿಟ್ಟಿವೆ. ಇದಕ್ಕೆ ವಚನಗಳ ಕಾವ್ಯಗುಣವೆಷ್ಟೋ ಅಷ್ಟೇ ಇವುಗಳ ಕಾಲಸ್ಪರ್ಶದ ಅಥವಾ ತನ್ನ ಕಾಲಕ್ಕೆ ಮಿಡಿಯುವ ಗುಣವೂ ಕಾರಣ.

ಇದನ್ನು ಅರಿಯುವುದಕ್ಕೆ ಬೌದ್ಧಿಕ ನಿಲುವು ಮಾತ್ರವಲ್ಲ ಸಾಹಿತ್ಯಕ ಸಂವೇದನೆಯೂ ಅವಶ್ಯವಾಗಿ ಬೇಕಾಗುತ್ತದೆ. ರಾಜಾರಾಮ ಹೆಗಡೆಯವರು ಅನಿವಾರ್ಯವೆಂದು ಗುರುತಿಸುವ, ವಚನಗಳ ಧ್ವನಿಯನ್ನು ಗುರುತಿಸಬೇಕೆನ್ನುವ ವಾಕ್ಯವು ವಾಸ್ತವವಾಗಿ ಕಾವ್ಯದ ಮೂಲಗುಣಗಳಲ್ಲೊಂದಾಗಿದೆ. ಧ್ವನಿಯೇ ಕಾವ್ಯದ ಆತ್ಮ ಎನ್ನುವುದು ಸಾರ್ವತ್ರಿಕವಾದ ಮತ್ತು ಸಾರ್ವಕಾಲಿಕವಾದ ಸತ್ಯ. ಸಾಹಿತ್ಯವನ್ನು ತಮ್ಮ ಸಂಶೋಧನೆಯ ಆಕರವಾಗಿ ಬಳಸಿಕೊಳ್ಳಬೇಕೆನ್ನುವವರು ಅದರ ಮೂಲಗುಣವನ್ನು ಒಪ್ಪಿಕೊಳ್ಳಬೇಕಾದ್ದು ಆಯ್ಕೆಯಲ್ಲ ಅನಿವಾರ್ಯ.

ಯಾವ ಕ್ರಾಂತಿಯೂ ಘಟಿಸುವುದು ಜನಮಾನಸ ಅದಕ್ಕೆ ಸಿದ್ಧವಾದಾಗಲೇ. ಕನ್ನಡದ ಜನಮಾನಸ ಅಂಥದ್ದೊಂದಕ್ಕೆ ಸಜ್ಜಾಗಿತ್ತೆಂದೇ ಅದೊಂದು ಚಳವಳಿಯಾಗಿ ರೂಪುಗೊಂಡಿತು. ಅದೊಂದು ಸುಸಜ್ಜಿತವಾದ ಚಳವಳಿಯಲ್ಲ ಎನ್ನುವುದು ಚಳವಳಿ ಮತ್ತು ಜನಪರ ಹೋರಾಟಗಳೆರಡಕ್ಕೂ ಬಗೆಯುವ ಅನ್ಯಾಯವೇ. ಜಾತಿಯೂ ಸೇರಿದಂತೆ ಇತರ ಹಲವು ಶ್ರೇಣೀಕರಣಗಳ ವಿರೋಧಿ ನಿಲುವಿನ ಫಲಿತವಾಗಿ ಮೂಡಿ ಬಂದ ಇತರ ಕೆಳಜಾತಿಗಳ ವಚನಕಾರರೇ ಇದಕ್ಕಿರುವ ಬಹು ಮುಖ್ಯ ಪುರಾವೆ.

ದೀಪದಿಂದ ದೀಪ ಹತ್ತುವಂತೆ, ಎಲ್ಲ ಕಟ್ಟುಗಳನ್ನು ಹರಿದಂತೆ ಆ ತನಕ ಅಭಿವ್ಯಕ್ತಿಯ ಅವಕಾಶವೇ ಇಲ್ಲದವರ  ಮತ್ತು ಈ ಅವಕಾಶ ಅಲಭ್ಯವಾಗಿದ್ದು ಅವರ ಜಾತಿಯ ಕಾರಣಕ್ಕೇ ಎನ್ನುವುದಕ್ಕೆ ಪ್ರೊಟೆಸ್ಟಂಟ್‌ರ ಪೂರ್ವಗ್ರಹಗಳನ್ನು ಮೀರಿದ ಪುರಾವೆಗಳು ಒಳ್ಳೆಯ ಸಂಶೋಧಕರಿಗೆ ಖಂಡಿತವಾಗಿಯೂ ಸಿಗುತ್ತವೆ. ಅಭಿವ್ಯಕ್ತಿಯು ಇಂದಿಗೂ ಅಪ್ಪಟ ಕಾವ್ಯವಾಗಿರುವುದಕ್ಕೆ ಒಂದು ಮುಖ್ಯ ಕಾರಣ ಶ್ರೇಣೀಕರಣದ ಕಾರಣಕ್ಕಾಗಿ ಅವಕಾಶ ವಂಚಿತರಾದವರಿಗೆ ಸಿಕ್ಕ `ಬದುಕಿನ' ಅವಕಾಶವೇ ಆಗಿದೆ.

ವಚನ ಚಳವಳಿಯ ನಿರ್ಣಾಯಕ ಸಾಧನೆಗಳಲ್ಲೊಂದು ಎಂದು ನಾವು ತಿಳಿಯುವ `ಕಾಯಕ ತತ್ವವು' ತಂದುಕೊಟ್ಟ ಬಿಡುಗಡೆಯ ಮತ್ತು ಆತ್ಮಘನತೆಯ ಮೂಲ ಯಾವುದೆನ್ನುವುದನ್ನು ಕುರಿತು ಸಂಶೋಧನೆ ನಡೆಸಿದರೆ ಸಿಗುವ ಉತ್ತರ ಜಾತಿಶ್ರೇಣೀಕರಣದ ವಿರುದ್ಧ ನಡೆಸಿದ ಹೋರಾಟದಿಂದ ಎಂದೇ. ಅಂಬಿಗರ ಚೌಡಯ್ಯನೂ, ಆಯ್ದಕ್ಕಿ ಲಕ್ಕಮ್ಮನೂ, ಸೂಳೆ ಸಂಕವ್ವೆಯೂ, ಸತ್ಯಕ್ಕನೂ, ಭಿಕಾರಿ ಭೀಮಯ್ಯನೂ, ಬಾಚಿಕಾಯಕದ ಬಸವಣ್ಣನೂ, ಮಡಿವಾಳ ಮಾಚಿದೇವನೂ ಸೃಷ್ಟಿಯಾದ ಪರಿಸರದ ಹಿಂದೆ ಜಾತಿವಿರೋಧಿ ನಿಲುವು ಇರಲಿಲ್ಲ.

ಏಕೆಂದರೆ 0.03 ವಚನಗಳಲ್ಲಿ ಮಾತ್ರ ಜಾತಿವಿರೋಧಿ ಮಾತುಗಳಿವೆ  ಎನ್ನುವುದು ತರ್ಕದ ಮಾತೂ ಅಲ್ಲ, ತಾತ್ವಿಕತೆಯ ನಿಲುವೂ ಆಗಲಾರದು. ಅಂಕಿ ಅಂಶಗಳ ಪುರಾವೆಗಳನ್ನೂ ಸಮರ್ಥನೆಯನ್ನೂ ಮೀರಿದ ಸಾವಯವ ಪುರಾವೆಗಳಿರುವಾಗ ಅವುಗಳಿಗೇ ಜೋತುಬೀಳುವುದು ಅವರ ವೈಧಾನಿಕತೆಯ ಮಿತಿಯನ್ನು ಮಾತ್ರ ಹೇಳುತ್ತದೆ.

ಇದಕ್ಕಿಂತ ಮಹತ್ವದ ಮಾತೆಂದರೆ, 12ನೆಯ ಶತಮಾನದಿಂದಲೂ ಕನ್ನಡ ಸಮುದಾಯವು ವಚನ ಚಳವಳಿಯ ಜೊತೆ ಜೀವಕೊರಳ ಸಂಬಂಧವೊಂದನ್ನು ಕಟ್ಟಿಕೊಂಡೇ ಬಂದಿದೆ. ವಚನ ಚಳವಳಿಯ ನಂತರದ ಮುಖ್ಯ ಕವಿಗಳು ಇವರಿಂದ ಪ್ರಭಾವಿತರಾಗಿದ್ದಾರೆ. ಸಾಹಿತ್ಯವು ಆ ಯುಗದ ಅವಶ್ಯಕತೆಯ ಧ್ವನಿಯಾಗಿರುತ್ತದೆ ಎನ್ನುವ ಮಾತಿಗೆ ಪರಿಪೂರ್ಣ ಉದಾಹರಣೆಯಂತಿರುವ ವಚನ ಸಾಹಿತ್ಯವನ್ನು ಅದರ ಆತ್ಮದಂತಿರುವ  ವ್ಯಕ್ತಿ ಮತ್ತು ಸಮುದಾಯದ ಸಮಾನ ಪಾತಳಿಯ ನಿರ್ಮಾಣದ ಆಶಯದಿಂದ ಬಿಡಿಸಿ ಅಮೂರ್ತ ಆವರಣದೊಳಗೆ ಸ್ಥಾಪಿಸಬೇಕೆನ್ನುವುದು ಒಳ್ಳೆಯ ಸಂಶೋಧನೆಗಿಂತ ಹೆಚ್ಚಾಗಿ   ಅಜೆಂಡಾವೊಂದರ ಪ್ರಣಾಳಿಕೆಯಂತೆ ಕಾಣಿಸುತ್ತದೆ.

ಹಾಗೆಯೇ ನಾವು ಗಮನಿಸಲೇ ಬೇಕಾದ ಇನ್ನೊಂದು ಸಂಗತಿಯೆಂದರೆ ವಚನ ಸಾಹಿತ್ಯವನ್ನು ಓದುವ ಹಲವು ದಾರಿಗಳನ್ನು ಕಟ್ಟಿಕೊಳ್ಳಲಾಗಿದೆ ಎನ್ನುವುದು. ಫ.ಗು.ಹಳಕಟ್ಟಿಯವರೂ ಸೇರಿದಂತೆ ಎಲ್. ಬಸವರಾಜು, ಎಂ. ಎಂ. ಕಲ್ಬುರ್ಗಿ ಅವರ ತನಕ ಹಲವು ಓದಿನ ದಾರಿಗಳನ್ನು ಯಶಸ್ವಿಯಾಗಿ ಬಳಸಲಾಗಿದೆ.ಉದಾಹರಣೆಗೆ ಷಟ್‌ಸ್ಥಲಗಳ ಆಧಾರದ ಮೇಲೆ ವಚನಗಳನ್ನು ಅರ್ಥೈಸುವುದು  ಉಪಯುಕ್ತವಾದ ಓದಿನ ಮಾರ್ಗವೆಂದೇ ಈಗಲೂ ತಿಳಿಯಲಾಗಿದೆ. ವಚನ ಚಳವಳಿಯ ಭಕ್ತಿ ಮತ್ತು ಸಾಮಾಜಿಕ ನಿಲುವುಗಳನ್ನು ಸ್ವಾಯತ್ತ ಎನ್ನಬಹುದಾದ ನೆಲೆಯಲ್ಲಿ ಆದರೆ ಖಂಡಿತವಾಗಿಯೂ ಖಚಿತವಾದ ಐಡಿಯಾಲಜಿಯ ನೆಲೆಯಲ್ಲಿ ನಾವು ಚರ್ಚಿಸಬಹುದು. ಪ್ರೊಟೆಸ್ಟಂಟ್  ಪೂರ್ವಗ್ರಹವಿಲ್ಲದೆಯೂ !

ಇನ್ನು ಜಾಗತಿಕವಾಗಿ ಕನ್ನಡದ ಸ್ಥಾನಮಾನದ ಪ್ರಶ್ನೆ. ಇವರು ಇದರ ಬಗ್ಗೆ ಯೋಚಿಸಬೇಕಾದ್ದು ತೀರಾ ಅನಿವಾರ್ಯ. ಏಕೆಂದರೆ ಇವರ `ಐಡಿಯಾಲಜಿ'ಯನ್ನು ಆಧರಿಸಿಲ್ಲದ, ಕಣ್ಣೆದುರಿಗಿನ ಮತ್ತು ಶತಮಾನಗಳ ಕಟುವಾಸ್ತವಕ್ಕೆ ಕುರುಡಾದ ಅಧ್ಯಯನಕ್ಕಾಗಲೀ, ಇತಿಹಾಸದ ಸರಿಯಾದ ಓದಿನ ಹೆಸರಿನಲ್ಲಿ ಇವರು ನಡೆಸುತ್ತಿರುವ ಜಾಗತಿಕ ಹುನ್ನಾರಗಳಿಗಾಗಲೀ ಚದುರರೂ ವಿವೇಕಿಗಳೂ ಆದ ಕನ್ನಡಿಗರು ಬಲಿಯಾಗಲಾರರು. ಅದೇನಿದ್ದರೂ ಇವರ ಮೂಲ ಗುರಿಯಾದ ಜಾಗತಿಕ ಓದುಗರ ಸವಲತ್ತು ! ಆದರೆ ಇದನ್ನು ಪ್ರಶ್ನಿಸಬೇಕಾದ್ದು ಮತ್ತು ನಿರಾಕರಿಸಬೇಕಾದ್ದು ಕನ್ನಡಿಗರ ಮೂಲಭೂತ ಹಕ್ಕೆಂದೇ ಈ ಚರ್ಚೆ ಆರಂಭಗೊಂಡಿದೆ.

ಸ್ಥಾವರಗೊಂಡಿದ್ದ, `ಸೀಮೆವಂತರ ಯುಕ್ತಿಯಾಗಿದ್ದ' ಸಾಮಾಜಿಕ ಸಂರಚನೆಯನ್ನೂ, ಆಧ್ಯಾತ್ಮಿಕ ಪರಂಪರೆಯನ್ನೂ ತನ್ನ ಜಂಗಮಶೀಲತೆಯ ಮೂಲಕವೇ ಅಂದು ಪ್ರಶ್ನಿಸಿದ, ಇಂದೂ ಪ್ರಶ್ನಿಸಲು ಅನುವು ಮಾಡಿಕೊಟ್ಟಿರುವ ವಚನಚಳವಳಿಯ ಜಾತಿವಿರೋಧಿ, ಜೀವಪರ ಮುಕ್ತ ನಿಲುವುಗಳನ್ನು ಯಾವ ವೈಧಾನಿಕತೆಯ ಕಣ್ಕಟ್ಟೂ ತಿರುಚಲಾರದು.

ಕೊನೆಯದಾಗಿ ಐಡಿಯಾಲಜಿಯ ಪ್ರಶ್ನೆ. ನನ್ನ ಅಲ್ಪ ತಿಳಿವಳಿಕೆಯಲ್ಲಿ ಯಾವ ಒಳ್ಳೆಯ (ಕೆಟ್ಟ) ಸಂಶೋಧನೆಯೂ ಒಂದು ಐಡಿಯಾಲಜಿಯನ್ನಿಟ್ಟುಕೊಂಡು ಹೊರಡುವುದು ತೀರ ಪ್ರಾಥಮಿಕ ಸಂಗತಿ. ಸ್ಥಾಪಿತವಾಗಿರುವ ಐಡಿಯಾಲಜಿಯ ಜೊತೆಗಿನ ಮುಖಾಮುಖಿಯೋ, ಹೊಸ ಐಡಿಯಾಲಜಿಯ ರಚನೆಯ ಪ್ರಯತ್ನಗಳೋ ಎಲ್ಲಾ ಸಂಶೋಧನೆಗಳಲ್ಲೂ ಸಾಮಾನ್ಯ ಸಂಗತಿ.

ಐಡಿಯಾಲಜಿಯನ್ನಿಟ್ಟುಕೊಂಡು ಚರ್ಚೆ ಮಾಡುವುದು ರಾಜಾರಾಮ ಹೆಗಡೆಯವರಿಗೆ ಬೇಡ ಎನಿಸುವುದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಅದು ಒಳ್ಳೆಯ ಸಂಶೋಧನೆಯಾಗುವುದಿಲ್ಲವೆಂದು ಮತ್ತು ಜಾಗತಿಕವಾಗಿ ಕನ್ನಡದ ಸ್ಥಾನಮಾನವನ್ನು ಹೆಚ್ಚಿಸುವುದಿಲ್ಲವೆಂದು. ಹಾಗಿದ್ದರೆ ನಾನ್ ಐಡಿಯಾಲಜಿಕಲ್ ವಾದವನ್ನು ಮಂಡಿಸುವುದು ಇವರ ಸಂಶೋಧನೆಯ  ಉದ್ದೇಶವೆ?

01 April 2013

* ಎಚ್‌.ಎಸ್ ಶಿವಪ್ರಕಾಶ್‌


ಇತ್ತೀಚೆಗೆ ಸಂಶೋಧಕ ವಿದ್ವಾಂಸರಾದ ಡಂಕಿನ್ ಝಳಕಿಯವರು ನನಗೆ ಎರಡು ಬರಹಗಳನ್ನು ಇಮೇಲ್ ಮೂಲಕ ಕಳಿಸಿದರು. ಮೊದಲನೆಯದು ಬಾಲಗಂಗಾಧರರ ಜೊತೆಗೆ ಅವರು ಬರೆದ `ವಚನಕಾರರು ಮತ್ತು ಜಾತಿ' ಕುರಿತ ಲೇಖನ. ಈ ವಿಷಯದಲ್ಲಿ  ತಾವು ಒಂದು ಮಹಾಪ್ರಬಂಧವನ್ನು ಬರೆದಿರುವುದಾಗಿಯೂ ನನಗೆ ತಿಳಿಸಿದ್ದರು.

ಅವರು ಕಳುಹಿಸಿದ ಮೊದಲ ಲೇಖನ ನನ್ನ ಆಸಕ್ತಿಯನ್ನು ಕೆರಳಿಸಿದ ಕಾರಣ ಅವರ ಮಹಾಪ್ರಬಂಧವನ್ನೂ ನನಗೆ ಕಳಿಸಬೇಕೆಂದು ಅವರಲ್ಲಿ ಮನವಿ ಮಾಡಿಕೊಂಡೆ. ಆ ಪ್ರಕಾರವಾಗಿ ಅವರು ನನಗದನ್ನು ಕಳಿಸಿ ಉಪಕಾರ ಮಾಡಿದ್ದಾರೆ. ಯಾಕೆಂದರೆ ಈ ಎರಡು ಬರಹಗಳು ನನ್ನನ್ನು ವಚನಕಾರರ ಬಗೆಗಿನ ತಿಳಿವಳಿಕೆಯ ಬಗ್ಗೆ ಮರುಚಿಂತನೆಗೆ ಪ್ರೇರೇಪಿಸಿವೆ.

ನಿಂತ ನೀರಾಗಿರುವ ಕನ್ನಡದ ವಿದ್ವತ್ ಪ್ರಪಂಚದಲ್ಲಿ ಪರ, ವಿರೋಧಿ ಹೇಳಿಕೆಗಳು, ಹುನ್ನಾರಗಳು ತಾಂಡವವಾಡುತ್ತಿದ್ದು ಅಸಹನೆಯ ಸಂಸ್ಕೃತಿ ಹರಡುತ್ತಿರುವ ಸನ್ನಿವೇಶದಲ್ಲಿ ಸಂಘರ್ಷಾತ್ಮಕತೆಯನ್ನು ಸಂವಾದಾತ್ಮಕ ಸಂಸ್ಕೃತಿಯನ್ನಾಗಿ ಮಾರ್ಪಡಿಸುವ ಜವಾಬುದಾರಿ ನಮ್ಮೆಲ್ಲರ ಮೇಲಿರುವುದರಿಂದ ವಚನಕಾರರ ಬಗ್ಗೆ ಡಂಕಿನ್‌ರಂಥ ವಿದ್ವಾಂಸರು ನೀಡಿರುವ ಸಿದ್ಧ ಸಂಪ್ರದಾಯ ವಿರೋಧಿ ನಿಲುವುಗಳನ್ನು, ವಿಚಾರಗಳನ್ನು ಮರುಚಿಂತನೆಯ ಪ್ರೇರಣೆಯಾಗಿ ನೋಡಬೇಕಾದ ಅಗತ್ಯವಿದೆ.

ಈ ಹಿಂದೆ ವಚನಪರಂಪರೆಯ ಬಗ್ಗೆ ಒಪ್ಪಿತವಾದ ವಿಚಾರಗಳಿಗೆ ಭಿನ್ನವಾದ ಸೃಜನಶೀಲ ಅಥವಾ ವೈಚಾರಿಕ ಅಭಿವ್ಯಕ್ತಿಗಳು ಬಂದಾಗ ತಮ್ಮ ಸ್ವೀಕೃತ ವಿಶ್ವಾಸಗಳನ್ನು ಅಲ್ಲಾಡಿಸಿದ ಕಾರಣದಿಂದ ಅಸಹನೆಯಿಂದ ಪ್ರತಿಕ್ರಿಯಿಸಿದ ಉದಾಹರಣೆಗಳು ನಮ್ಮ ಮುಂದಿವೆ. ನನ್ನ  `ಮಹಾಚೈತ್ರ' ದ ಬಗ್ಗೆ ನಾಡಿನಾದ್ಯಂತ ಬಿರುಗಾಳಿಯಂತೆ ಎರಡು ವರ್ಷಕಾಲ ಹಬ್ಬಿದ ವಿವಾದ ಇದಕ್ಕೊಂದು ಉದಾಹರಣೆ. ಇದೇ ರೀತಿ ಪಿ. ವಿ. ನಾರಾಯಣರ `ಧರ್ಮಕಾರಣ' ದ ಬಗ್ಗೆ, ಕಲ್ಬುರ್ಗಿಯವರ `ಮಾರ್ಗ'ದ ಬಗ್ಗೆ, ಬಂಜಗೆರೆ ಜಯಪ್ರಕಾಶರ `ಆನು ಹೊರಗಿನವನು' ಬಗ್ಗೆ ವಿವಾದಗಳೆದ್ದು ಕೆಲವು ಸಲ ಅಂಥಾ ಪುಸ್ತಕಗಳನ್ನು ಬ್ಯಾನ್ ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ನನ್ನ ಪ್ರಕಾರ ಅಸಹನೆಯ ಪ್ರತಿಕ್ರಿಯೆಗಳು ನಮ್ಮ ವೈಚಾರಿಕ ದೌರ್ಬಲ್ಯ ಮೂಲವಾದವು.

ಪ್ರಜಾಸತ್ತಾತ್ಮಕ ಸಂದರ್ಭದಲ್ಲಿ ನಮಗೊಪ್ಪಿತವಾಗದ ವಿಚಾರಗಳ ಬಗ್ಗೆ ಆರೋಗ್ಯಪೂರ್ಣ ಸಂವಾದ ನಡೆಯುವುದು ನಮ್ಮೆಲ್ಲರ ವೈಚಾರಿಕ ಬೆಳವಣಿಗೆಗೆ ಅಗತ್ಯ. ಅಂದ ಮಾತ್ರಕ್ಕೆ ಮೇಲೆ ಹೇಳಿದ ಕೃತಿಗಳ ತೀರ್ಮಾನಗಳನ್ನು ನಾವು ಒಪ್ಪಬೇಕೆಂದೂ ಅಲ್ಲ. ಪರಸ್ಪರ ಭಿನ್ನವಾದ ವಿಚಾರಗಳ ಕೂಡುಬಾಳು ವಿಚಾರಗಳ ವಿಕಾಸಕ್ಕೆ ಅಗತ್ಯ. ಸಂವಾದಗಳ ಸಂಸ್ಕೃತಿ ವಿಚಾರವಂತಿಕೆಯನ್ನು ಜಾಗೃತವಾಗಿರಿಸುತ್ತದೆ. ವಚನಗಳ ಬಗ್ಗೆ ನಮ್ಮ ಅಭಿಪ್ರಾಯಗಳೇನೇ ಇದ್ದರೂ ವಚನಗಳ ತಾಖತ್ತಿರುವುದು ಅವುಗಳ ಸಂವಾದಾತ್ಮಕತೆಯಲ್ಲೇ. ಆದ್ದರಿಂದಲೇ ಅವು ಇಂದಿಗೂ ಸಂವಾದಗಳನ್ನು ಹೊಸಹೊಸತಾಗಿ ಹುಟ್ಟುಹಾಕುತ್ತಿರುವುದು.

ವಿದ್ವತ್ಪೂರ್ಣವಾದ  ಗ್ರಂಥಋಣ, ವಿಪುಲವಾದ ಅಡಿಟಿಪ್ಪಣಿಗಳಿಂದ ತುಂಬಿರುವ ಝಳಕಿಯವರ ಅನುಮಾನ, ತೀರ್ಮಾನಗಳ ಜೊತೆಗೆ ಸಂವಾದಕ್ಕಿಳಿಯಬೇಕಾದವರು ನಾಡಿನ ಹಿರಿಯ ವಚನತಜ್ಞರಾದ ಚಿದಾನಂದಮೂರ್ತಿ, ಎಂ ಎಂ ಕಲ್ಬುರ್ಗಿ, ವಿದ್ಯಾಶಂಕರ್, ಮನಜ, ಕೆ ಜಿ ನಾಗರಾಜಪ್ಪ ಮುಂತಾದವರು.

ಝಳಕಿಯವರ ಮಹಾಪ್ರಬಂಧ ಎತ್ತಿರುವ ಪ್ರಶ್ನೆಗಳನ್ನು ಈ ಹಿಂದೆಯೇ ಪ್ರಸಿದ್ಧ ವಿದ್ವಾಂಸರಾದ ಬಾಲಗಂಗಾಧರ ಅವರು ಹಲವು ವೇದಿಕೆಗಳಲ್ಲಿ ಎತ್ತಿದ್ದಾರೆ. ಈ ಬಗ್ಗೆ ಅಸಮಾಧಾನವನ್ನು ಪಿಸುಮಾತುಗಳಲ್ಲಿ, ಬೈಗುಳಗಳಲ್ಲಿ ಹಲವು ಹಿರಿಯ ಕಿರಿಯ ವಿದ್ವಾಂಸರು ನನ್ನ ಮುಂದೆ ವ್ಯಕ್ತಪಡಿಸಿದ್ದಾರೆಯೇ ಹೊರತು ವಿದ್ವತ್ಪೂರ್ಣ ಚರ್ಚೆಗೆ ಇಳಿದಿಲ್ಲವೆನ್ನುವುದು ನಮ್ಮ ವಿದ್ವತ್ತಿನ ಕೊರತೆಯನ್ನು ಸಾರಿಹೇಳುತ್ತದೆ. ವಚನತಜ್ಞನಲ್ಲದೆ ಕೇವಲ ವಚನಕುತೂಹಲಿಯಾಗಿರುವ ನನ್ನಂಥವರು ಯಾಕೆ ಚರ್ಚೆಗಿಳಿಯಬೇಕು? ಪಂಡಿತರು ಮೌನವಾದಾಗ ನನ್ನಂಥ ಪಾಮರರು ಬಾಯಿದೆರೆಯಬೇಕಾಗುತ್ತದೆ.

ಇಡೀ ಇತಿಹಾಸದ ಮರುಚಿಂತನೆಯ ಭಾಗವಾಗಿರುವ ಬಾಲಗಂಗಾಧರ ಮತ್ತು ಝಳಕಿಯವರ ವಚನ ಕುರಿತ ವಿಮರ್ಶೆಯನ್ನು ಹೀಗೆ ಸಂಗ್ರಹಿಸಬಹುದೆಂದು ನನಗೆ ತೋರುತ್ತದೆ:

ವಚನಗಳು ಜಾತಿಪದ್ಧತಿ, ಬ್ರಾಹ್ಮಣವಿರೋಧಿ ಚಳವಳಿಯ ಅಭಿವ್ಯಕ್ತಿಗಳೆಂದು ಹೇಳಲು ವಚನಗಳಲ್ಲಿಯೇ ಆಧಾರವಿಲ್ಲ. ಯಾಕೆಂದರೆ ವೈದಿಕ ವಿರೋಧಿ, ಕೆಳಜಾತಿ ಪರ, ಸ್ತ್ರೀಪರ ಪುರೋಗಾಮಿ ಭಕ್ತಿ ಚಳವಳಿಗಳ ಅಂಗವಾಗಿ ಹನ್ನೆರಡನೆ ಶತಮಾನದಲ್ಲಿ ವಚನಚಳವಳಿಯೊಂದು ನಡೆಯಿತೆಂಬ ಗ್ರಹಿಕೆಯೇ ವಸಾಹತುಶಾಹಿ ಸಂದರ್ಭದಲ್ಲಿ ಆಧುನಿಕ ವೀರಶೈವ ಸಮುದಾಯದವರು ತಮ್ಮ ಮೇಲುಚಲನೆಗಾಗಿ ಕಲ್ಪಿಸಿಕೊಂಡ ಒಂದು ಮಿಥ್ಯ ಕಲ್ಪನೆ.

ವಚನಗಳಲ್ಲಿ ಎಲ್ಲವನ್ನೂ ಕಾಣುವ, ನಮ್ಮ ಯುಗದ ದಂದುಗಗಳಲ್ಲಿ ವಚನಗಳಲ್ಲಿ ಅಂತಿಮವಾದ ಪರಿಹಾರಗಳನ್ನರಸುವ ಪ್ರವೃತ್ತಿ ಹಲವು ವಚನಪಂಡಿತರಲ್ಲಿ ವ್ಯಾಪಕವಾಗಿದೆ. ಬಸವಣ್ಣನಲ್ಲಿ ಕಾರ್ಲ್‌ಮಾರ್ಕ್ಸ್‌ನನ್ನೂ, ಅಲ್ಲಮನಲ್ಲಿ ಡೆರಿಡಾದಿಗಳನ್ನೂ, ಅಕ್ಕನಲ್ಲಿ ಸ್ತ್ರೀವಾದವನ್ನೂ, ದಲಿತ ವಚನಕಾರರಲ್ಲಿ ಅಂಬೇಡ್ಕರರನ್ನೂ ಗುರುತಿಸುವ ಅಪ್ರಬುದ್ಧ ವಿದ್ವತ್ತಿಗೆ; ಹಲದನಿಗಳ ಸಂವಾದಾತ್ಮಕ ವಚನವಾಙ್ಮಯದಲ್ಲಿ ಆಖೈರಾದ ಸಿದ್ಧಾಂತ, ಸಂಹಿತೆ, ಸಂವಿಧಾನಗಳನ್ನಾರೋಪಿಸುವ ಆತುರದ ನಿರರ್ಥಕ ಪಾಂಡಿತ್ಯಕ್ಕೂ ಸವಾಲೆಸೆದಿರುವುದರಿಂದ ಬಾಲಗಂಗಾಧರ ಪ್ರೇರಿತ ಚಿಂತಕರು ನಿಜಕ್ಕೂ ಅಭಿನಂದನಾರ್ಹರು. ವಸಾಹತುಶಾಹಿ ಒತ್ತಡಗಳು ನಮ್ಮ ಸ್ವಂತ ಇತಿಹಾಸಗ್ರಹಣಕ್ರಮವನ್ನು ಸಂಕೀರ್ಣ ಬಗೆಗಳಲ್ಲಿ ಪ್ರಭಾವಿಸಿತೆನ್ನುವ ವಾದವನ್ನೂ ತಳ್ಳಿಹಾಕಲಾಗದು. ಈ ಬಗೆಗೆ ವಿಸ್ತಾರ ಚಚೆಗೆ ತೊಡಗದೆ ವಚನಕಾರರ ಕುರಿತ ಝಳಕಿಯವರ ತೀರ್ಮಾನಗಳನ್ನು ಕುರಿತ ನನ್ನ ನಮ್ರ ಪ್ರತಿಕ್ರಿಯೆಗಳನ್ನು ಮಾತ್ರ ಇಲ್ಲಿ ದಾಖಲಿಸುತ್ತೇನೆ.

ವಚನಕಾರರಿಗೆ ಜಾತಿನಿರ್ಮೂಲನದ ಕಾರ್ಯಪ್ರಣಾಳಿ ಮುಖ್ಯವಾಗಿತ್ತೆಂದು ನಾನೂ ವಾದಿಸುತ್ತಿಲ್ಲ. ಹಾಗೆ ಹೇಳಲು ಹಲವರು ಆಶ್ರಯಿಸಿರುವ ಹರಳಯ್ಯ-ಮಧುವಯ್ಯಗಳ ಮನೆತನಗಳ ಪ್ರತಿಲೋಮ ವಿವಾಹ ಪ್ರಸಂಗಕ್ಕೆ ಇತಿಹಾಸದಲ್ಲಾಗಲಿ, ವಚನಗಳಲ್ಲಾಗಲಿ ದಾಖಲೆಗಳಿಲ್ಲ. ವಚನಕಾರರ ಕುರಿತ ಶಿಷ್ಟ ಹಾಗೂ ಜನಪದ ಕಾವ್ಯಗಳಲ್ಲಿ ಈ ಘಟನೆಗೆ ಒತ್ತು ದೊರಕಿದ್ದು. ಆದರೆ ಮುಖ್ಯವಾದದ್ದು ವಚನಕಾರರು ಜಾತಿಯ ಪರ ಅಥವಾ ವಿರೋಧವಾಗಿದ್ದರೆ ಎಂಬ ಪ್ರಶ್ನೆ. ವಿರೋಧವಾಗಿರಲಿಲ್ಲ ಎಂಬುದಕ್ಕೆ ಝಳಕಿಯವರು ಒದಗಿಸಿರುವ ಮುಖ್ಯ ಆಧಾರ ವಚನಗಳಲ್ಲಿರುವ ಜಾತಿಸಂಬಂಧಿತ ವಚನಗಳ ಕುರಿತ ಅಂಕಿ-ಅಂಶ.

ಕಲ್ಬುರ್ಗಿಯವರ ಸಂಪಾದನೆಯ `ಸಮಗ್ರ ವಚನಸಂಪುಟ'ದಲ್ಲಿ ಸೇರ್ಪಡೆಯಾಗಿರುವ 20000ಕ್ಕೂ ಹೆಚ್ಚು ವಚನಗಳಲ್ಲಿ ಶೇಕಡಾ ಸುಮಾರು ಮೂರು ವಚನಗಳು ಜಾತಿವಿಷಯಕವಾಗಿಯೂ ಶೇಕಡಾ ಒಂದೂವರೆಯಷ್ಟು ವಚನಗಳು ಬ್ರಾಹ್ಮಣವಿಷಯಕವಾಗಿಯೂ ಇರುವುದರಿಂದ ಜಾತಿ ಮತ್ತು ಬ್ರಾಹ್ಮಣ ವಿರೋಧ ವಚನಕಾರರ ಮೂಲೋದ್ದೇಶವಾಗಿರಲು ಸಾಧ್ಯವಿಲ್ಲ ಎಂದು ಅವರು ವಾದಿಸುತ್ತಾರೆ. ಜೊತೆಗೆ ಜಾತಿ ಮತ್ತು ಬ್ರಾಹ್ಮಣರ ಪ್ರಸ್ತಾಪವಿರುವ ವಚನಗಳ ಇಂಗಿತ ಜಾತಿ ಶೋಷಣೆಯ ಅಥವಾ ಬಾಹ್ಮಣರ ಬಗೆಗಿನ ಟೀಕೆಯೆಂದು ಬಗೆಯಲಾರದೆಂದೂ ತರ್ಕಿಸಿದ್ದಾರೆ.

ಜಾತಿ ವಿರೋಧ ವಚನಕಾರರ ಏಕಮೇವ ಮಹದೋದ್ದೇಶವೆಂದು ಹೇಳಲಾಗದಿದ್ದರೂ ವಚನಕಾರರು ಜಾತಿಯ ಬಗ್ಗೆ ತಮ್ಮ ಸಿಟ್ಟು, ಅಸಮಾಧಾನ ಮತ್ತು ಕೊರಗುಗಳನ್ನು ಹೇಳಿದ್ದಾರೆಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ವಚನಗಳಲ್ಲಿ ತೋರಿಸಬಹುದು. ಅವುಗಳ ಸಂಖ್ಯೆ ವಿರಳವೆಂಬುದು ಅವುಗಳ ಪ್ರಾಮುಖ್ಯವನ್ನು ಕುಂದಿಸುವುದಿಲ್ಲ. ಅಥವಾ ವಚನಕಾರರು ಅಧಿಕ ಸಂಖ್ಯೆಯ ವಚನಗಳಲ್ಲಿ ಜಾತಿಜಗಳಕ್ಕೆ ತೊಡಗಿಲ್ಲವೆಂದ ಮಾತ್ರಕ್ಕೇ ಅವರಿಗೆ ಆ ಬಗ್ಗೆ ಕಾಳಜಿಯೇ ಇರಲಿಲ್ಲವೆನ್ನುವುದೂ ಸರಿಯಲ್ಲ.

ಈ ತೆರನ ವಾದವನ್ನು ಮುಂದುವರಿಸಿದರೆ ಹೀಗೆ ಹೇಳಿಬಿಡಬಹುದು:  ಅಡಿಗರ ಕಾವ್ಯದ್ಲ್ಲಲಿ ಕನ್ನಡವೆಂಬ ಪದ ಬಹಳ ಕಡಿಮೆ ಬರುವುದರಿಂದ ಅಡಿಗರು ಕನ್ನಡದ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ; ಅಥವಾ ಝಳಕಿಯವರ ಲೇಖನದಲ್ಲಿ ಸತ್ಯವೆಂಬ ಪದ ಬಂದಿರದ ಕಾರಣ ಅವರು ಸತ್ಯದ ಬಗ್ಗೆ ಯೋಚಿಸಿಯೇ ಇಲ್ಲ.  ಅಥವಾ ವಿತಂಡವಾದಕ್ಕಿಳಿಯಬೇಕೆಂದರೆ ಹೀಗೂ ಹೇಳಿಬಿಡಬಹುದು - ವಚನಕಾರರು ಜಾತಿ ಪರವಾಗಿಲ್ಲದ ಕಾರಣ ಜಾತಿಯ ಬಗ್ಗೆ ಹೆಚ್ಚು ಮಾತಾಡಿಲ್ಲ.

ಆದ್ದರಿಂದ ಜಾತಿ ಸಂಬಂಧಿತವಾದ ವಚನಗಳ ಸಂಖ್ಯೆಯ ಕೊರತೆ ವಚನಕಾರರು ಜಾತಿಯ ಬಗ್ಗೆ ಕಾಳಜಿ ವಹಿಸಲಿಲ್ಲವೆಂಬ ತೀರ್ಮಾನಕ್ಕೆ ಅಂತಿಮ ಪುರಾವೆಯೆಂಬ ಮಾತನ್ನು ಬದಿಗೊತ್ತಿ ವಚನಕಾರರು ಜಾತಿಯ ಬಗ್ಗೆ ತಳೆದ ನಿಲುವೇನೆಂಬುದರ ಕಡೆಗೆ ಗಮನ ಹರಿಸಿದಾಗ ನನಗೆ ಮೊದಲ ವಚನಕಾರ ಮಾದಾರ ಚನ್ನಯ್ಯನ ಈ ವಚನ ನೆನಪಾಗುತ್ತಿದೆ:

ನಡೆ - ನುಡಿ ಸಿದ್ಧಾಂತವಾದಲ್ಲಿ ಕುಲಹೊಲ ಸೂತಕವಿಲ್ಲ
ನುಡಿ ಲೇಸು ನಡೆ ಅಧಮವಾದಲ್ಲಿ ಅದೆ ಬಿಡುಗಡೆಯಿಲ್ಲದ ಹೊಲೆ
ಕಳಪಾರದ್ವಾರಂಗಳಲ್ಲಿ ಹೊಲಬನರಿಯದೆ
ಕೆಟ್ಟುನಡೆವುತ್ತ ಮತ್ತೆ ಕುಲಜರೆಂಬ ಒಡಲವರುಂಟೆ?
ಆಚಾರವೆ ಕುಲ, ಅನಾಚಾರವೆ ಹೊಲೆ
ಇಂತೀ ಉಭಯವ ತಿಳಿದರಿಯಬೇಕು
ಕೈ ಉಳಿಕತ್ತಿ ಅಡಿಗುಂಟೆಗಡಿಯಾಗ ಬೇಡ, ಅರಿ ನಿಜಾತ್ಮರಾಮರಾಮನಾ

ಕೆಲವು  ವೃತ್ತಿಗಳು ಮೇಲೆಂದೂ ಕೆಲವು ಕೀಳೆಂದೂ ನಂಬಿರುವ ಸಮಾಜದಲ್ಲಿ ಮೇಲುಕೀಳುಗಳನ್ನು ಹುಟ್ಟಿನಿಂದ ವೃತ್ತಿಯಿಂದ ಬೇರ್ಪಡಿಸಿ ಆಚಾರದವರೇ ಕುಲದಲ್ಲಿ ಶ್ರೇಷ್ಠರಾದವರಿಗಿಂತ ಮೇಲೆಂದು ಹೇಳುವುದಲ್ಲದೆ, ತನ್ನ ಕಸುಬಿನ ಸಂಕೇತಗಳಾದ ಕೈ ಉಳಿಗತ್ತಿ ಇತ್ಯಾದಿಗಳಿಗೆ ಅಡಿಯಾಳಾಗದೆ ಬಾಳಬೇಕೆಂದು ಚನ್ನಯ್ಯ ಹೇಳುತ್ತಿದ್ದಾನೆ. ಬಹುತೇಕ ಭಕ್ತಿ ಪಂಥಗಳವರಂತೆ ಶರಣರೂ ತಮ್ಮ ಪಂಥದಲ್ಲಿ ದೀಕ್ಷಿತರಾದವರನ್ನು ಸಮಾನರೆಂದು ಭಾವಿಸಿದ್ದಕ್ಕೆ ಇದೊಂದು ಉದಾಹರಣೆ. ಮೇಲು ಕೀಳಿನ ಸಮಾಜದಲ್ಲಿ ದೀಕ್ಷೆ ಮತ್ತು ಪಂಥದ ಆಚಾರಗಳ ಮೂಲಕ ಎಲ್ಲರೂ ಸಮಾನರೆಂದು ಹೇಳಿದ್ದು ಇಪ್ಪತ್ತನೇ ಶತಮಾನದ ಜಾತಿವಿನಾಶಕ ಪ್ರಣಾಳಿಕೆಯ ಹಿಂದುವರಿಕೆಯಲ್ಲ, ನಿಜ. ಆದರೆ ಒಪ್ಪಿತವಾದ ಶ್ರೇಣಿ ಕಲ್ಪನೆಗೆ ಇದು ವಿರುದ್ಧವಾಗಿದೆ. ಆದ್ದರಿಂದ ವಚನಕಾರರು ಜಾತಿಯ ಬಗ್ಗೆ ಏನೂ ಹೇಳಲಿಲ್ಲವೆಂದಾಗಲಿ ಅದನ್ನು ಒಪ್ಪಿದ್ದರೆಂದಾಗಲಿ ಹೇಳಲು ಬರುವುದಿಲ್ಲ. ಕೆಲವು ವಚನಗಳಲ್ಲಿ ವಚನಕಾರರು ಜಾತಿಸೂಚಕ ಪದಗಳನ್ನು ಬೈಗುಳವಾಗಿ ಬಳಸಿರುವುದು ನಿಜವಾದರೂ ಇದು ಅವರು ಬಳಸಿರುವ ಭಾಷೆಯಲ್ಲಡಗಿರುವ ದೋಷವೇ ಹೊರತು ಚಿಂತನೆಯ ಅಂಶವೆಂದು ಹೇಳಬರುವುದಿಲ್ಲ.

ಇಲ್ಲಿ  ಒಂದು ಆಕ್ಷೇಪಣೆ ಎತ್ತಬಹುದು. ಜಾತಿಗೆ ಬದಲಾಗಿ ಇ್ಲ್ಲಲಿ ಕುಲ ಪದ ಬಳಕೆಯಾಗಿದೆ, ಜಾತಿ ಬೇರೆ ಕುಲ ಬೇರೆ ಎಂದು. ಆದರೆ ಕನ್ನಡ ಭಾಷೆಯಲ್ಲಿ ಮತ್ತು ಸಾಹಿತ್ಯದಲ್ಲಿ ಕುಲ, ಜಾತಿ, ಮತ ಎಂಬ ಪದಗಳು ಬಹುತೇಕ ಸಮಾನಾರ್ಥಕವಾಗಿ ಬಳೆಕೆಯಾಗುತ್ತಾ ಬಂದಿವೆ. ಆದ್ದರಿಂದ 'ಕುಲವೇನೋ ಅವಂದಿರ ಕುಲವೇನೋ?' ಎಂದು ಬಸವಣ್ಣ ಕೇಳಿದಾಗ 'ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ?'ಎಂದು ಸರ್ವಜ್ಞ ನುಡಿದಾಗ 'ಕುಲಕುಲವುಲವೆಂದು ಹೊಡೆದಾಡದಿರೆ'ಂದು ಕನಕದಾಸ ಅರುಹಿದಾಗ ಅವರೆಲ್ಲರೂ ಸಾಮಾಜಿಕ ಅಸಮಾನತೆಯನ್ನೇ ನಿರ್ದೇಶಿಸಿದರೆಂಬುದು ಸ್ಪಷ್ಟ.

ಇನ್ನು ಝಳಕಿಯವರ ಇನ್ನೊಂದು ಮುಖ್ಯ ವಾದವನ್ನು ಸಂಕ್ಷಿಪ್ತವಾಗಿ ಚರ್ಚಿಸಬಹುದು. ವಚನಗಳು ಜಾತಿವಿರೋಧಿಯಾಗಿದ್ದವೆಂಬ ತೀರ್ಮಾನ ವಸಾಹತುಶಾಹಿ ಒತ್ತಡಗಳ ಸಂದರ್ಭದಲ್ಲಿ ಆಧುನಿಕ ವೀರಶೈವರು ತಮ್ಮ ಜಾತಿಯ ಮೇಲುಚಲನೆಗಾಗಿ ಹುಟ್ಟುಹಾಕಿದರೆಂಬ ವಾದ ಪೂರ್ಣ ಸತ್ಯವಲ್ಲ. ಅಥವಾ ಅದಕ್ಕೆ ಪೂರ್ವದಲ್ಲಿ ಜಾತಿಶೋಷಣೆಯ ಬಗೆಗಿನ ಅಸಮಾಧಾನ ಬಂದಿರಲಿಲ್ಲವೆಂದಾಗಲಿ `ವಚನವಾಙ್ಮಯ'ದ ಬಗೆಗೆ ಅರಿವಳಿಕೆಯಿತ್ತೆಂದಾಗಲಿ ಹೇಳಲಾಗುವುದಿಲ್ಲ. ಹನ್ನೆರಡನೆ ಶತಮಾನದ ನಂತರ ವಸಾಹತುಶಾಹಿಯ ಆಗಮನದವರೆಗಿನ ನಾಲ್ಕು `ಶೂನ್ಯ ಸಂಪಾದನೆ'ಗಳು, 'ಲಿಂಗಲೀಲಾ ವಿಲಾಸ'ದಂಥ ವಚನ ಸಂಗ್ರಹಗಳು, ಸಿಂಗಳದ ಸಿದ್ಧಬಸವಾದಿ ಪಂಡಿತರ ಟೀಕುಗಳೂ ವಚನದ ಬಗೆಗಿನ ಚಿಂತನೆ ಕಾಳಜಿಗಳ ನಿರಂತರತೆಗೆ ದ್ಯೋತಕವಾಗಿವೆ. ಅಂದರೆ ವಚನಗಳನ್ನು ಕನ್ನಡ ಭಾಷಿಕರು ಧುತ್ತೆಂದು ವಸಾಹತುಶಾಹಿ ಇಂಜೆಕ್ಷನ್ ಚುಚ್ಚಿದಾಗ ನೆನಪಿಸಿಕೊಳ್ಳಲಿಲ್ಲ.

ಜಾತಿಯ ಬಗೆಗಿನ ಟೀಕೆ ವಚನಕಾರರ ಪೂರ್ವದಲ್ಲೇ ಕನ್ನಡ ಸಾಹಿತ್ಯದಲ್ಲಿ ಶುರುವಾಗಿ ಆ ನಂತರದಲ್ಲೂ ಮುಂದುವರಿಯಿತು. ಹಾಗೆಯೇ ಬ್ರಾಹ್ಮಣರ ಡಾಂಭಿಕತೆಯ ವಿಡಂಬನೆ, `ಪಂಪಭಾರತ'ದ ಕರ್ಣನ ಕುರಿತ ಪ್ರಸಂಗಗಳಲ್ಲಿ, ಇತರ ಜೈನ ಕಾವ್ಯಗಳಲ್ಲಿ, ಹರಿಹರ-ರಾಘವಾಂಕಾದಿಗಳಲ್ಲಿ, ಸರ್ವಜ್ಞನಲ್ಲಿ, ಹರಿದಾಸ-ತತ್ವಪದಕಾರರಲ್ಲಿ, ಜನಪದದಲ್ಲಿ ಜಾತಿತಾರತಮ್ಯದ ಪ್ರಸ್ತಾಪ ಮತ್ತು ಟೀಕೆಗಳು ಬಂದಿವೆ. ಇತರ ಭಾಷೆಗಳ ಭಕ್ತಿ ಸಾಹಿತ್ಯದಲ್ಲೂ ಉದಾಹರಣೆಗಳಿವೆ.

ವಚನ ವಾಙ್ಮಯ ಕುರಿತ ಬಹುತೇಕ ಇತಿಹಾಸಗಳೂ ಚಿಂತನೆಗಳು ಅದರ ಸಂದರ್ಭವನ್ನಾಗಿ ವೀರಶೈವ ಮತವೊಂದನ್ನೇ ಇಟ್ಟುಕೊಂಡು ನೋಡುತ್ತವೆ. ಈ ನಿಟ್ಟಿನಿಂದ ನೋಡಿದಾಗ ವಚನಕಾಲದ ನಂತರದ ಸಂಗ್ರಹಗಳು, ವಚನಕಾರರ ಕುರಿತ ಕಾವ್ಯ-ಪುರಾಣಗಳು ಮಾತ್ರ ವಚನಕಾರರು ಕೊಟ್ಟ ಚಾಲನೆಯ ಮುಂಬರಿಕೆಗಳಾಗಿ ಕಾಣುತ್ತವೆ. ಆದರೆ ಅದು ಹಾಗಲ್ಲ. ವಚನಕಾರರು ನೀಡಿದ ಚಾಲನೆಯ ಮುಂಬರಿಕೆಯನ್ನು ಅವರ ಆಚಾರ-ವಿಚಾರಗಳನ್ನು ವಿಸ್ತರಿಸುತ್ತಾ ಹೋದ ಕೊಡೇಕಲ್ ಬಸವೇಶ್ವರ ಮತ್ತವರ ಅನುಯಾಯಿಗಳ ಬರಹ-ಬದುಕುಗಳಲ್ಲಿ, ನಿಮ್ನಜಾತಿಗಳ ಸಂತರ ಕುರಿತಾದ ಮಂಟೇಸ್ವಾಮಿ, ಮಲೆ ಮಾದೇಶ್ವರ ಕಾವ್ಯಗಳಲ್ಲಿ, ದೇವಾಂಗ ಜನಾಂಗದ ರುದ್ರಮುನಿ ಕುರಿತ ಮತ್ತು ಕುರುಬ ಜನಾಂಗದ ಸಂತ ರೇವಣಸಿದ್ಧನನ್ನು ಕುರಿತ ಮೌಖಿಕ ಕಾವ್ಯಗಳಲ್ಲಿ, ಅರೂಢ ಮತ್ತು ತತ್ವಪದಕಾರರಲ್ಲಿ ಕಾಣಬಹುದು.

ಹಿಂದೊಮ್ಮೆ ನಾನು ಮಲೆ ಮಾದೇಶ್ವರ ಮಂಟೇಸ್ವಾಮಿ ಕಾವ್ಯಗಳನ್ನು ಐದು ಮತ್ತು ಆರನೆಯ ಶೂನ್ಯಸಂಪಾದನೆಗಳೆಂದು ಕರೆದಿದ್ದೆ. ಕೆಳಜಾತಿಯ ಸಂತರ ಕುರಿತ ಕಾವ್ಯಗಳಲ್ಲಿ ಒಂದು ಘಟನೆ ಪುನರಭಿನೀತವಾಗುತ್ತದೆ. ಈ ಸಂತರು ಕಲ್ಯಾಣ ಪ್ರವೇಶ ಮಾಡಲು ಹೊರಟಾಗ ಲಿಂಗವಂತರಾದ ಜಂಗಮರು ತಡೆಯುತ್ತಾರೆ. ಆದರೆ ಸಂತರು ತಮ್ಮ ಪವಾಡವೊಂದನ್ನು ಮೆರೆದು ಲಿಂಗವಂತರಿಗಿಂತ ತಾವು ಶಕ್ತಿವಂತರೆಂಬುದನ್ನು ಮನವರಿಕೆ ಮಾಡಿಕೊಟ್ಟು ವಿಜಯಿಗಳಾಗಿ ಕಲ್ಯಾಣಪ್ರವೇಶ ಮಾಡುತ್ತಾರೆ. ಶರಣರ ತತ್ವವನ್ನೊಪ್ಪಿಯೂ ಇಷ್ಟಲಿಂಗವನ್ನು ತ್ಯಜಿಸಿದ ಕೊಡೇಕಲ್ಲಿನವರಂತೆ ಮಂಟೇಸ್ವಾಮಿಯಾದಿ ಪಂಥಗಳವರೂ ಶರಣ ಪರಂಪರೆಯನ್ನು ವಿಮರ್ಶಾತ್ಮಕವಾಗಿ ಸ್ವೀಕರಿಸಿದರೆಂಬುದಕ್ಕೆ ಇವು ನಿದರ್ಶನಗಳಾಗಿವೆ. ಅಲ್ಲದೆ ವಚನಕಾರರ ಪ್ರಭಾವ ಕನ್ನಡಸೀಮೆಯ ಗಡಿದಾಟಿ ಮಹಾರಾಷ್ಟ್ರದ ಸಂತರನ್ನು, ತಮಿಳುನಾಡಿನ ಸಿದ್ಧರನ್ನು ಪ್ರಭಾವಿಸಿದ್ದಕ್ಕೆ ಉದಾಹರಣೆಗಳಿವೆ. ಆಂಧ್ರದ ಮಹಾಕವಿ ಪಾಲ್ಕುರಿಕೆ ಸೋಮನಾಥ, ನಂತರ ವೇಮನರೂ ಶರಣ ಚಿಂತನೆಯಿಂದ ಪ್ರಭಾವಿತರಾದವರೇ ಆಗಿದ್ದಾರೆ.

ವಚನಗಳು ಇಪ್ಪತ್ತನೆ ಶತಮಾನದಲ್ಲಿ  ಅಚ್ಚಿನರೂಪದಲ್ಲಿ ಸಂಗ್ರಹಿಸಲ್ಪಟ್ಟದ್ದು ನಿಜವಾದರೂ ಆ ಮೊದಲಿಗೂ ತಾಳೆಯೋಲೆ ಮತ್ತು ಮೌಖಿಕ ಪರಂಪರೆಗಳಲ್ಲಿ ಪ್ರಚಾರದಲ್ಲಿದ್ದವು.  ವಚನಗಳ ರೂಪಾಂತರಗಳಂತಿರುವ ಜನಪದ ಗೀತೆಗಳನ್ನು ಉತ್ತರಕರ್ನಾಟಕದ ಹಲಭಾಗಗಳಲ್ಲಿ  ಹಲವು ಸಲ ಕೇಳಿದ್ದೇನೆ.

ಒಂದು ಜಾತಿಯವರು ವಚನಗಳನ್ನು ತಮ್ಮ ಅಧಿಕೃತ ಧರ್ಮಗ್ರಂಥವಾಗಿ ನೋಡಿರಬಹುದು. ಆದರೆ ಇಂದು ಇತರ ಜಾತಿಗಳವರೂ ತಮ್ಮ ಪೂರ್ವಜರನ್ನು ವಚನ ಪರಂಪರೆಯಲ್ಲಿ ಗುರುತಿಸಿಕೊಳ್ಳತೊಡಗಿದ್ದಾರೆ. ಅಂದರೆ ಎಲ್ಲ ಸಮುದಾಯಗಳವರೂ ತಮಗೆ ಬೇಕಾದ್ದನ್ನು ವಚನಗಳಿಂದ ಪಡೆದುಕೊಳ್ಳುತ್ತಿದ್ದಾರೆ. ಯಾಕೆಂದರೆ ವಚನವಾಙ್ಮಯ ಅಂತ್ಯಜ ಮೊದಲಾಗಿ ಬ್ರಾಹ್ಮಣ ಕಡೆಯಾಗಿ ಎಲ್ಲ ಜಾತಿಮೂಲದ ಸಂತರ ಅಭಿವ್ಯಕ್ತಿಯ ಸಮುಚ್ಚಯ.

ಇವರೆಲ್ಲರೂ ತಮಗೆ ಬೇಕಾದ ಕತೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆಂದು ಝಳಕಿಯವರು ತಿರುಗುಬಾಣ ಬಿಡಬಹುದು. ಆದರೆ ಅವರಾದರೂ ಮಾಡುತ್ತಿರುವುದೇನು? ಆಧುನಿಕಪೂರ್ವ ಭಾರತದಲ್ಲಿ  ಜಾತಿಯ ವೈಷಮ್ಯವಾಗಲಿ ಬ್ರಾಹ್ಮಣರ ಟೀಕೆಯಾಗಲಿ ಇಲ್ಲವೆಂದು ಸಾಬೀತು  ಪಡಿಸಲು ವಚನಗಳನ್ನು ನೆಪ ಮಾಡಿಕೊಳ್ಳುತ್ತಿದ್ದಾರೆ. ಬ್ರಾಹ್ಮಣರ ಧಾಂಬಿಕತನವನ್ನು ಸ್ವತಃ ಬ್ರಾಹ್ಮಣರಾದ ಏಕನಾಥ ಮಹಾರಾಜರಂಥವರು ಮಾಡಿರುವುದನ್ನೂ ಮರೆತಿದ್ದಾರೆ? ಈ ಮೂಲಕ ಅವರು ಯಾರ ಹಿತವನ್ನು ರಕ್ಷಿಸಲು ಹೊರಟಿದ್ದಾರೆ? ನನ್ನ ನಮ್ರ ಪ್ರತಿಕ್ರಿಯೆಯಲ್ಲಿ ಮಂಡಿಸಿರುವ ವಿಚಾರಗಳನ್ನು ಇನ್ನಾದರೂ ಎಲ್ಲ ಸಮುದಾಯದ ವಚನ ತಜ್ಞರು ಮುಂದೆ ತೆಗೆದುಕೊಂಡುಹೋಗುತ್ತಾರೆಂದು ನನ್ನ ಹಾರೈಕೆ.

ವಚನಗಳ ಬಗ್ಗೆ ಹೊಸ ಚಿಂತನೆ ಮತ್ತು ಚರ್ಚೆಗಳಿಗೆ ಅನುವು ಮಾಡಿಕೊಡುತ್ತಿರುವ ಬಾಲಗಂಗಾಧರ ಮತ್ತು ಡಂಕಿನ್ ಝಳಕಿಯವರಿಗೆ ನಾನು ಮತ್ತೆ ನನ್ನ ಧನ್ಯವಾದಗಳನ್ನರ್ಪಿಸುತ್ತಿದ್ದೇನೆ.

ಶಿವಪ್ರಕಾಶರ ಇತರೆ ಲೇಖನಗಳು: 


29 March 2013

* ಡಾ.ಎಚ್‌.ಎಲ್‌ ಪುಷ್ಪ 

ಎಚ್.ಎಸ್. ಶಿವಪ್ರಕಾಶ್ ಅವರ `ವಚನ ಸಾಹಿತ್ಯ ಮತ್ತು ಜಾತಿ ವಿರೋಧ' ಲೇಖನ ಹಾಗೂ ಆ ಕುರಿತಾದ ಚರ್ಚೆಗಳನ್ನು ಗಮನಿಸಿರುತ್ತೇನೆ. 12ನೇ ಶತಮಾನದಲ್ಲಿ ಆಗಿಹೋದ, ಈಗಲೂ ತನ್ನ ಪ್ರಸ್ತುತತೆಯನ್ನು ಅಲಕ್ಷಿತ ಸಮುದಾಯಗಳಲ್ಲಿ ಉಳಿಸಿಕೊಂಡ ಈ ಚಳವಳಿ ಸಂವಿಧಾನಾತ್ಮಕ ಸ್ವರೂಪವುಳ್ಳದ್ದಾಗಿತ್ತು. ಅಂತ್ಯಜ ಮೊದಲಾಗಿ ವಿಪ್ರರನ್ನು, ಅಲಕ್ಷ್ಯಕ್ಕೆ ಒಳಗಾಗಿದ್ದ ಸ್ತ್ರೀಯರನ್ನು, ದೇವಭಾಷೆಯಾಗಿದ್ದ ಸಂಸ್ಕೃತ ಭಾಷೆಯ ಗರ್ವವನ್ನು, ಅಮಾನವೀಯ ಹಾಗೂ ಜೀವಪರವಲ್ಲದ ವೈದಿಕ ಧರ್ಮವನ್ನು ವಿರೋಧಿಸುವ ಹಾಗೂ ಪರ್ಯಾಯವೊಂದನ್ನು ಕಟ್ಟುವ ನೆಲೆಯನ್ನಾಗಿಯೇ ವಚನ ಚಳವಳಿಯನ್ನು ನೋಡಬೇಕಾದ ಅಗತ್ಯ ನಮಗಿದೆ. ಬಸವಣ್ಣನ ಶತಮಾನಗಳ ಮನ್ನೋಟವುಳ್ಳ ಈ ವ್ಯವಸ್ಥಿತ ಚಳವಳಿಯನ್ನು ಹಲವು ಕಾಲದಲ್ಲಿ ಹಲವು ರೀತಿಯ ಮುಸುಕುಗಳನ್ನು ಹೊದ್ದು ವೈದಿಕ ಧರ್ಮ ನಿರಂತರವಾಗಿ ಆಕ್ರಮಣ ನಡೆಸಿದೆ. ಅದರ ಕೈಯಲ್ಲಿರುವ ಅಸ್ತ್ರಗಳೆಂದರೆ ಗೋಮಾತೆ, ಮಡೆಸ್ನಾನ, ಅಂಬೇಡ್ಕರರ ಸಂವಿಧಾನ ರಚನೆಯನ್ನು ಕುರಿತು ಹರಡುವ ಊಹಾಪೋಹಗಳು ಇತ್ಯಾದಿಗಳು. ಕೆಲವು ಬಾರಿ ಬಸವಣ್ಣನನ್ನು ಬ್ರಾಹ್ಮಣನೆಂದು ಗುರುತಿಸಿಕೊಳ್ಳುವ ಅವಿವೇಕವನ್ನು ಸಹ ವೈದಿಕತೆ ಮಾಡಿದೆ.

ಮೂಲತಃ ಹಲವು ಜಾತಿಗಳನ್ನು ಒಂದೇ ವೈಚಾರಿಕ ನೆಲೆಗಟ್ಟಿನಡಿಯಲ್ಲಿ ಒಂದೇ ದೈವವನ್ನು ಒಪ್ಪಿಕೊಳ್ಳುವ ಮೂಲಕ ಸಂಘಟಿಸಲ್ಪಟ್ಟ ಈ ಚಳವಳಿ ಸಹಜವಾಗಿಯೇ ಜನರಿಂದ, ಜನರಿಗಾಗಿಯೇ ಎಂಬ ಮುಕ್ತತೆಯನ್ನು ಉಳ್ಳದ್ದು. ಸ್ವಾಭಾವಿಕವಾಗಿಯೇ ಈ ಚಳವಳಿಯ ಗಡಿರೇಖೆಗಳು ಜಡವಲ್ಲ, ಚಲನಶೀಲವಾಗಿವೆ. ಯಾರು ಬೇಕಾದರೂ ಬೇಲಿಯನ್ನು ಕಿತ್ತು ಒಳಬರುವ ಹಾಗೂ ಹೊರಹೋಗುವ ಮುಕ್ತ ವೈಚಾರಿಕಾ ಸ್ವಾತಂತ್ರ್ಯವುಳ್ಳದ್ದು. ಈ ಸಮುದಾಯದಲ್ಲಿ ತಾವಾಗಿಯೇ ಉತ್ಸಾಹದಿಂದ ಪ್ರವೇಶಿಸಿದ ಹಲವು ಕಾಯಕ ಜೀವಿಗಳು ತಮ್ಮ ಜಾತಿಗಳನ್ನು ಬದಿಗಿಟ್ಟು ಕಾಯಕಗಳನ್ನು ಉಳಿಸಿಕೊಂಡು ಸ್ವಾಭಿಮಾನದ ಮೇಲುಕೀಳಿಲ್ಲದ ಒಂದು ವಿಶಾಲ ಜನಜೀವನದಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡರು. ಹಲವು ದೈವ, ಹಲವು ಸಂಸ್ಕೃತಿಗಳು ಒಂದೆಡೆಯಾದರೆ ಮಾನವೀಯತೆಯನ್ನು ಮರೆತು ಶ್ರೇಷ್ಠತೆಯ ವ್ಯಸನಪೀಡಿತ ವೈದಿಕ ಧರ್ಮ ಜನಸಾಮಾನ್ಯರನ್ನು ಕಾಡಲಾರಂಭಿಸಿದಾಗ ತರತಮಗಳಿಲ್ಲದ ವಚನ ಚಳವಳಿಯ ತೆಕ್ಕೆಗೆ ತಾವಾಗಿಯೇ ತಮ್ಮನ್ನು ಅಲಕ್ಷಿತ ಸಮುದಾಯಗಳು ಅರ್ಪಿಸಿಕೊಂಡವು.

ಹೀಗಾಗಿ ವಚನಕಾರರು ಜಾತಿಯ ಪರ ಅಥವಾ ಬ್ರಾಹ್ಮಣ ಪರವಾಗಿದ್ದರು ಎಂಬ ಮಾತೇ ತರ್ಕರಹಿತವಾಗಿದ್ದು ತಮ್ಮನ್ನು ಶತಮಾನಗಳಿಂದ ಉಸಿರುಗಟ್ಟಿಸಿದ್ದ ವರ್ಣವ್ಯವಸ್ಥೆಯಿಂದ ಹೊರಬಂದರು ಎಂಬುದಷ್ಟೇ ಮುಖ್ಯವಾಗುತ್ತದೆ. ತಮ್ಮ ತಮ್ಮ ವಚನಗಳಲ್ಲಿ ತಮ್ಮ ಮುಂದಿನ ನಡೆನುಡಿ ಹೇಗಿರಬೇಕೆಂಬುದು ಅವರ ಆಲೋಚನೆಯಾಗಿತ್ತೆ ವಿನಾ ಜಾತಿಯ ಪರವಾಗಿ ಅಥವಾ ಬ್ರಾಹ್ಮಣರ ವಿರೋಧವಾಗಿ ಇರಬೇಕೆಂಬುದರ ಕಡೆಗೆ ಅವರ ಗಮನವಿರಲಿಲ್ಲ. ಈ ವಿಚಾರಗಳನ್ನು ಕುರಿತು ಅವರು ಹೆಚ್ಚು ವಚನಗಳಲ್ಲಿ ಪ್ರತಿಕ್ರಿಯಿಸಿಲ್ಲ ಎಂಬ ಅಲಕ್ಷಿತ ವಿಚಾರವನ್ನೇ ಹಿಡಿದು ಚಳವಳಿಯೊಂದು ಜಾತಿ ವಿರೋಧಿಯಾಗಿರಲಿಲ್ಲ ಎಂಬ ಸಿದ್ಧಾಂತ ರೂಪಿಸ ಹೊರಟಿರುವುದು ಹಲವು ಹುನ್ನಾರಗಳನ್ನು ಎತ್ತಿ ಹಿಡಿಯುತ್ತದೆ. ಈ ಹುನ್ನಾರಿನ ಹಿಂದೆ ವೈದಿಕ ಧರ್ಮದ ಎದುರುನಿಂತ ಜೀವರಪರವಾದ ಸಂಘಟನಾ ರೂಪದ ಸಮಾಜವೊಂದನ್ನು ತುಳಿಯುವ ಅಥವಾ ಜೀವ ವಿರೋಧಿಯಾದ ಕೊಳೆತುಹೋದ ವ್ಯವಸ್ಥೆಯೊಂದನ್ನು ಮರುಸ್ಥಾಪಿಸುವ ಬಲವಾದ ವಿಚಾರಗಳು ಸ್ಪಷ್ಟವಾಗಿಯೇ ಕಂಡುಬರುತ್ತದೆ.

ಒಂದು ಸುಳ್ಳನ್ನು ಹತ್ತು ಬಾರಿ ಹೇಳುತ್ತಲೇ ಹೋದರೆ ಅದು ಸತ್ಯವಾಗುವ ಸಾಧ್ಯತೆಗಳು ಇರುವುದರಿಂದ ಸುಳ್ಳನ್ನು ಅದರ ಮೊಳಕೆಯ ರೂಪದಲ್ಲಿ ನಿವಾರಿಸಬೇಕಾದ ಅಗತ್ಯವೂ ಈ ಹಿನ್ನೆಲೆಯಲ್ಲಿ ನಮಗಿದೆ.ಹನ್ನೆರಡನೇ ಶತಮಾನದ ವಚನಕಾರರು ಸಾಮಾಜಿಕ ವ್ಯವಸ್ಥೆಯ ಒಂದು ಲಕ್ಷಣವಾದ `ಜಾತಿ'ಯನ್ನು ಒಟ್ಟು ಮಾನವ ಕುಲ ಎಂಬ ವಿಸ್ತಾರವಾದ ಅರ್ಥದಲ್ಲಿ ಬಳಸಿದ್ದಾರೆ. ಮಾನವನ ವ್ಯಕ್ತಿತ್ವಕ್ಕೆ ಮಾರಕವಾಗುವ ಸೀಮಿತಾರ್ಥದ ಜಾತಿಗಿಂತ `ಶರಣಕುಲ'ವೊಂದೇ ಒಪ್ಪಿತವಾದದ್ದು ಎಂಬ ಅಭಿಪ್ರಾಯ ಬಹುತೇಕ ವಚನಕಾರರಲ್ಲಿ ಕಂಡುಬರುತ್ತದೆ. ಕುಲಕ್ಕಿಂತ ನಡೆನುಡಿ ಮುಖ್ಯವಾದುದು, ಕೆಳಕುಲದಲ್ಲಿ ಹುಟ್ಟಿಯೂ ಹಿರಿಮೆಯನ್ನು ಕಂಡ ಶರಣರನ್ನು ಹೇಗೆ ನೋಡಬೇಕು ಎನ್ನುವುದನ್ನು ಸಿದ್ಧರಾಮೇಶ್ವರ ತನ್ನ ಒಂದು ವಚನದಲ್ಲಿ ಸೂಚಿಸುತ್ತಾನೆ.

ಕುಲವೆಂದು ಹೋರಾಡುವ ಅಣ್ಣಗಳಿರಾ, ಕೇಳಿರೊ;/ ಕುಲವೇ ಡೋಹರನ? ಕುಲವೇ ಮಾದಾರನ?/ ಕುಲವೇ ದೂರ್ವಾಸನ?ಕುಲವೇ ವ್ಯಾಸನ? ಕುಲವೇ ವಾಲ್ಮೀಕನ? ಕುಲವೇ ಕೌಂಡಿಲ್ಯನ?/ ಕುಲವ ನೋಳ್ಪಡೆ ಹುರುಳಿಲ್ಲ; ಅವರ ನಡೆಯ ನೋಳ್ಪಡೆ ಹುರುಳಿಲ್ಲ;/ ಅವರ ನಡೆಯ ನೋಳ್ಪಡೆ ನಡೆಯುವವರು ತ್ರಿಲೋಕದಲ್ಲಿಲ್ಲ/ಕಪಿಲಸಿದ್ಧಮಲ್ಲಿಕಾರ್ಜುನಾ. ನೋಡಾ,ಹೀಗೆ ಕನಿಷ್ಠತೆಯಲ್ಲಿ ಇರುವ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ, ಆ ಮೂಲಕ ಈಗಾಗಲೇ ಇರುವ ವ್ಯವಸ್ಥೆಯೊಂದಕ್ಕೆ ಪ್ರತಿಯಾಗಿ ಶ್ರಮಜೀವಿಗಳ ಹೊಸ ವರ್ಗವೊಂದನ್ನು ರೂಪಿಸುವ ಛಾಂಛೆ ಎಲ್ಲ ವಚನಕಾರರಲ್ಲೂ ಕಂಡುಬರುತ್ತದೆ. ಬಸವಣ್ಣನಂತಹ ಮೇಲ್ವರ್ಗದ ವಚನಕಾರರು ತಮ್ಮನ್ನು ಅಪವರ್ಗೀಕರಣಗೊಳಿಸುವ ಮೂಲಕ ಈ ಆಶಯಗಳನ್ನು ವ್ಯಕ್ತಪಡಿಸುತ್ತಾರೆ. ತಮ್ಮ ತಮ್ಮ ಆಹಾರ ಪದ್ಧತಿಗಳು, ಕಾಯಕಗಳ ಬಗ್ಗೆ ದಿಟ್ಟತನವಾಗಿಯೇ ಪ್ರಸ್ತಾಪಿಸುವ ಕೆಳವರ್ಗದ ವಚನಕಾರ/ಕಾರ್ತಿಯರ ಬಗ್ಗೆ ಎಲ್ಲೂ ಜಾತಿ ಪರವಾದ, ಬ್ರಾಹ್ಮಣರ ಬಗ್ಗೆ ಮೃದುವಾದ ಭಾವನೆಗಳು ಕಂಡುಬರುವುದಿಲ್ಲ.

ಬಿಡಾಡಿ ಎಂಬ ಅಂಕಿತದಿಂದ ಕೆಲವೇ ವಚನಗಳನ್ನು ಬರೆದ ಬೊಂತಾದೇವಿ `ಬಯಲು' ಎಂಬುದನ್ನು ನಿರ್ವಾಣ ಎಂಬ ಅರ್ಥದಲ್ಲಿ ಬಳಸುತ್ತಾ `ಎಲ್ಲ ಲೌಕಿಕದ ಹಂಗಿನಿಂದ ಹೊರನಿಂತ ಬಯಲಿಗೆ ಜಾತಿಯ ಹಂಗುಂಟೆ' ಎಂದು ಪ್ರಶ್ನಿಸುತ್ತಾಳೆ. ಶ್ರೇಷ್ಠರಿಗೊಂದು, ಕನಿಷ್ಠರಿಗೊಂದು ಬಯಲಿನ ಕಲ್ಪನೆಯಿದೆಯೇ ಎಂಬ ತರ್ಕವನ್ನು ಆಕೆ ನಡೆಸುತ್ತಾಳೆ.ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ?/ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆ ಬಯಲೆಂದುಂಟೆ?/ಎಲ್ಲಿ ನೋಡಿದೆಡೆ ಬಯಲೊಂದೆ;......ಹೀಗೆ ಜಾತಿ ಕಾರಣದಿಂದಾಗಿಯೇ ಇರುವ `ಬ್ರಾಹ್ಮಣ'ನೆಂಬ ಮೇಲ್ಮೆಯನ್ನು ಧಿಕ್ಕರಿಸುತ್ತಾ, ಪಕ್ಕಕ್ಕೆ ಸರಿಸುತ್ತಾ ನಡೆದ ವಚನಕಾರರ ನಡೆಯಲ್ಲಿ ಹೊಸ ಸಮಾಜ ನಿರ್ಮಾಣದ ಕನಸಿದೆ, ಆ ಕನಸಿನೊಂದಿಗೆ ಒಟ್ಟಾಗಿ ನಡೆಯುವ ಛಲವಿದೆ.

ಮುಂದೆ ದಾಸಪರಂಪರೆಯಲ್ಲಿ ಬಂದ ಕನಕದಾಸನ `ರಾಮಧಾನ್ಯ ಚರಿತೆ' ಅಕ್ಕಿ ರಾಗಿಗಳ ವಾಗ್ವಾದದಂತೆ ತೋರಿದರೂ ಅದು ಮೇಲ್ವರ್ಗದ ನಿಸ್ಸಾರತೆ, ನಿರ್ದಯತೆಯನ್ನು ಸಾರುತ್ತಾ ಕೆಳವರ್ಗದವರ ಸರ್ವಶಕ್ತತೆಯನ್ನು ಎತ್ತಿಹಿಡಿದ ಕಾವ್ಯ. ಹೀಗೆ ತಮ್ಮ ತಮ್ಮ ಕಾವ್ಯಗಳಲ್ಲಿ ಕವಿಗಳು ತಾವು ಯಾವ ಯುಗಕ್ಕೇ ಸೇರಿರಲಿ ಭ್ರಷ್ಟವಾದ ಜಾತಿವ್ಯವಸ್ಥೆಯನ್ನು ಖಂಡಿಸುತ್ತಾ ಬಂದಿದ್ದಾರೆ. ನೇರವಾಗಿ ಖಂಡಿಸುವ ಧೈರ್ಯ ತೋರಿದವರು ಚಳವಳಿಯ ಚೌಕಟ್ಟಿನಲ್ಲಿ ನಿಂತ ವಚನಕಾರರು. ವಚನಗುಮ್ಮಟವೆಂದೇ ಕರೆಸಿಕೊಂಡ ಫ.ಗು. ಹಳಕಟ್ಟಿಯವರು ವಚನಗಳ ಸಂಪಾದನಾ ಕಾರ್ಯದಲ್ಲಿ ಪ್ರಕಟಣೆಗಾಗಿ ಆಂಗ್ಲ ಸರ್ಕಾರವನ್ನು ಕೋರಿದಾಗ ತಮ್ಮ ಧರ್ಮದಲ್ಲೂ, ವಚನಕಾರರಲ್ಲೂ ಇರುವ ಏಕದೇವತಾ ಉಪಾಸನಾ ಕಾರಣಕ್ಕಾಗಿಯೇ ನಿರಾಕರಿಸಲ್ಪಡುತ್ತಾರೆ.

ವೀರಶೈವ ಧರ್ಮವನ್ನು ತಮ್ಮ ಧರ್ಮಕ್ಕೆ ಪ್ರತಿಸ್ಪರ್ಧಿ ಎಂದು ಪ್ರಕಟಣೆಯ ನೆರವನ್ನು ನಿರಾಕರಿಸುತ್ತಾರೆ. ಚರಿತ್ರೆಯೇ ಒಪ್ಪಿಕೊಂಡಂತೆ, ಅಲಕ್ಷಿತ ಬಹುಸಮುದಾಯಗಳು ಒಪ್ಪಿಕೊಂಡಂತೆ ವಚನ ಚಳವಳಿ ಮಾನವತೆಗೆ ಕೊಡಲಿ ಪೆಟ್ಟಿನಂತಿದ್ದ ವೈದಿಕ ಧರ್ಮವನ್ನು ನಿರಾಕರಿಸಿಯೇ ತನ್ನ ನಡೆಯನ್ನು ಕಂಡುಕೊಂಡಿದೆ. ಈಗ ವಿವಿಧ ಕಾರ್ಯಕ್ಕೆ ಸೇರಿದ ಜನಾಂಗಗಳು ತಮ್ಮ ತಮ್ಮ ಕುಲದ ಅಭಿಮಾನಗಳಂತೆ ಆ ಚಳವಳಿಯಲ್ಲಿ ಸೇರಿಹೋದವರ ವಚನಗಳನ್ನು ಅಭ್ಯಸಿಸುವ ಕ್ರಮವೂ ಚಾಲ್ತಿಯಲ್ಲಿದೆ. ಈ ನಿಲುವು ವಸಾಹತುಶಾಹಿ ಒತ್ತಡಗಳ ಸಂದರ್ಭದಲ್ಲಿ ವೀರಶೈವರು ತಮ್ಮ ಜಾತಿಯ ಮೇಲ್ಮೆಯನ್ನು ಎತ್ತಿಹಿಡಿದರು ಎನ್ನುವುದಕ್ಕಿಂತ ಕೆಳವರ್ಗಕ್ಕೆ ಸೇರಿದವರು ಚರಿತ್ರೆಯಲ್ಲಿ ತಮ್ಮ ಸ್ಥಾನ ಗುರುತಿಸಿಕೊಳ್ಳಲು ಮಾಡಿದ ಹುಡುಕಾಟವೆನ್ನುವುದು ಸೂಕ್ತವಾದೀತು.

ಕೆಳವರ್ಗದ ವಚನಕಾರರನ್ನು ಕುರಿತಂತೆ ನಡೆದಿರುವ ಸಂಶೋಧನೆಗಳು, ರಚಿತವಾದ ನಾಟಕಗಳು ಹಾಗೂ ಕವಿತೆಗಳು ಈ ಅಭಿಪ್ರಾಯವನ್ನು ದೃಢಪಡಿಸುತ್ತವೆ. ಹೀಗಾಗಿ ಝಳಕಿ ಹಾಗೂ ಬಾಲಗಂಗಾಧರ ಅವರ ವಚನಕಾರರು ಹಾಗೂ ಜಾತಿ ಕುರಿತಾದ ಅಭಿಪ್ರಾಯಗಳು ಒಂದು ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ಕಟ್ಟಲ್ಪಟ್ಟ ವಾದಗಳಾಗಿವೆ. ಚರಿತ್ರೆಯಲ್ಲಿ ಮುಂಬಾಗಿಲಿನಿಂದ ತಳ್ಳಲ್ಪಟ್ಟು ಬಹು ಸಮುದಾಯದಿಂದ ದೂರಾದವರು ಹಿಂಬಾಗಿಲಿನಿಂದ ಪ್ರವೇಶಿಸಲು ಕೈಯಲ್ಲಿ ಹಿಡಿದ ಅಸ್ತ್ರಗಳಾಗಿಯೇ ಈ ವಾದಗಳು ತೋರುತ್ತವೆ.