04 June 2013
17 May 2013
ನಮ್ಮ ಸಂಶೋಧನೆಗೆ ಕುಯುಕ್ತಿಯನ್ನು ಆರೋಪಿಸುವುದು ಯುಕ್ತವೆ?
* ಪ್ರೊ.ರಾಜಾರಾಮ ಹೆಗಡೆ
(ದೇವನೂರು ಮಹಾದೇವ ಅವರ ಲೇಖನ ಇಲ್ಲಿ ಓದಿ)
ಸನ್ಮಾನ್ಯ ದೇವನೂರು ಮಹಾದೇವರ ಪ್ರತಿಕ್ರಿಯೆಯನ್ನು ಓದಿದ ನಂತರ, ಹಾಗೂ ಅವರು ಏನನ್ನು ಹೇಗೆ ಹೇಳಿದ್ದಾರೆ ಎಂಬುದನ್ನು ಕಂಡ ನಂತರ, ಅವರನ್ನು ಕಾಡಿದ ಹೇಗೆ ಹೇಳಲಿ ಎಂಬ ಪ್ರಶ್ನೆಯು ಈಗ ನನ್ನದೇ ಆಗಿದೆ. ದೇವನೂರರ ಕಥನದ ಭಾಷೆ ನನಗೆ ತುಂಬಾ ಇಷ್ಟ. ಆದರೆ ಇಲ್ಲಿ ಅವರು ನಮ್ಮ ಕುರಿತು ಏಕೆ ಇಂಥ ಭಾಷೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದೂ ಸ್ಪಷ್ಟ. ಅವರಿಗೆ ನಮ್ಮ ಮೇಲೆ ಸಿಟ್ಟಿದೆ. ದೇವನೂರರು ಒಂದು ಸಮೂಹದ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅವರ ಜೀವನ ಈ ಕುರಿತಾಗಿಯೇ ಒಂದು ಹೋರಾಟ ಎಂದರೂ ತಪ್ಪಿಲ್ಲ. ಇಷ್ಟನ್ನು ಖಚಿತವಾಗಿ ಹೇಳಬಲ್ಲಷ್ಟು ನಾನು ಅವರನ್ನು ಬಲ್ಲೆ. ಹಾಗೂ ಅದನ್ನು ಗಮನಿಸುವುದು ಮುಂದಿನ ಸಂವಾದಕ್ಕೆ ನಿರ್ಣಾಯಕ ಎಂಬುದಾಗಿ ನನಗನಿಸುತ್ತದೆ. ಏಕೆಂದರೆ ಯಾರದೇ ಪ್ರಾಮಾಣಿಕತೆಯ ಮೇಲೆ ಅಪನಂಬಿಕೆಯನ್ನಿಟ್ಟು ಬೌದ್ಧಿಕ ಚರ್ಚೆಯನ್ನು ಪ್ರಾರಂಭಿಸುವುದರಿಂದ ಚರ್ಚಿಸತಕ್ಕ ವಿಷಯಕ್ಕೆ ನ್ಯಾಯ ಸಲ್ಲುವುದಿಲ್ಲ.ಸಂಶೋಧನೆ ಮಾಡುವುದು ಕೇವಲ ಬೌದ್ಧಿಕ ಪ್ರಶ್ನೆಯೊಂದೇ ಅಲ್ಲ, ಅದು ಪ್ರವಾಹದ ವಿರುದ್ಧ ಈಜುವ ಕೆಲಸ ಕೂಡ ಆಗಿದೆ ಎಂಬುದು ನಮಗೆ ಈಗಾಗಲೇ ಅನುಭವ ವೇದ್ಯವಾಗಿದೆ.
Posted in ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ವಚನ ಸಂವಾದ
ಸಾಮಾಜಿಕ ಸಂಶೋಧನೆ ಯಾಕಾಗಿ?
* ಪ್ರೊ.ಜೆ.ಎಸ್.ಸದಾನಂದ
(ಪ್ರಜಾವಾಣಿಯಲ್ಲಿ ಪ್ರಕಟವಾದ ದೇವನೂರು ಮಹಾದೇವ ಅವರ ಲೇಖನಕ್ಕೆ ಪ್ರತಿಕ್ರಿಯೆ)
(ಪ್ರೊ.ರಾಜಾರಾಮ ಹೆಗಡೆ ದೇವನೂರು ಮಹಾದೇವ ಅವರ ಲೇಖನಕ್ಕೆ ಬರೆದಿರುವ ಪ್ರತಿಕ್ರಿಯೆ ಓದಿ)
ದೇವನೂರು ಮಹಾದೇವ ಅವರ ಲೇಖನದಲ್ಲಿ (ಪ್ರಜಾವಾಣಿ ದಿನಾಂಕ: 29/4/2013) ನಮಗೆ ಕಾಣುವುದು ನಮ್ಮ ಸಂಶೋಧನೆಯ ಬಗ್ಗೆ ಇರುವ ಕೋಪ, ಅಸಹನೆ ಹಾಗೂ ತಿರಸ್ಕಾರ. ಇದಕ್ಕೆ ಕಾರಣವೇನು? ಅವರನ್ನು ಸ್ವಲ್ಪಮಟ್ಟಿಗೆ ಬಲ್ಲ ನನಗೆ ಅನಿಸುವುದಿಷ್ಟು. ಇಂತಹ ಸಿಟ್ಟು ಅಸಹನೆಗೆ ಮೂಲ ಕಾರಣ ಸಮಾಜದಲ್ಲಿರುವ ಅನ್ಯಾಯ, ಶೋಷಣೆ ಮುಂತಾದ ನಕಾರಾತ್ಮಕ ಅಂಶಗಳನ್ನು ಬುಡಸಮೇತ ಕಿತ್ತೊಗೆಯಬೇಕೆಂಬ ಗುರಿಯ ಬಗ್ಗೆ ಅವರಿಗಿರುವ ಬದ್ಧತೆ ಹಾಗೂ ಅಂತಹ ಅನ್ಯಾಯ, ಶೋಷಣೆಗಳಿಗೆ ಮೂಲ ಕಾರಣ ಯಾವುದು ಎನ್ನುವುದು ಎನ್ನುವುದರ ಕುರಿತು ಅವರಿಗಿರುವ ದೃಢ ನಂಬಿಕೆ. ಜಾತಿ ವ್ಯವಸ್ಥೆಯನ್ನು ಕಿತ್ತೊಗೆಯದ ಹೊರತು ನಮ್ಮ ಸಮಾಜದ ಅನ್ಯಾಯಗಳನ್ನು ಸರಿಪಡಿಸಲಾಗದು ಎನ್ನುವುದರ ಬಗ್ಗೆ ಅವರಿಗೆ ಯಾವ ಸಂಶಯವೂ ಇಲ್ಲ. ಅವರು ಮುಟ್ಟಬೇಕಾದ ಗುರಿ ಹಾಗೂ ಆ ನಿಟ್ಟಿನಲ್ಲಿ ಅವರು ಸಾಗುತ್ತಿರುವ ಮಾರ್ಗದ ನಡುವೆ ಯಾವ ವ್ಯತ್ಯಾಸವೂ ಅವರಿಗೆ ಕಾಣಿಸುವುದಿಲ್ಲ. ಹಾಗಾಗಿ ಸಾಗುತ್ತಿರುವ ಮಾರ್ಗದ ಕುರಿತು ಎತ್ತಲಾಗುವ ಪ್ರಶ್ನೆಗಳು ಮುಟ್ಟಬೇಕಾದ ಗುರಿಯನ್ನೇ ಪ್ರಶ್ನಾರ್ಹಗೊಳಿಸುವಂತೆ ಅಥವಾ ಅಂತಹ ಗುರಿಗಳಿಂದ ನಮ್ಮನ್ನು ವಿಮುಖಗೊಳಿಸುವ ಹುನ್ನಾರದಂತೆ ಅವರಿಗನಿಸುತ್ತಿದೆ.
Posted in ದೇವನೂರು ಮಹಾದೇವ, ಪ್ರೊ.ಜೆ.ಎಸ್.ಸದಾನಂದ, ಪ್ರೊ.ರಾಜಾರಾಮ ಹೆಗಡೆ, ವಚನ ಸಂವಾದ
ಹೇಗೆ ಹೇಳಲಿ? ಏನು ಹೇಳಲಿ?
* ಪ್ರೊ.ರಾಜಾರಾಮ ಹೆಗಡೆ
(ದೇವನೂರು ಮಹಾದೇವರವರ ಲೇಖನಕ್ಕೆ ಪ್ರತಿಕ್ರಿಯೆ)
(ಪ್ರೊ.ಜೆ.ಎಸ್.ಸದಾನಂದ ಅವರು ದೇವನೂರು ಲೇಖನಕ್ಕೆ ಪ್ರತಿಕ್ರಿಯಿಸಿದ್ದಾರೆ)
ದೇವನೂರು ಮಹಾದೇವರ ಪ್ರತಿಕ್ರಿಯೆಯನ್ನು ಓದಿದ ನಂತರ, ಅವರು ಏನನ್ನು ಹೇಗೆ ಹೇಳಿದ್ದಾರೆ ಎಂಬುದನ್ನು ಕಂಡ ನಂತರ ಅವರನ್ನು ಕಾಡಿದ ಆ “ಹೇಗೆ ಹೇಳಲಿ? ಏನು ಹೇಳಲಿ?” ಎಂಬ ಪ್ರಶ್ನೆ ಈಗ ಅವರದಕ್ಕಿಂತ ನನ್ನದೇ ಆಗಿದೆ. ಅವರು ನಮ್ಮ ಕುರಿತು ಏಕೆ ಇಂಥ ಭಾಷೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟ. ಅವರಿಗೆ ಸಿಟ್ಟಿದೆ. ದೇವನೂರರು ಒಂದು ಸಮೂಹದ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅವರ ಜೀವನ ಈ ಕುರಿತಾಗಿಯೇ ಒಂದು ಹೋರಾಟ ಎಂದರೂ ತಪ್ಪಿಲ್ಲ. ಇಷ್ಟನ್ನು ಖಚಿತವಾಗಿ ಹೇಳಬಲ್ಲಷ್ಟು ನಾನು ಅವರನ್ನು ಬಲ್ಲೆ. ಹಾಗೂ ಅದನ್ನು ಗಮನಿಸುವುದು ಮುಂದಿನ ಸಂವಾದಕ್ಕೆ ನಿರ್ಣಾಯಕ ಎಂಬುದಾಗಿ ನನಗನಿಸುತ್ತದೆ. ಏಕೆಂದರೆ ಯಾರದೇ ಪ್ರಾಮಾಣಿಕತೆಯ ಮೇಲೆ ಅಪನಂಬಿಕೆಯನ್ನಿಟ್ಟು ಬೌದ್ಧಿಕ ಚರ್ಚೆಯನ್ನು ಪ್ರಾರಂಭಿಸುವುದರಿಂದ ಚರ್ಚಿಸತಕ್ಕ ವಿಷಯಕ್ಕೆ ನ್ಯಾಯ ಸಲ್ಲುವುದಿಲ್ಲ.
ನಮ್ಮ ದುರುದ್ದೇಶದ ಕುರಿತು ಅವರು ಕಟ್ಟಿಕೊಂಡಿರುವ ಚಿತ್ರಗಳನ್ನು ಅವರ ಲೇಖನದ ಮೂಲಕ ಗ್ರಹಿಸುತ್ತ ಹೋದಾಗ ನಮ್ಮ ಕುರಿತು ಯಾವ ರೀತಿಯ ಚಿತ್ರಣವು ಅವರ ವಲಯದಲ್ಲಿ ಗಟ್ಟಿಯಾಗುತ್ತಿದೆ ಎಂಬುದಕ್ಕೆ ಮತ್ತೊಂದು ದೃಷ್ಟಾಂತ ಸಿಕ್ಕಂತಾಯಿತು. ಹಾಗಂತ ಇದೇನೂ ನನಗೆ ಆಘಾತ ನೀಡಲಿಲ್ಲ.
Posted in ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ವಚನ ಸಂವಾದ
ವಚನ ಸಾಹಿತ್ಯ ಹಾಗೂ ಜಾತಿ ವ್ಯವಸ್ಥೆ: ರಾಜೇಂದ್ರ ಚೆನ್ನಿಯವರಿಗೊಂದು ಪ್ರತಿಕ್ರಿಯೆ
ಇದು ರಾಜೇಂದ್ರ ಚೆನ್ನಿಯವರು ಲಡಾಯಿ ಬ್ಲಾಗ್‌ನಲ್ಲಿ ಬರೆದ ಲೇಖನಕ್ಕೆ (ರಾಜೇಂದ್ರ ಚೆನ್ನಿಯವರ ಲೇಖನ ಓದಲು ಕ್ಲಿಕ್ ಮಾಡಿ) ನನ್ನ ಪ್ರತಿಕ್ರಿಯೆ. ಅವರ ಲೇಖನ ಸಾಕಷ್ಟು ಉದ್ದವಿದ್ದರೂ ಅದರಲ್ಲಿ ಉತ್ತರ ಕೊಡಲು ಯೋಗ್ಯವಾದ ವಿಚಾರಗಳಿರುವುದು ಎರಡು ಅಥವಾ ಮೂರು ಮಾತ್ರ. ಉಳಿದದ್ದೆಲ್ಲಾ ವೈಯುಕ್ತಿಕ ನಿಂದನೆಗಳು, ಆಧಾರ ರಹಿತ ಆಪಾದನೆಗಳು, ಮತ್ತು ಬಾಲಿಶ ಹಾಸ್ಯಗಳು. ಅವುಗಳಿಗೆ ಉತ್ತರ ಕೊಡುವುದು ಘನತೆಯ ವಿಚಾರವಲ್ಲ.
೧.ಮೇಲುಚಲನೆಯ ಕುರಿತು: ಡಾ.ಷಣ್ಮುಖರವರು ಹೇಳುವ ನನ್ನ “ಪ್ರಬಂಧದಲ್ಲಿ ಎಲ್ಲೂ ಈಗ ಇರುವ ವಚನಗಳು ಜಾತಿ(ವ್ಯವಸ್ಥೆ) ವಿರೋಧಿ ಚಳುವಳಿ ಎಂಬ ಕಥೆಯನ್ನು ವೀರಶೈವರು ತಮ್ಮ ಮೇಲುಚಲನೆಗಾಗಿ ಹರಡಿದರು ಎನ್ನುವ ವಾದವಿಲ್ಲ” ಎಂಬುದನ್ನು ಅಲ್ಲಗಳೆಯುತ್ತಾ ಚೆನ್ನಿಯವರು ನಾನು ನನ್ನ ಪ್ರಬಂಧದಲ್ಲಿ ತನ್ನ ಅಸ್ಮಿತೆ ಹಾಗೂ ಸಂಘಟನೆಯನ್ನು ಬಲಪಡಿಸುವ ಪ್ರಯತ್ನದಲ್ಲಿ ಬ್ರಿಟಿಷರು ಕಟ್ಟಿಕೊಟ್ಟ ಚಿತ್ರಣಗಳನ್ನು ತನಗೆ ಅಪ್ಯಾಯಮಾನವಾಗಿ ಕಂಡಿದ್ದರಿಂದ ಆಧುನಿಕ ವೀರಶೈವ ಶಿಕ್ಷಿತ ವರ್ಗವು ಒಪ್ಪಿಕೊಂಡಿತು ಎಂದು ವಾದಿಸುತ್ತೇನೆ ಎಂದು ಹೇಳುತ್ತಾರೆ.
ಈ ಕುರಿತು ಈಗಾಗಲೇ ಬಹಳಷ್ಟು ತಪ್ಪು ಅಭಿಪ್ರಾಯಗಳು ಚಲಾವಣೆಗೆ ಬಂದಿರುವುದರಿಂದ, ನನ್ನ ವಾದ ಏನು ಎಂಬುದನ್ನು ಮತ್ತೊಮ್ಮೆ ವಿಶದ ಪಡಿಸುತ್ತೇನೆ.
Posted in ಡಂಕಿನ್ ಝಳಕಿ, ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ವಚನ ಸಂವಾದ
16 May 2013
ಇಲ್ಲಿ ನೈತಿಕತೆಯೇ ಗೈರುಹಾಜರಾಗಿದೆ
* ರಾಜೇಂದ್ರ ಚೆನ್ನಿ
`ಜಗತ್ತಿನ ಬೌದ್ಧಿಕ ವಲಯದಲ್ಲಿಯೇ ಒಂದು ಮೂಲಭೂತವಾದ ಪಲ್ಲಟವನ್ನು ಮತ್ತು ಭಾರತೀಯ ಸಾಮಾಜಿಕ ವಿಜ್ಞಾನಗಳ ಮೂಲಸ್ವರೂಪವನ್ನೇ ಪುನರ್‌ರಚಿಸುವ ಸೈದ್ಧಾಂತಿಕ, ತಾತ್ವಿಕ ಪಲ್ಲಟಗಳು ಈ ವಾದಗಳಿಂದ ಆಗಿವೆ, ಆಗಬೇಕು' ಎಂದು ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಒಂದು ಗುಂಪು ಪ್ರತಿಪಾದಿಸುತ್ತಾ ಬಂದಿದೆ. ಅಲ್ಲದೇ `ಇದನ್ನು ಅರ್ಥಮಾಡಿಕೊಳ್ಳಲಾಗದ `ಕನ್ನಡ ಬುದ್ಧಿಜೀವಿಗಳು' ತಿರಸ್ಕಾರಕ್ಕೆ ಯೋಗ್ಯರೆಂದು' ವಾದಿಸುತ್ತಾ ಬಂದಿದೆ.
Posted in ಡಂಕಿನ್ ಝಳಕಿ, ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ರಾಜೇಂದ್ರ ಚೆನ್ನಿ, ವಚನ ಸಂವಾದ
15 May 2013
ಸಂಶೋಧನೆಯ ರೂಪುರೇಷೆಗಳನ್ನರಿಯದ ವಿಮರ್ಶಕರು
* ಡಂಕಿನ್ ಝಳಕಿ
ಇಂದಿನ (04/05/2013) ಪ್ರಜಾವಾಣಿಯಲ್ಲಿ ಜಿ.ಬಿ. ಹರೀಶರು ಬರೆದ ಲೇಖನ ಮತ್ತು ಇದುವರೆಗೂ ಬಂದಿರುವ ಇನ್ನಿತರ ಪ್ರತಿಕ್ರಿಯೆಗಳಲ್ಲಿ ಸಂಶೋಧನೆ ಎಂದರೇನು ಎಂಬ ವಿಚಾರದ ಕುರಿತು ಬಹಳಷ್ಟು ಗೊಂದಲವನ್ನು ನಾವು ಕಾಣಬಹುದು. ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಯಲ್ಲಿ ನಾವು ಪದೇಪದೇ ಕಾಣುವ ಹಲವು ಸಣ್ಣ ದೊಡ್ಡ ತಪ್ಪುಗಳು ಈ ಪ್ರತಿಕ್ರಿಯೆಗಳ ತುಂಬಾ ಕಾಣಿಸುತ್ತವೆ. ಅಂತಹ ಕೆಲವು ಸಮಸ್ಯೆಗಳನ್ನು ಕುರಿತು ಚರ್ಚಿಸುವುದೇ ಈ ಪುಟ್ಟ ಲೇಖನದ ಉದ್ದೇಶ.
(೧) ಸಂಶೋಧನೆಗಳು ಮತ್ತು ಉಲ್ಲೇಖಗಳು: ನಾನು ನನ್ನ ಲೇಖನ ಮತ್ತು ಪ್ರಬಂಧಗಳಲ್ಲಿ ಯಾರನ್ನು ಮತ್ತು ಎಷ್ಟು ಮಂದಿಯನ್ನು ಉಲ್ಲೇಖಿಸುತ್ತೇನೆ ಮತ್ತು ಉಲ್ಲೇಖಿಸುವುದಿಲ್ಲ ಎಂಬ ವಿಚಾರವನ್ನು ಕುರಿತು ಮಾತನಾಡುತ್ತಾ ಹರೀಶರು ಹೀಗೆ ಹೇಳುತ್ತಾರೆ “ವಚನ ಸಾಹಿತ್ಯದ ಬಗ್ಗೆ ಅಪಾರ ಒಳನೋಟವಿರುವ ಬರಹಗಳನ್ನು ಬರೆದಿರುವ ಜ.ಚ.ನಿ. ಸಿದ್ದೇಶ್ವರಸ್ವಾಮಿಗಳಾಗಲಿ, ಕಪಟರಾಳ ಕೃಷ್ಣರಾವ್, ಎಂ.ಆರ್. ಶ್ರಿನಿವಾಸಮೂರ್ತಿಯವರಾಗಲಿ, ಈ ಬರಹದುದ್ದಕ್ಕೂ ಎಲ್ಲೂ ಕಾಣಿಸುವುದಿಲ್ಲ. ಕಿ.ರಂ. ನಾಗರಾಜರೂ ಇಲ್ಲಿ ಗೈರುಹಾಜರಿ.”
Posted in ಡಂಕಿನ್ ಝಳಕಿ, ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ರಾಜೇಂದ್ರ ಚೆನ್ನಿ, ವಚನ ಸಂವಾದ
14 May 2013
ಸಾಮಾಜಿಕ ಸಂಶೋಧನೆ ಯಾಕಾಗಿ?
Posted in ಡಂಕಿನ್ ಝಳಕಿ, ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ರಾಜೇಂದ್ರ ಚೆನ್ನಿ, ವಚನ ಸಂವಾದ
07 May 2013
ನಮ್ಮ ವಿಶ್ವವಿದ್ಯಾಲಯಗಳಲ್ಲಿ ಸಾಮಾಜಿಕ ಸಂಶೋಧನೆಗೆ ಭವಿಷ್ಯವಿದೆಯೆ?
* ಪ್ರೊ. ರಾಜಾರಾಮ ಹೆಗಡೆ ಮತ್ತು ಡಾ. ಷಣ್ಮುಖ. ಎ
ಇತ್ತೀಚೆಗೆ ಜಾಲತಾಣದಲ್ಲಿ ಸುತ್ತಾಡುತ್ತಿದ್ದ ಒಂದು ಪುಸ್ತಕ ವಿಮರ್ಶೆಯ ಪ್ರಾರಂಭಿಕ ಸಾಲುಗಳು ನಮ್ಮನ್ನು ಬೆಚ್ಚಿಬೀಳಿಸಿದವು. ಅವು ಹೀಗಿವೆ:
“ಈ ಕೃತಿಯು ನನ್ನಲ್ಲಿ ಹುಟ್ಟಿಸಿದ ವೈಚಾರಿಕ ಕುತೂಹಲವನ್ನು ಹೀಗೆ ವಿವರಿಸಬಹುದು. ಮನುಷ್ಯರು ಓದು, ಬುದ್ಧಿಶಕ್ತಿ, ತರ್ಕ ಹಾಗೂ ಭಾಷೆಯನ್ನು ಮಾನವ ದ್ವೇಷಿಯಾದ ಬೌದ್ಧಿಕ ಕೆಲಸಗಳಿಗೆ ಏಕೆ ಬಳಸುತ್ತಾರೆ? ಪಾಂಡಿತ್ಯವೆಂದು ಕರೆಯಲಾಗುವ ಸಂಗತಿಯು ಒಂದು ವಲಯದಲ್ಲಿ ಅಂತಃಕರಣ, ಪ್ರೀತಿ, ಇತರರ ಬಗ್ಗೆ ಸದ್ಭಾವನೆ ಮುಂತಾದ ಭಾವನೆಗಳಿಂದ ಸಂಪೂರ್ಣ ಪರಕೀಯವಾಗಿ, ಕ್ರೂರವಾದ ಅಭಿಪ್ರಾಯಗಳನ್ನು ಸಮರ್ಥಿಸುವ `ತರ್ಕದ ಟಗರ ಹೋರಟೆ’ ಯಾಕೆ ಆಗುತ್ತದೆ? ಬಹು ಸಂಖ್ಯಾತ ಜನರಿಗೆ ಮನುಷ್ಯರಾಗಿ ಬದುಕುವ ಅವಕಾಶಗಳೇ ಇಲ್ಲವಾಗುತ್ತಿರುವ ಬಡದೇಶದಲ್ಲಿ ಅತಿಶಯವಾದ ಸವಲತ್ತುಗಳನ್ನು ಪಡೆದಿರುವ ವಿಶ್ವವಿದ್ಯಾಲಯಗಳ ಬುದ್ಧಿಜೀವಿ ಹಾಗು ಸಂಶೋಧಕವರ್ಗವು ಈ ಜನರು ಆಳವಾಗಿ ನಂಬಿಕೊಂಡು ಬಂದಿರುವ ಸಮಾನತೆ, ನ್ಯಾಯ ಮುಂತಾದ ಮೌಲ್ಯಗಳನ್ನು ಉಡಾಫೆಯಿಂದ ತಿರಸ್ಕರಿಸುವ ದುಷ್ಟತನದ ಮೂಲವು ಎಲ್ಲಿದೆ? ನಿರ್ದಿಷ್ಟವಾಗಿ ಹೇಳುವುದಾದರೆ ಪಾಂಡಿತ್ಯ ಮತ್ತು ಬುದ್ಧಿಶಕ್ತಿಗಳು Evil ನ ಅತ್ಯಂತ ಆಳವಾದ ಕೆಡುಕಿನ ರೂಪಗಳೇಕೆ ಆಗುತ್ತವೆ?”
Posted in Research, ಪ್ರೊ.ರಾಜಾರಾಮ ಹೆಗಡೆ, ವಚನ ಸಂವಾದ
29 April 2013
ಈ ಯುಕ್ತಿ ಈ ಕುಯುಕ್ತಿ ಈ ಸಂಶೋಧನೆ ಯಾಕಾಗಿ
ಈ ಯುಕ್ತಿ ಈ ಕುಯುಕ್ತಿ ಈ ಸಂಶೋಧನೆ ಯಾಕಾಗಿ? `ನಿಮ್ಮ ತಾಯಿ ಬಂಜೆ' ಅಂದರೆ ಏನು ತಾನೇ ಹೇಳಲು ಸಾಧ್ಯ? `ನಿಮಗೆ ತಲೆ ಕೆಟ್ಟಿದೆಯಾ' ಎಂದು ನಾವು ಪ್ರಶ್ನಿಸಬಹುದು ಅಷ್ಟೇ. ಅದಕ್ಕೆ ಅವರು ಆತ್ಮವಿಶ್ವಾಸದಿಂದ ಹೇಳುತ್ತಾರೆ, `ನಾವು ಸಂಶೋಧನೆ ಮಾಡಿದ್ದೇವೆ' ಅಂತ. `ಏನಪ್ಪಾ ಅಂಥ ಸಂಶೋಧನೆ?' ಅಂದರೆ `ನೀವು ಹುಟ್ಟಿದಾಗಲಿಂದ ಇಷ್ಟು ಕೋಟಿ, ಇಷ್ಟು ಲಕ್ಷ, ಇಷ್ಟು ಸಾವಿರ ಪದಗಳನ್ನು ಉಚ್ಚಾರ ಮಾಡಿರುತ್ತೀರಿ. ಅದರಲ್ಲಿ ಶೇಕಡಾ ಒಂದರಷ್ಟು ತಾಯಿ ಅಥವಾ ಅವ್ವ ಪದ ನಿಮ್ಮ ಬಾಯಿಂದ ಬಂದಿರುವುದಿಲ್ಲ.
ಹಾಗಾಗಿ ನಿಮ್ಮ ತಾಯಿ ಬಂಜೆ ಅಲ್ಲವೇ?' ಎಂದು ದಿಗ್ವಿಜಯ ಸಾಧಿಸಿದವರಂತೆ ಎದೆ ತಟ್ಟಿ ಹೇಳುತ್ತಾರೆ. ಡಂಕಿನ್ ಝಳಕಿಯವರ ತಳಪಾಯವೇ ಅಲ್ಲಾಡುತ್ತಿದೆ. ಅದರ ಮೇಲೆ ಸಂಶೋಧನಾ ಸೌಧ ಕಟ್ಟಲು ಹೊರಡುತ್ತಾರೆ. ಪ್ರಾಥಮಿಕ ಶಾಲಾ ಮಕ್ಕಳು ಸೂಟುಬೂಟು ಹ್ಯಾಟು ಟೈ ಹಾಕಿಕೊಂಡು ತಲೆಗೆ ಬಿಳಿ ವಿಗ್ ಕಣ್ಣಿಗೆ ಸೋಡಾಗ್ಲಾಸಿನ ಕನ್ನಡಕ ಧರಿಸಿ ಇದನ್ನು ಒಂದು `ಸಂಶೋಧನಾ ಪ್ರಹಸನ'ದಂತೆ ಪ್ರದರ್ಶಿಸಿದ್ದರೆ ಈ ಬಾಲಗುಂಪಿನ ಚಾತುರ್ಯಕ್ಕೆ ನಾವೂ ಸಂತಸಪಡಬಹುದಿತ್ತು.
ಆದರೆ ಇದು ಹಾಗಲ್ಲ. ಸಂತೆಗೆ ಮಾರಲು ಆಡು ಹಿಡಿದುಕೊಂಡು ಹೋಗುವ ಬಡವನೊಬ್ಬನಿಗೆ ನಾಕಾರು ಕಳ್ಳರು ಮೈಲಿಗೊಬ್ಬರಂತೆ ನಿಂತು `ನಾಯಿ ಹಿಡಿದುಕೊಂಡು ಎಲ್ಲಿಗೆ ಹೊರಟೆ?' ಎಂದು ಅಪಹಾಸ್ಯ ಮಾಡುತ್ತಾ ಬಡವನಿಗೆ ಮಂಕು ಕವಿಸಿ ಅವನೂ ಭ್ರಮೆಗೆ ಒಳಗಾಗಿ ತನ್ನ ಆಡನ್ನು ನಾಯಿ ಎಂದೇ ತಾನೂ ಭ್ರಮಿಸಿ ಅಲ್ಲೇ ಬಿಟ್ಟು ಹೋದಮೇಲೆ ಆಗ ಮಾತ್ರವೇ ಆ ಆಡನ್ನು ಕದಿಯುವ ಚತುರ ಚೋರರ ಸಂಚಿನ ಜಾಲದಂತೆ ಈ ಬಾಲಗುಂಪಿನ ಕೃತ್ಯ ಗೋಚರಿಸುತ್ತದೆ. ಆ ನಾಲ್ವರು ಕಳ್ಳರು ಆ ಬಡವನಿಂದ ಆಡನ್ನು ಬಲಾತ್ಕಾರದಿಂದ ಕಿತ್ತುಕೊಂಡೇ ಹೋಗಬಹುದಿತ್ತು. ಆದರೆ ಅವರು ಇಲ್ಲಿ ಮಾಡಿದ್ದು ಅಭಿಪ್ರಾಯ ರೂಪಿಸುತ್ತ ಮಾಡುವ ಮರೆಮೋಸದ ಕಳ್ಳತನ. ಅವರೂ ಸಂಶೋಧಕರೇ ಇರಬಹುದು. ಇಂದು ಕಾರ್ಪೊರೆಟ್ ಸೆಕ್ಟರ್‌ಗಳು ಅಭಿಪ್ರಾಯ ರೂಪಿಸಿ ಕಳ್ಳತನ ಮಾಡುವ ವಂಚನಾ ಕಲೆಯ ಕೌಶಲದಂತೆ ಈ ಸಂಶೋಧನೆ ಎಂಬುದೂ ಈ ಮಾರ್ಗ ಹಿಡಿಯುತ್ತಿದೆ.
ಇಲ್ಲೇನು ಕಳ್ಳತನ? ಅಥವಾ ಇದು ಯಾಕಾಗಿ? `ಸಾಮಾಜಿಕ ನ್ಯಾಯ, ಮೀಸಲಾತಿ, ಸರ್ವರಿಗೂ ಶಿಕ್ಷಣ, ಪ್ರಜಾಪ್ರಭುತ್ವ, ಸೆಕ್ಯುಲರಿಸಂ ಇಂಥವುಗಳೆಲ್ಲ ಪಾಶ್ಚಿಮಾತ್ಯ ವಸಾಹತುಶಾಹಿ ಪ್ರಭಾವದಿಂದ ಕಟ್ಟಲ್ಪಟ್ಟವು, ಇಂಥವುಗಳು ಭಾರತೀಯ ಅಲ್ಲ' ಎಂದು ಇವರು ಸಂಶೋಧನೆ ಜರುಗಿಸುತ್ತಿದ್ದಾರೆ. ಇಂಥವು ಇಲ್ಲಿಯವು ಅಲ್ಲ ಅಂತ ಇವುಗಳನ್ನು ಬುಡಸಮೇತ ಕಿತ್ತುಹಾಕುವ ಹುನ್ನಾರ ಇಲ್ಲಿದೆ. ಅದಕ್ಕಾಗಿ ಜಾತಿ, ಧರ್ಮ, ಅಧ್ಯಾತ್ಮ ಹಿಡಿದುಕೊಂಡು ಇದರ ಸುತ್ತಲೇ ಸುತ್ತುತ್ತಿದ್ದಾರೆ, ಬಲಿಪಶುವಿನ ಸುತ್ತಾ ಸುತ್ತುವ ಆಚರಣೆಯ ಪ್ರದರ್ಶನಕಾರರಂತೆ, ವೈದಿಕಶಾಹಿಯ ಯಾವುದೋ ಪಳೆಯುಳಿಕೆಯಂತೆ.
ಹೀಗೆ ಇವರ ಸಂಶೋಧನೆ `ಜಾತಿಗಳು ಇವೆ. ಆದರೆ ಜಾತಿವ್ಯವಸ್ಥೆ ಎಂಬುದು ಇಲ್ಲ' ಎಂದು ಹೇಳುತ್ತದೆ. ನನಗೆ ತಲೆಕೆಟ್ಟು ಹೋಗಿ ಪಿಯುಸಿ ಓದಿ, ಗಾರೆ ಕೆಲಸ ಮಾಡುವ ಹುಡುಗನೊಬ್ಬನಿಗೆ `ಏನಪ್ಪಾ ಹೀಗೆ ಅಂದರೆ' ಎಂದು ಕೇಳಿದೆ. ಅದಕ್ಕೆ ಅವ `ಇದು ಯಾವ್ತರಪ್ಪಾ ಅಂದ್ರೆ... ಹುಟ್ಟುಸ್ದೇ ಹೆರದೇ ಮಕ್ಳಾಯ್ತು ಅನ್ನೋತರ ಆಯ್ತದಲ್ಲಾ ಸಾರ್!' ಅಂದ! ಈ ಸಂಶೋಧಕರು ಬೆಟ್ಟ ಅಗೆದು ಇಲಿ ಹಿಡಿಯುತ್ತಿದ್ದಾರೆ ಅನಿಸುತ್ತೆ. ಇದರೊಡನೆ ಜಾತಿಗಳ ನಡುವೆ ಮೇಲು ಕೀಳು ಇಲ್ಲ ಅಂತ ತೋರಿಸಲು ದಣಿವರಿಯದ ಸಂಶೋಧನೆ ನಡೆಸುತ್ತಿದ್ದಾರೆ. ಜಾತಿವ್ಯವಸ್ಥೆ, ಜಾತಿಗಳ ನಡುವೆ ಮೇಲು ಕೀಳು ಇದ್ದರೆ ತಾನೇ ಸಾಮಾಜಿಕ ನ್ಯಾಯ, ಮೀಸಲಾತಿ ಇತ್ಯಾದಿಗಳಿಗೆ ಅರ್ಥ. ಅದೇ ಇಲ್ಲ ಎಂದು ಭ್ರಮಿಸುವಂತೆ ಮಾಡಿಬಿಟ್ಟರೆ? ಮೀಸಲಾತಿ, ಸಾಮಾಜಿಕ ನ್ಯಾಯ ಇತ್ಯಾದಿಗಳನ್ನು ಕದಿಯುವುದಲ್ಲದೆ ಇದು ಮತ್ತೇನು? ಅದಕ್ಕಾಗಿ ಭಾರತದಲ್ಲಿ ಜಾತಿವ್ಯವಸ್ಥೆಯನ್ನು ಹುಟ್ಟು ಹಾಕಿದ್ದೇ ಬ್ರಿಟಿಷ್ ವಸಾಹತುಶಾಹಿ ಅಂತ `ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ' ಎಂಬಂತೆ ಮಾಡುತ್ತಿದ್ದಾರೆ. ಕಣ್ಣೆದುರು ಕಾಣುವುದನ್ನು ಮರೆಮಾಚಿ ತಮಗೆ ಬೇಕಾದ್ದನ್ನು ವಿಜೃಂಭಿಸಿ ವಾದಿಸುವ ವಕೀಲರಂತಾಗಿಬಿಟ್ಟಿದ್ದಾರೆ.
ಮುಂದುವರೆದಂತೆ ಇವರು ಜಾತಿಯನ್ನು ಜಾತಿಯಷ್ಟಕ್ಕೇ ಉಳಿಯಗೊಡಲೂ ಬಿಡುವುದಿಲ್ಲ. ಇವರ ಚಿಂತನಾ ಲಹರಿ ಹೀಗಿದೆ: ಜಾತಿಗಣತಿಯು ಸಮಾಜದಲ್ಲಿ ಬದುಕುತ್ತಿರುವ ಜನರ ಸ್ವ-ಅನುಭವವನ್ನು ಗ್ರಹಿಸುವಂತಿರಬೇಕು. ಲಿಂಗಾಯತ ಎಂಬುದನ್ನು (ಒಂದು) ಜಾತಿಯನ್ನಾಗಿ ಗುರುತಿಸದೆ ಸಾದರು, ಬಣಜಿಗ, ಪಂಚಾಚಾರ್ಯ ಮುಂತಾದ ಸಮಾಜದ ಹತ್ತು ಹಲವು ವಾಸ್ತವ ಗುಂಪುಗಳನ್ನು ಜಾತಿ ಎಂದು ಗುರುತಿಸಬೇಕಾಗುತ್ತದೆ. ಅಂತೆಯೆ ಕುರುಬರನ್ನು ಒಂದು ಜಾತಿಯಾಗಿಸದೆ ಅದರಲ್ಲಿನ ಕಾಡುಕುರುಬ, ಊರುಕುರುಬ, ಹತ್ತಿ ಕಂಕಣ, ಉಣ್ಣೆ ಕಂಕಣ ಎಂಬ `ಸಾಮಾಜಿಕವಾಗಿ ಗುರುತಿಸುವಿಕೆಯುಳ್ಳ' ಜಾತಿಗಳನ್ನು ಗುರುತಿಸಬೇಕಾಗಿದೆ. ಹೀಗೆ ಜನರ ಅನುಭವಕ್ಕೆ ಪೂರಕವಾಗಿಯೇ ಗುರುತಿಸಬೇಕಾಗುತ್ತದೆ. ಇದು ಈ ಗುಂಪಿನ ವಾದ. ಇದರ ಜೊತೆಗೆ, ಭಾರತೀಯತೆ ಎಂದರೆ ಅದು ಆಚರಣೆ ಮತ್ತು ಸಂಪ್ರದಾಯ ಎಂದು ಈ ಸಂಶೋಧಕರು ವಾದಿಸುತ್ತಾರೆ. ಭಾರತದಲ್ಲಿ ಆಚರಣೆ ಮತ್ತು ಸಂಪ್ರದಾಯ ಅಂದರೆ ಏನು? ಇದನ್ನು ಕಣ್ಣು ಮುಚ್ಚಿಕೊಂಡು ಆಚರಣೆ ಉರುಫ್ ಉಪಜಾತಿ ಎಂದುಬಿಡಬಹುದಲ್ಲವೇ? ಅಂದರೆ ಈ ಸಂಶೋಧಕರು ಉಪಜಾತಿಗಳನ್ನು ಉಳಿಸಿಕೊಳ್ಳಲು ಉರುಳುಸೇವೆ ಮಾಡುತ್ತಿದ್ದಾರೆ. ಇವರಿಗೆ ಉಪಜಾತಿಗಳೆಲ್ಲವೂ ಸೇರಿ ಜಾತಿಯಾಗುವುದೂ ಬೇಕಿಲ್ಲ. ಆ ಜಾತಿ ಈ ಜಾತಿ ಬೆರೆತು ಒಂದು ಧರ್ಮವಾಗುವುದೂ ಬೇಕಿಲ್ಲ. ಒಟ್ಟಿನಲ್ಲಿ ಭಾರತೀಯರು ತಂತಮ್ಮ ಉಪಜಾತಿ ಬಚ್ಚಲೊಳಗೆ ಹುಳಗಳಂತಿರಬೇಕು. ಇದನ್ನೆ ಇವರು ಭಾರತೀಯತೆ ಅಂತಾರೆ. ಈ ಹಿಂದೆ ಬ್ರಿಟಿಷರು ಆಳ್ವಿಕೆ ನಡೆಸಲು ಭಾರತವನ್ನು ಜಾತಿಗಳಾಗಿ ಒಡೆದರು ಎಂದು ವಾದಿಸುವ ಇವರು ಈಗ ಯಾರು ಆಳ್ವಿಕೆ ನಡೆಸಲಿ ಎಂದು ಉಪಜಾತಿಗಳನ್ನು ಉಲ್ಬಣಿಸುತ್ತಿದ್ದಾರೆ? ದುಡಿಯುವ ವರ್ಗ ಎಂದೂ ಒಂದಾಗಬಾರದು ಎಂಬ ಈ ಆಶಯದೊಳಗೆ ಏನೇನಿದೆ? ಇಂದು ಕಾರ್ಪೊರೆಟ್ ಸೆಕ್ಟರ್ ಕೃಪಾಪೋಷಿತರಾದ ಕೆಲವು ಎನ್.ಜಿ.ಓ.ಗಳು ಭಾರತದಲ್ಲಿ ಇರುವ ಸಮಸ್ಯೆ, ಪ್ರತ್ಯೇಕತೆಗಳನ್ನು ಉಲ್ಬಣಿಸಿ ದುಡಿಯುವ ವರ್ಗ ಒಂದಾಗದಂತೆ ಕಾಯುವ ಕೆಲಸ ಮಾಡುತ್ತಾ ಸಮುದಾಯ ಆಂದೋಲನಕ್ಕೆ (mass movement) ತೊಡರುಗಾಲು ಹಾಕುತ್ತಿರುವಂತೆಯೇ ಈ ಬಾಲುಗುಂಪೂ ಕೂಡ ಭಾರತದ ಸಾಮಾಜಿಕ ಛಿದ್ರತೆಗಳನ್ನು ಮತ್ತೂ ಛಿದ್ರಗೊಳಿಸುವ ಕೃತ್ಯದಲ್ಲಿ ತೊಡಗಿರಬಹುದಾ? ಭಾರತವು ಉಪಜಾತಿಗಳಾಗಿ ಛಿದ್ರಾತಿಛಿದ್ರವಾದರೆ ಅಮೆರಿಕಾ ಅಥವಾ ಐರೋಪ್ಯ ವಸಾಹತುಶಾಹಿಗೆ ಭಾರತವನ್ನೇ ಆಹಾರವಾಗಿಸಿ ಉಣಬಡಿಸಿದಂತಾಗುವುದಿಲ್ಲವೇ? ದುಡಿಯುವ ವರ್ಗ ಒಂದಾಗದಂತೆ ಮಾಡುವ ಈ ಸಂಶೋಧನೆಯು ಯೂರೋ ಲಿಂಕ್ ಸಂಚಿನ ಫಲವೇ? ಗುಮಾನಿ ಹುಟ್ಟುತ್ತಿದೆ. ಇವರ ಚಲನವಲನಗಳ ಮೇಲೆ ಕಣ್ಣಿಡಬೇಕಾಗಿದೆ.
ಹಾಗೆ ಇವರು ಜಾತಿಗಳನ್ನು ಉಳಿಸಿಕೊಂಡು ಜಾತಿವ್ಯವಸ್ಥೆ ಇಲ್ಲ ಎನ್ನುವುದರಲ್ಲಿ ಮತ್ತೊಂದು ಒಳಮರ್ಮವೂ ಇದ್ದಿರಬಹುದೇ? ಈ ಭ್ರಮಾಧೀನ ಬಾಲಸಂಶೋಧಕರಿಗೆ, ಜಾತಿ ಹುಟ್ಟುಹಾಕಿದ ಪಿತೃಗಳು ಮೋಕ್ಷ ಕಾಣದೆ ಭೂಮಿ ಮೇಲೆ ಅಲೆದಾಡುತ್ತಿರುವಂತೆ ಆಗಾಗ ಗೋಚರಿಸುತ್ತಾ, ಅದನ್ನು ಮರೆಮಾಚುವ ಹತಾಶ ಪ್ರಯತ್ನ ಇಲ್ಲಿರಬಹುದೇ? ಜಾತಿ ವ್ಯವಸ್ಥೆಯೇ ಇಲ್ಲ ಎಂದು ವಾದ ಕಟ್ಟಿಬಿಟ್ಟರೆ(Fabricated), ಆಗ ಜಾತಿಗಳ ಹುಟ್ಟಿಗೆ ಕಾರಣರು ಯಾರೂ ಅಲ್ಲ ಅಂತಾಗಿ ಬಿಟ್ಟರೆ, ಆಗ ಯಾವ ತಪ್ಪಿನ ಭಾವನೆಯೂ ಇಲ್ಲದೆ ನೆಮ್ಮದಿಯಿಂದ ಇರಬಹುದಲ್ಲ ಎಂದು ಇವರು ಹೊರಟಿದ್ದಾರೆಯೆ? ಹಾಗಾದರೆ ನೆನಪಿರಲಿ, ಈ ಮರೆಮಾಚಿ ಬರುವ ನೆಮ್ಮದಿಯು- ಆತ್ಮ ಎಂಬುದು ಇದ್ದರೆ ಅದನ್ನೇ ಕೊಂದುಬಿಡುತ್ತದೆ, ಸತ್ಯಕ್ಕೆ ಮುಖಾಮುಖಿಯಾಗುವುದನ್ನು ತಪ್ಪಿಸಿಬಿಡುತ್ತದೆ; ಸಂವೇದನಾಶೀಲ ಸೃಷ್ಟಿಶೀಲ ಮನಸ್ಸಿಗೆ ಎಳ್ಳು ನೀರು ಬಿಟ್ಟಂತೂ ಆಗುತ್ತದೆ. ಇಂಥದೇನಾದರೂ ಇದ್ದಲ್ಲಿ ಈ ಸಂಶೋಧಕರು ಅದನ್ನು ನಿವಾರಿಸಿಕೊಂಡರೆ ಅವರಿಗೇ ಕ್ಷೇಮ. ಹಾಗೂ ಸುತ್ತಲಿನ ಸಮಾಜಕ್ಕೂ ಒಳ್ಳೆಯದು.
ಈ ಜಾತಿಯಾದ ಮೇಲೆ ಈ ಸಂಶೋಧಕರು ಮುಂದೆ ಭಾರತದ ಧರ್ಮಗಳ ಕತ್ತು ಹಿಸುಕಲು ಹೊರಡುತ್ತಾರೆ. ಅದಕ್ಕಾಗಿ ಈ ಸಂಶೋಧಕರು, ಕ್ರಿಶ್ಚಿಯನ್ ಥಿಯಾಲಜಿ ಪರಿಭಾಷೆಯಲ್ಲಿ ಭಾರತವನ್ನು ನೋಡಿದ ದೃಷ್ಟಿಕೋನದಿಂದಾಗಿ ಇಲ್ಲಿ ರಿಲಿಜನ್ ಪರಿಕಲ್ಪನೆ ಬಂತೆಂದೂ ಈ ದೃಷ್ಟಿಕೋನದ ಕಾರಣವಾಗೆ ಬುದ್ಧ ಅಲ್ಲಮ ಬಸವಣ್ಣ ಮುಂತಾದವರನ್ನು ಪ್ರೊಟೆಸ್ಟೆಂಟ್ ಸುಧಾರಕರಂತೆ ಭಾವಿಸಲು ಕಾರಣವಾಯಿತು ಎಂದೂ ವಾದಿಸುತ್ತಾರೆ. ಭಾರತದ ದೇವಸ್ಥಾನಗಳನ್ನು, ಮಸೀದಿಗಳನ್ನು ಅಗೆಯುತ್ತ ಆಳಕ್ಕೆ ಹೋದರೆ ಬೌದ್ಧ,ಜೈನ, ಲಿಂಗಾಯತ ಎಲ್ಲವೂ ಒಂದರೊಳಗೊಂದು ಸಿಕ್ಕುವುವು. ಕ್ರಿಸ್ತ ಹುಟ್ಟುವ ಮೊದಲು ಇಲ್ಲಿ ಮತಾಂತರ ಜರುಗಿದೆ. ಕೇವಲ ಸಂಪ್ರದಾಯ ಆಚರಣೆಗಳೇ ಭಾರತವಾಗಿದ್ದರೆ ಇದೆಲ್ಲ ಹೇಗಾಗುತ್ತಿತ್ತು? ಇವರ ಉದ್ದಿಶ್ಯ ಇಷ್ಟೆ ಅನ್ಸುತ್ತೆ: ಭಾರತದಲ್ಲಿ ಯಾವುದೇ ಧರ್ಮಗಳು ಇರಬಾರದು. ಜಾತಿಗಳೂ ಇರಬಾರದು. ಉಪಜಾತಿಗಳು ಮಾತ್ರ ಇದ್ದು ಇದು ಭಾರತವಾಗಿರಬೇಕು. ಇದು ಭಾರತ ಇವರಿಗೆ.
ಜೊತೆಗೆ, ಈ ಸಂಶೋಧಕರು ಭಾರತವನ್ನು ತಮಗೆ ಬೇಕಾದಂತೆ ಗ್ರಹಿಸುತ್ತಾರೆ ಎಂಬುದಕ್ಕೆ ಉದಾಹರಣೆ- ವಚನಗಳನ್ನು ಕುರಿತು ಇವರು ಆಡುತ್ತಿರುವ ಮಾತು. ವಚನಗಳು ಇಡೀ ಕರ್ನಾಟಕವನ್ನು ಉದ್ದೇಶಿಸಿ ಮಾತಾಡುತ್ತಿದ್ದರೂ, ಈ ವಚನಗಳು ತನ್ನ ಮಾರ್ಗದ ಸಾಧಕರ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತವೆ ಎನ್ನುವ ಇವರು ತಾವು ಮಾತ್ರ ಇಡೀ ಭಾರತವನ್ನೇ ತಮ್ಮದು ಎನ್ನುವಂತೆ ಮಾತಾಡುತ್ತಾರೆ. ಹಾಗೇ ಬಾಲಗಂಗಾಧರರು ಅಧ್ಯಾತ್ಮದ ಬಗ್ಗೆ ಬರೆಯತ್ತಾ `ಪಾಶ್ಚಾತ್ಯರ ಆನಂದದ ಕಲ್ಪನೆಯಲ್ಲಿ ಈ ಪ್ರಪಂಚವನ್ನೇ ಬದಲಾಯಿಸುವ ಕಾರ್ಯಕ್ರಮ ಮೂಲಭೂತವಾಗಿರುತ್ತದೆ. ಆದರೆ ಭಾರತೀಯರ ಅಧ್ಯಾತ್ಮವು ಕಂಡುಕೊಂಡ ಉತ್ತರವೆಂದರೆ ಪ್ರಪಂಚವು ಈಗಿರುವಂತೆಯೇ ಮನುಷ್ಯನು ಯಾವುದೇ ಅವಸ್ಥೆಯಲ್ಲೂ ಆ ಆನಂದವನ್ನು ಹೊಂದುವುದು ಸಾಧ್ಯ. ಈ ಸ್ಥಿತಿಯನ್ನು ತಲುಪಲಿಕ್ಕೆ ಪ್ರಪಂಚವನ್ನು ಬದಲಿಸುವುದರ ಬದಲಾಗಿ ಒಬ್ಬನು ತನ್ನ ಪ್ರಾಪಂಚಿಕ ಅನುಭವದಿಂದಲೇ ಮುಕ್ತನಾಗಬೇಕು' ಎನ್ನುತ್ತಾರೆ. ತನ್ನ ಸುತ್ತಲಿನ ಸಮಾಜದ ಬಿಡುಗಡೆಯೊಳಗೇ ತನ್ನ ಬಿಡುಗಡೆಯೂ ಇದೆ ಎಂಬ ಆಶಯದ ಮಹಾಯಾನ, ವಚನಧರ್ಮ ಮುಂತಾದವು ಇವರ ಕಣ್ಣಿಗೆ ಕಾಣುತ್ತಿಲ್ಲ. ಕಂಡರೂ ಭೂಗತಮಾಡುತ್ತಿದ್ದಾರೆ. ವೈದಿಕದ `ಅಹಂ'ಕಾರವು ವೈದಿಕ `ಶಾಹಿ'ಯಾಗಿ ಭಾರತದಲ್ಲಿ ತಾನು ಮಾತ್ರವೇ ವ್ಯವಸ್ಥೆ, ತಾನು ಮಾತ್ರವೇ ಆಳ್ವಿಕೆ ಎಂಬ `ಶಾಹೀ' ಕುಬುದ್ಧಿ ಕುತಂತ್ರವನ್ನು ಬಿಟ್ಟು `ವೈದಿಕ'ವಾಗಿ ತನ್ನಷ್ಟಕ್ಕೆ ತಾನೇ ಇದ್ದರೆ ಅದಕ್ಕೂ ಕ್ಷೇಮ. `ವೈದಿಕ'ದ ಹಿತವೂ ಇಲ್ಲಿದೆ. ಯಾಕೆಂದರೆ, ಈಗ ಇವರು ಆರಂಭಿಸಿರುವ ಕ್ರಿಶ್ಚಿಯನ್ ವಸಾಹತುಶಾಹಿ ಮುಗಿದು, ಮುಂದೆ ಈ ಸಂಶೋಧಕರು ಇಸ್ಲಾಂ ವಸಾಹತುಶಾಹಿಗೆ ಬಂದು ಅಬ್ಬರಿಸಿ, ಈ ಪರಿಪಾಠ ಮುಂದುವರೆದರೆ ಅದು ಎಲ್ಲಿಗೆ ತಲುಪುತ್ತದೆ? ಈ ನವಗೋಸುಂಬೆ ವೈದಿಕಶಾಹಿಯ ಕುತ್ತಿಗೆಗೆ ಕವೆಗೋಲು ಬೀಳುವಲ್ಲಿಗೆ ಬಂದು ನಿಲ್ಲುತ್ತದೆ.
ವೈದಿಕಶಾಹಿಯ ಇತಿಹಾಸ ಪುರಾಣವು ಈ ಸಂಶೋಧಕರ ಇಂಥದೇ ಪಟ್ಟುಗಳನ್ನು ಹಾಕಿಕೊಂಡು ಲಾಗಾಯ್ತಿನಿಂದ ಬರುತ್ತ- ಇಲ್ಲಿನ ಧರ್ಮಗಳನ್ನು ಜಾತಿಯನ್ನಾಗಿ ಉಳಿಸಿಕೊಂಡು ನೀಚಗೊಳಿಸಿದೆ. ಉದಾ: ಜೈನ, ಲಿಂಗಾಯತ. ಆದರೆ ಜಾತಿಯಾಗಿ ಬಗ್ಗದ ಧರ್ಮಗಳನ್ನು ಇದೇ ವೈದಿಕಶಾಹಿಯು ಭಾರತದ ಆಚೆಗೆ ಪಲಾಯನ ಮಾಡುವಂತೆ ಮಾಡಿದೆ. ಉದಾ-ಬೌದ್ಧ. ಈಗ ಬೌದ್ಧವು ತನ್ನ ಮನೆಗೆ ಅಂದರೆ ಭಾರತಕ್ಕೆ ಮರಳುತ್ತಿದೆ. ಹಾಲಿ ಜಾತಿಯಾಗಿಬಿಟ್ಟಿರುವ ವಚನಧರ್ಮವೂ ತನ್ನೊಳಗಿನ ವಚನಗಳೊಳಗಿನ ಅಂತಃಸತ್ವದಿಂದಲೇ ಮುಂದೊಂದು ದಿನ ಜಾತಿ ಬಚ್ಚಲಿನಿಂದ ಹೊರಬಂದು ಧರ್ಮವೂ ಆಗಿಬಿಡುವ ಸಾಧ್ಯತೆಯನ್ನು ಒಳಗೊಂಡಿದೆ. ಇದಾದರಂತೂ ಕರ್ನಾಟಕದ ನೆಲದ ಫಸಲಾದ ವಚನಧರ್ಮವು ಇಡೀ ಜಗತ್ತಿನ ದುಡಿಯುವ ವರ್ಗದ ಧರ್ಮವಾಗುವ ಸಾಧ್ಯತೆಯೂ ಅದರೊಳಗೇ ಇದೆ. ಇದೆಲ್ಲದರ ವಾಸನೆ ಹಿಡಿದ ವೈದಿಕಶಾಹಿಗೆ ನಿದ್ದೆ ಬರುತ್ತಿಲ್ಲ. ಅದಕ್ಕಾಗಿ ಈ ಉಪಜಾತಿ ಸಿದ್ಧಾಂತಿಗಳು ಈ ಸಂಶೋಧನೆಯ ಮಡೆಮಡೆಸ್ನಾನದ ಉರುಳುಸೇವೆ ಮಾಡುತ್ತಿದ್ದಾರೆ. ಬೌದ್ಧ, ವಚನ ಇತ್ಯಾದಿ ಸತ್ವಶಾಲಿ ಧರ್ಮಗಳನ್ನು ಹಿಡಿದು ಹಿಡಾಹೊಡೆದು ಅವುಗಳನ್ನು ಜಾತಿ ಉಪಜಾತಿಗಳಾಗಿಸಲು ಬ್ಯುಸಿಯಾಗಿದ್ದಾರೆ. ಇವರ ಪ್ರಕಾರ, ಧರ್ಮಗಳು ಭಾರತದಲ್ಲಿ ಬದುಕುಳಿಯಲೇಬೇಕಾದರೆ ಅವು ಜಾತಿ ಉಪಜಾತಿಯಾಗಿ, ಅಂದರೆ ಸಂಪ್ರದಾಯ ಆಚರಣೆಗಳಾಗಿ ಜೀವಚ್ಛವಗಳಂತೆ ನೀಚವಾಗಿ ಉಳಿಯಬೇಕು- ಇದಕ್ಕಾಗಿ ನಡೆಯುತ್ತಿರುವ ಬೌದ್ಧಿಕ ಕಸರತ್ತಲ್ಲದೆ ಇದು ಮತ್ತೇನು? ಯಾವುದೋ ಕಾಲದಲ್ಲಿ ಕಟ್ಟಲ್ಪಟ್ಟ ಸಂಪ್ರದಾಯ,ಆಚರಣೆಗಳೂ ಅವು ಕಟ್ಟಲ್ಪಟ್ಟ ಕಾಲದಲ್ಲಿ ಆಹಾರವಾಗಿರಲೂಬಹುದು. ಆದರೆ ಅದೇ ಆಹಾರ ಕಾಲಾನಂತರ ಮಲವಾಗಿ ಪರಿಣಮಿಸಿಬಿಟ್ಟಿರುತ್ತದೆ. ಈ ಮಲದೇವತಾ ಅರ್ಚಕರಿಗೆ ಏನೆನ್ನಬೇಕು?
ಇವರಿಗೆ ಹೇಗೆ ಹೇಳಲಿ? ಏನು ಹೇಳಲಿ?
ಭಾರತದಲ್ಲಿ ಆಚರಣೆ, ಸಂಪ್ರದಾಯಗಳು ಆಳ್ವಿಕೆ ನಡೆಸುವುದಾದರೆ ಏನೇನು ದೃಶ್ಯಾವಳಿಗಳನ್ನು ನಾವು ಕಾಣಬೇಕಾಗಿಬರಬಹುದು: ಕುದುರೆ ಮೇಲೆ ಓರ್ವ ಮಹಿಳೆ ಅಲಂಕೃತಳಾಗಿ ಒಂದು ಕೈಲಿ ಕನ್ನಡಿ ಇನ್ನೊಂದು ಕೈಲಿ ನಿಂಬೆಹಣ್ಣು ಹಿಡಿದು ಹಸನ್ಮುಖಳೋ ಉನ್ಮತ್ತಳೋ ಆಗಿ ಪಯಣಿಸುತ್ತಿರುತ್ತಾಳೆ. ಸುತ್ತ ಜನ ಜೈಕಾರ ಹಾಕುತ್ತಾ ಸಾಗುತ್ತಾ ಗಂಡನ ಹೆಣದೊಡನೆ ಚಿತೆಗೆ ಆಹುತಿಯಾಗುತ್ತಾಳೆ. ಅವಳೇನಾದರು ಬೆದರಿ ಓಡಿದರೆ ಸುತ್ತ ಆವರಿಸಿಕೊಂಡವರು ಹಿಡಿದು ತಂದು ಅವಳನ್ನು ಆ ಚಿತೆಗೆ ಎಸೆಯುತ್ತಾರೆ. ಆಗ ಸತಿ ಸಹಗಮನ ಪೂರ್ಣಗೊಂಡು ಮಾಸ್ತಿಕಲ್ಲು ಅಲ್ಲಿ ನಿಲ್ಲುತ್ತದೆ. ಇನ್ನೊಂದು ಕಡೆ ಪುಟ್ಟ ಬಾಲೆಯೊಬ್ಬಳಿಂದ ವಯಸ್ಕನಿಗೆ ಮಾಲೆ ಹಾಕಿಸುತ್ತಾರೆ, ಅವ ಸತ್ತರೆ ಈ ಕಂದಮ್ಮಗೆ ತಲೆ ಬೋಳಿಸಿ ವಿಧವೆ ಪಟ್ಟ ಕಟ್ಟಿ ಯಾಕಾದರೂ ಬದುಕಿದೆನೊ ಎನ್ನಿಸಿಬಿಡುತ್ತಾರೆ. ಅಸ್ಪೃಶ್ಯ, ತಳಸಮುದಾಯ, ಮಹಿಳೆ, ಶೂದ್ರರನ್ನು ಶಿಕ್ಷಣ, ಸಾಮಾಜಿಕ ನ್ಯಾಯ ಎಲ್ಲಾ ಕ್ಷೇತ್ರದಲ್ಲೂ ವಂಚಿತರನ್ನಾಗಿಸಿ ಸಮಾನತೆ, ಸಾಮಾಜಿಕ ನ್ಯಾಯದಿಂದ ಮತ್ತೂ ದೂರದೂರವಾಗಿಸುತ್ತಾರೆ- ಇತ್ಯಾದಿ ಇತ್ಯಾದಿಯಾಗಿ ಈ ಸಂಪ್ರದಾಯ, ಆಚರಣೆಗಳು ಹೆಚ್ಚಾದಂತೆ ಇದು ಕೊನೆಗೆ ನರಬಲಿ ಕೇಳುತ್ತದೆ. ಈ ಸಂಶೋಧಕರ ಪ್ರಕಾರ ಇದೆಲ್ಲಾ ಆಚರಣೆ ಪ್ರಧಾನ ಜ್ಞಾನದ (Performative Knowled-ge) ಭಾರತೀಯತೆ ಆಗುತ್ತದೆ!
ಇವರಿಗೆ ಹೇಗೆ ಹೇಳಲಿ? ಏನು ಹೇಳಲಿ?
`ಲೋಕದ ಡೊಂಕ ನೀವೇಕೆ ತಿದ್ದುವಿರಯ್ಯ' ಎಂಬ ಬಸವಣ್ಣನ ವಚನ ಉದ್ಧರಿಸಿ `ಇಂಥ ವಚನಗಳನ್ನು ಸಾಮಾಜಿಕ ಹೋರಾಟಗಾರರು ರಚಿಸಲು ಸಾಧ್ಯವಿಲ್ಲ' ಎನ್ನುವ ಈ ಸಂಶೋಧಕರಿಗೆ- ಅಯ್ಯೊ, ಲೋಕದ ಡೊಂಕಿನ ಭಾಗವಾಗಿಯೇ ನಿನ್ನೊಳಗೂ ಡೊಂಕಿರುತ್ತದೆ, ಈ ಡೊಂಕನ್ನು ನೀನೂ ತಿದ್ದಿಕೊಂಡರೆ ಅಷ್ಟರ ಮಟ್ಟಿಗೆ ಲೋಕದ ಡೊಂಕೂ ಸರಿಯಾಗುತ್ತದೆ ಎಂಬ ಅಂತರಂಗ ಬಹಿರಂಗ ಶುದ್ಧಿಯ ಧ್ವನಿ ತಿಳಿಯದವರಿಗೆ ಹೇಗೆ ಹೇಳಲಿ?
ಗಾಂಧಿ ತಾನೊಬ್ಬ ಹಿಂದೂ, ಹಿಂದೂ ಎಂದು ಬಾಯಿ ತೆರೆದಾಗಲೆಲ್ಲಾ ಜಪಿಸಿದರೂ `ಸತ್ಯವೇ ನನ್ನ ಧರ್ಮ, ನಿತ್ಯ ಪ್ರಾರ್ಥನೆಯ ಮೂಲಕ ನಾನು ಸತ್ಯದ ಸಾಮೀಪ್ಯವನ್ನು ಬಯಸುತ್ತೇನೆ. ಎಲ್ಲಾ ಜೀವಿಗಳ ಸೇವೆಗಾಗಿ ನಿರಂತರ ತನ್ನನ್ನು ವ್ಯಯಿಸುವುದು ಧರ್ಮ' ಎಂದು ಹೇಳುವ ಗಾಂಧಿಯೊಳಗೆ ಏಸುಕ್ರಿಸ್ತ ಕುಳಿತಿರುವುದನ್ನು ಕಾಣದ, ಈ ಒಳಗಣ್ಣು ಇಲ್ಲದವರಿಗೆ ಏನು ತಾನೆ ಹೇಳುವುದು?
ಊರಾಚೆ ಎಸೆಯಲ್ಪಟ್ಟ ಅಸ್ಪೃಶ್ಯ ಕುಟುಂಬವೊಂದಕ್ಕೆ ಊರ ನಡುವೆ ವಸತಿ ಕಲ್ಪಿಸಿಕೊಟ್ಟಲ್ಲಿ ಆಗ, ಸುಮ್ಮನಿದ್ದಂತೆ ಇದ್ದ ಜಾತಿಗಳು ತಾವೇ ಒಂದು ವ್ಯವಸ್ಥೆಯಾಗಿ ರೂಪು ತಳೆದು ಭುಗಿಲೇಳುವುದನ್ನು ಕಾಣಲಾಗದ ಪರದೇಶಿಗಳಿಗೆ ಹೇಗೆ ಹೇಳುವುದು? ಹೇಗೆ ತಿಳಿಸುವುದು?
ಈ ಎಸ್.ಎನ್.ಬಾಲಗಂಗಾಧರ ಮತ್ತವರ ಸಂಶೋಧನಾ ತಂಡದ ರೋಗಿಷ್ಟ ಸಂಶೋಧನಾ ವಿಚಾರಗಳು `ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೇ?' ಎಂಬ ಡಂಕಿನ್ ಝಳಕಿ ಸಂಪಾದಿಸಿ ನಿರೂಪಿಸಿದ ಪುಸ್ತಕದಲ್ಲಿ ಹೇಗಿವೆ ಅಂದರೆ, (ರಾಜೇಂದ್ರ ಚೆನ್ನಿಯವರು ಪ್ರಸ್ತಾಪಿಸಿರುವ) ಈ ಪುಸ್ತಕದ ಪುಟ 123ರಲ್ಲಿ ಒಟ್ಟೂ ಜನಸಂಖ್ಯೆಯಲ್ಲಿ ಸುಮಾರು 24 ಪ್ರತಿಶತ ದಲಿತರೇ (1999-2000ದಲ್ಲಿ) ಇರುವಾಗ ಕೇವಲ 38 (ದಲಿತರ) ಕೊಲೆಗಳಿಂದ ಭಾರತದಲ್ಲಿ ಜಾತಿಯ ತಾರತಮ್ಯ ಇದೆಯೆಂದು ನಿರ್ಣಯಕ್ಕೆ ಬರಲು ಹೇಗೆ ಸಾಧ್ಯ?' ಎಂದು ಈ ಸಂಶೋಧಕರು ಪ್ರಶ್ನಿಸುತ್ತಾರೆ. ಭಾರತದಲ್ಲಿ ಜಾತಿಯ ತಾರತಮ್ಯ ಇದೆಯೆಂದು ತೋರಿಸಲು ಹೆಚ್ಚು ದಲಿತರ ಕೊಲೆಗಳ ದಾಖಲಾತಿ ಕೇಳುವ ಈ ಸಂಶೋಧಕರು ಮನುಷ್ಯರಾ ಎಂದು ಮೊದಲು ಸಂಶೋಧಿಸಬೇಕಾಗಿದೆ. ಮನುಧರ್ಮಶಾಸ್ತ್ರದ ಹೆಣದೊಳಗಿಂದ ಉತ್ಪತ್ತಿಯಾದ ಹುಳುಗಳಂತಾಡುತ್ತಿರುವ ಈ ಬಾಲೂಗ್ಯಾಂಗ್ ಅನ್ನು ಯಾರು ಕಾಪಾಡಬೇಕೋ ತಿಳಿಯದಾಗಿದೆ.
Posted in ಡಂಕಿನ್ ಝಳಕಿ, ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ರಾಜೇಂದ್ರ ಚೆನ್ನಿ, ವಚನ ಸಂವಾದ
18 April 2013
ವಚನಗಳನ್ನು ಆಧ್ಯಾತ್ಮಿಕ ಸಂದರ್ಭದಲ್ಲಿಟ್ಟು ನೋಡಿದಾಗ
* ಪ್ರೊ.ಎಸ್.ಎನ್ ಬಾಲಗಂಗಾಧರ
ವಚನಗಳ ಉದ್ದೇಶವು ಜಾತಿವಿನಾಶ ಚಳವಳಿಯಲ್ಲ ಎಂಬ ನನ್ನ ಹಾಗೂ ನನ್ನ ಸಹಸಂಶೋಧಕರ ವಾದವು `ಪ್ರಜಾವಾಣಿ'ಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನನ್ನ ವಾದಕ್ಕೆ ಪ್ರತಿಕ್ರಿಯಿಸಿದವರೆಲ್ಲರೂ ನನ್ನ ವಾದವು ವಚನಗಳ ಹಿರಿಮೆಯನ್ನು ಅಲ್ಲಗಳೆಯುತ್ತಿದೆ ಎಂಬುದಾಗಿ ಭಾವಿಸಿದ್ದಾರೆ. ಅದನ್ನು ಸ್ಪಷ್ಟೀಕರಿಸಲು ವಚನಗಳನ್ನು ಆಧ್ಯಾತ್ಮಿಕ ಸಂದರ್ಭದಲ್ಲಿಟ್ಟು ನೋಡಬೇಕೆಂಬುದು ನಮ್ಮ ವಾದವೆಂಬುದನ್ನು ಓದುಗರ ಗಮನಕ್ಕೆ ತಂದಿದ್ದೂ ಆಗಿದೆ. ಆ ಹೇಳಿಕೆಯ ಕುರಿತೂ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಪ್ರತಿಕ್ರಿಯೆಗಳಲ್ಲಿ ಪರೋಕ್ಷವಾಗಿ ಇವರೆಲ್ಲರೂ ಅಧ್ಯಾತ್ಮ ಸಂಪ್ರದಾಯವನ್ನು ಬ್ರಾಹ್ಮಣರಿಗೆ ಸಮೀಕರಿಸುವುದು ಕಂಡುಬರುತ್ತದೆ. ಇಲ್ಲಿ ಬಹುಶಃ ಈ ಅಭಿಪ್ರಾಯಗಳಿಗೆ ಉತ್ತರ ನೀಡುವುದಕ್ಕಿಂತ ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಮತ್ತೂ ಸ್ಪಷ್ಟೀಕರಿಸುವುದು ಸೂಕ್ತ ಎನ್ನಿಸುತ್ತದೆ.ಭಾರತೀಯ ಅಧ್ಯಾತ್ಮ ಪರಂಪರೆಯು ಇಂದಿನವರೆಗೂ ಐತಿಹಾಸಿಕ ಏಳು ಬೀಳುಗಳನ್ನೆಲ್ಲ ದಾಟಿಕೊಂಡು ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ.
Posted in ದೇವನೂರು ಮಹಾದೇವ, ಪ್ರೊ.ಎಸ್.ಎನ್ ಬಾಲಗಂಗಾಧರ, ಪ್ರೊ.ರಾಜಾರಾಮ ಹೆಗಡೆ, ವಚನ ಸಂವಾದ
08 April 2013
ನೊಂದ ನೋವ ನೋಯದವರೆತ್ತ ಬಲ್ಲರಯ್ಯ
* ಚಂದ್ರಶೇಖರ ಕಂಬಾರ
ಈಚಿನ ದಿನಗಳಲ್ಲಿ `ಪ್ರಜಾವಾಣಿ' ಯ ಸಂಗತದಲ್ಲಿ ಅಚ್ಚಾಗುತ್ತಿರುವ ವಚನಕಾರರ ಬಗೆಗಿನ ಚರ್ಚೆಯನ್ನು ಕುತೂಹಲದಿಂದ ಗಮನಿಸುತ್ತಾ ಬಂದಿದ್ದೇನೆ. ಕರ್ನಾಟಕದ ಸಂಸ್ಕೃತಿ ಮತ್ತು ಚಿಂತನೆಯ ನಿರ್ಮಾಣದಲ್ಲಿ ಅತ್ಯಂತ ವಿಶಿಷ್ಟ ಮತ್ತು ನಿರ್ಣಾಯಕ ಪಾತ್ರ ವಹಿಸಿದ ವಚನ ಪರಂಪರೆಯ ಕುರಿತ ಯಾವುದೇ ಚರ್ಚೆ ತುಂಬಾ ಮಹತ್ವಪೂರ್ಣವಾದುದು. ಅದರಲ್ಲೂ ಒಬ್ಬ ವ್ಯಕ್ತಿಯಾಗಿ, ಬರಹಗಾರನಾಗಿ, ಕನ್ನಡ ಜಾನಪದ ಮತ್ತು ಸಾಹಿತ್ಯದ ವಿದ್ಯಾರ್ಥಿಯಾಗಿರುವ ನನ್ನ ಸಂವೇದನೆ ಮತ್ತು ಸೃಜನಶೀಲತೆಗೆ ಬಹು ದೊಡ್ಡ ಕೊಡುಗೆ ನೀಡಿರುವ, ಕಳೆದ ನಾಲ್ಕೈದು ದಶಕಗಳಿಂದ ನನ್ನ ಆತ್ಮಸಂಗಾತದಲ್ಲಿರುವ ವಚನಕಾರರ ಕುರಿತ ಚರ್ಚೆಯಲ್ಲಿ ನಾನೂ ದನಿಗೂಡಿಸಬೇಕು ಅನಿಸಿದೆ.
ಪ್ರಸ್ತುತ ಚರ್ಚೆಯಲ್ಲಿರುವ ಸಂಗತಿಗಳಿಗೆ ನನ್ನ ಪ್ರತಿಕ್ರಿಯೆ ನೀಡುವ ಮೊದಲು ಅವಕ್ಕೆ ಭಿತ್ತಿಯಾಗಿ ಕೆಲವು ಅಂಶಗಳನ್ನು ದಾಖಲಿಸಬಯಸುತ್ತೇನೆ.
Posted in ಚಂದ್ರಶೇಖರ ಕಂಬಾರ, ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ವಚನ ಸಂವಾದ
20 March 2013
ವಚನ ಚಳವಳಿಗಳ ಸೈದ್ಧಾಂತಿಕ ಹಿನ್ನೆಲೆಯ ಕುರಿತು...
ಎಂ. ಎಂ. ಕಲಬುರ್ಗಿಯವರು ತಮ್ಮ ಪ್ರತಿಕ್ರಿಯೆಯಲ್ಲಿ ಭಾರತೀಯ ಇತಿಹಾಸವನ್ನು ಆಧಾರವಾಗಿ ತೋರಿಸಿ ವಚನ ಚಳವಳಿಗಳ ಸಿದ್ಧಾಂತವು ಜಾತಿವಿನಾಶವೇ ಆಗಿದೆ ಎನ್ನುತ್ತಾರೆ. ಅವರ ಪ್ರಕಾರ ಬಾಲಗಂಗಾಧರ ಹಾಗೂ ನಾವು ಇದನ್ನು ಅಲ್ಲಗಳೆಯುತ್ತಿರುವುದು ಕನ್ನಡ ಸಂಸ್ಕೃತಿಗೆ ಒಳ್ಳೆಯದಲ್ಲ.
ಕಲಬುರ್ಗಿಯವರ ಪ್ರಕಾರ ವಚನಗಳು ಜಾತಿವಿರೋಧಿ ಎಂದರೇನೇ ಕನ್ನಡ ಸಂಸ್ಕೃತಿಗೆ ಒಳ್ಳೆಯ ಹೆಸರು ಬರುತ್ತದೆ. ಆದರೆ ನಮ್ಮ ಪ್ರಕಾರ ಕನ್ನಡಿಗರು ಒಂದು ಒಳ್ಳೆಯ ಸಂಶೋಧನೆಯನ್ನು ಮಾಡುವುದರಿಂದ ಹಾಗೂ ಅದನ್ನು ಕನ್ನಡದಲ್ಲಿ ಬರೆಯುವುದರಿಂದ ಕನ್ನಡದ ಸ್ಥಾನಮಾನವು ಜಾಗತಿಕ ಮಟ್ಟದಲ್ಲಿ ನಿಜವಾಗಿಯೂ ಹೆಚ್ಚುತ್ತದೆಯೇ ಹೊರತು ಯಾವುದಾದರೂ ಐಡಿಯಾಲಜಿಯನ್ನು ಸಮರ್ಥಿಸುವುದರಿಂದಲ್ಲ.
ಒಂದು ಕಾಲದ ಇತಿಹಾಸವನ್ನು ತಿಳಿದುಕೊಳ್ಳದಿದ್ದರೆ ಆ ಕಾಲದ ಸಾಹಿತ್ಯವು ಅರ್ಥವಾಗುವುದಿಲ್ಲವೆಂಬುದು ಎಷ್ಟು ನಿಜವೊ, ಅಷ್ಟೇ ನಿಜ, ಸಾಹಿತ್ಯವನ್ನು ಸರಿಯಾಗಿ ಓದದಿದ್ದರೆ ಅದೇ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಲೂ ಸಾಧ್ಯವಿಲ್ಲ ಎಂಬುದು. ಏಕೆಂದರೆ ಇತಿಹಾಸ ರಚನೆಗೆ ಸಾಹಿತ್ಯವು ಆಧಾರವಲ್ಲವೆ? ಕಲಬುರ್ಗಿಯವರ ಪ್ರತಿಕ್ರಿಯೆಯಲ್ಲಿ ಏನಾಗಿದೆಯೆಂದರೆ ವಸಾಹತು ಕಾಲದಲ್ಲಿ ಭಾರತದಲ್ಲಿ ರಿಲಿಜನ್ನುಗಳಿವೆ ಎಂಬ ತಪ್ಪು ತಿಳಿವಳಿಕೆಯಿಂದ ಬರೆದ ಇತಿಹಾಸವನ್ನೇ ಅವರು ನಮಗೆ ತಿಳಿಸುತ್ತಾರೆ.
ಅದೇ ಇತಿಹಾಸವು ವಚನ ಚಳವಳಿಯು ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟ ಎನ್ನುತ್ತದೆ. ಅದು ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಕಂಡುಕೊಂಡ ಸತ್ಯವಲ್ಲ, ಬದಲಾಗಿ ಪ್ರೊಟೆಸ್ಟಾಂಟ್ ಪೂರ್ವಗ್ರಹಗಳಿಂದ ಹುಟ್ಟಿಕೊಂಡ ಇತಿಹಾಸ ಹಾಗೂ ಪಾಶ್ಚಾತ್ಯರು ಭಾರತಕ್ಕೆ ಬಂದು ವಚನಗಳನ್ನು ಓದುವುದಕ್ಕೆ ಮೊದಲೇ ಹುಟ್ಟಿಕೊಂಡ ಇತಿಹಾಸ ಎಂಬುದನ್ನು ಡಂಕಿನ್ ಸ್ಪಷ್ಟವಾಗಿ ತೋರಿಸಿದ್ದಾರೆ. ಆ ಇತಿಹಾಸವನ್ನು ಇಟ್ಟುಕೊಂಡೇ ವಚನ ಸಾಹಿತ್ಯವನ್ನು ನಾವು ಓದತೊಡಗಿದೆವು.
ಈಗ ವಚನ ಸಾಹಿತ್ಯವನ್ನು ಮರು ಓದಿಗೆ ಒಳಪಡಿಸಿ ಸರಿಯಾದ ಇತಿಹಾಸದ ರಚನೆಗೆ ಬುನಾದಿಯನ್ನು ಹಾಕಬೇಕೆಂಬುದು ನಮ್ಮ ಒತ್ತಾಸೆ. ಹಾಗಾಗಿ ಕಲಬುರ್ಗಿಯವರು ನೀಡುವ ಇತಿಹಾಸ ನಮಗೆ ಪ್ರಸ್ತುತವಲ್ಲ.
ಜಾತಿ ವಿನಾಶವೇ ವಚನ ಚಳವಳಿಗಳ ಸೈದ್ಧಾಂತಿಕ ಹಿನ್ನೆಲೆ ಎಂಬ ವಾದವನ್ನು ಸಮರ್ಥಿಸಬೇಕಾದರೆ ಈ ಮುಂದಿನ ವಾಕ್ಯಗಳು ಅನಿವಾರ್ಯ ಎಂಬುದನ್ನು ಈ ಕುರಿತ ಚರ್ಚೆಗಳು ತೋರಿಸಿಕೊಟ್ಟಿವೆ. `ನಮಗೆ ಸಿಗದಿರುವ ಇನ್ನೂ ಎಷ್ಟೋ ವಚನಗಳಿರಬಹುದು' , `ವಚನಗಳಲ್ಲಿ ಶಬ್ದಗಳು ಇಲ್ಲದಿದ್ದರೂ ಅವುಗಳ ಧ್ವನಿ ಹಾಗಿದೆ' , `0.3% ವಚನಗಳಲ್ಲಿ ಇರುವ ವಿಚಾರವನ್ನೇ ಅವರೇಕೆ ಪ್ರತಿಪಾದಿಸಿರಬಾರದು? ಇದನ್ನೆಲ್ಲ ಅಂಕಿ ಅಂಶದಿಂದ ಹೇಳಲು ಸಾಧ್ಯವಿಲ್ಲ' , ಇತ್ಯಾದಿ.
ಅಂದರೆ ಅವರೆಲ್ಲರೂ ತಮ್ಮ ಜಾತಿ ವಿನಾಶದ ಸಿದ್ಧಾಂತವು ಲಭ್ಯವಿರುವ ವಚನಗಳನ್ನಾಧರಿಸಿಲ್ಲ ಹಾಗೂ ಆಧರಿಸಬಾರದು ಎಂಬ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದಾರೆ. ಅದೇ ರೀತಿಯಲ್ಲಿ 0.3% ವಚನಗಳಲ್ಲಿ ಬರುವ ಬ್ರಾಹ್ಮಣರ ಆಚರಣೆಗಳ ಹಾಗೂ ಗ್ರಂಥಗಳ ಟೀಕೆ, ಜಾತಿ ಮದ, ಭೇದಗಳ ಟೀಕೆ, ಇತ್ಯಾದಿಗಳೇ ಈ ವಾದಕ್ಕೆ ಬುನಾದಿ ಎಂಬುದೂ ಧೃಡಪಡುತ್ತದೆ. ಇಂಥ ಸಾಲುಗಳಿಗೆಲ್ಲ ಜಾತಿ ವಿನಾಶಕ್ಕಿಂತಲೂ ಸೂಕ್ತವಾದ ವಿವರಣೆಯನ್ನು ನೀಡಿದಲ್ಲಿ ಈ ಮೇಲಿನ ಅಂತೆ ಕಂತೆಗಳ ಸಂತೆ ಮಾಯವಾಗುವುದರಲ್ಲಿ ಸಂದೇಹವೇ ಇಲ್ಲ.
ಬಾಲಗಂಗಾಧರರು ಅಂಥದ್ದೊಂದು ವಾದವನ್ನು ಇಡುತ್ತಾರೆ. ವಚನಗಳ ಸಿದ್ಧಾಂತವನ್ನು ಜಾತಿ ವಿರೋಧದ ನೆಲೆಯಿಂದ ತೆಗೆದು ಆಧ್ಯಾತ್ಮಿತೆಯ ನೆಲೆಯಲ್ಲಿ ಇಡಿರಿ. ಈ ಮೇಲಿನ ಸಮಸ್ಯೆಗಳೆಲ್ಲ ಪರಿಹಾರವಾಗಿ ಬಿಡುತ್ತವೆ. ನಮ್ಮ ಆಧ್ಯಾತ್ಮಿಕ ಮಾರ್ಗಗಳನ್ನೆಲ್ಲ ನಾವು ಸಾಮಾಜಿಕ ಚಳವಳಿಗಳನ್ನಾಗಿ ಮಾಡಿಟ್ಟಿದ್ದು ನಮ್ಮ ಸಾಂಸ್ಕೃತಿಕ ವಿಸ್ಮತಿಗಳಲ್ಲೊಂದು. ಅದು ಪ್ರೊಟೆಸ್ಟಾಂಟ್ ಲೋಕದೃಷ್ಟಿಯ ಕೊಡುಗೆ. ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಉಪನಿಷತ್ತುಗಳ ಕಾಲದಿಂದಲೂ ಜಾತಿ, ಅಂತಸ್ತು, ಐಶ್ವರ್ಯ ಇತ್ಯಾದಿಗಳು ಅಹಂಕಾರರೂಪದಲ್ಲಿ ಆತ್ಮಜ್ಞಾನಕ್ಕೆ ಅಡ್ಡಿಯಾಗಿವೆ ಎಂಬುದಾಗಿಯೇ ಪ್ರತಿಪಾದಿಸಲಾಗಿದೆ.
ಆತ್ಮಜ್ಞಾನಿಗೆ ಇದಾವುದೂ ಇರುವುದಿಲ್ಲ. ಅದು ಪರಮಾನಂದದ ಸ್ಥಿತಿ. ಹಾಗಾಗುವುದೆಂದರೆ ಜನನ ಮರಣಗಳ ಚಕ್ರದಿಂದ ಮುಕ್ತಿ ಹೊಂದಿದಂತೆಯೇ. ಅದನ್ನೇ ಅವರು ಮೋಕ್ಷ ಎನ್ನುತ್ತಾರೆ. ವರ್ಣಧರ್ಮದಲ್ಲಿ ಶ್ರದ್ಧೆ ಇಟ್ಟವರು, ಪ್ರಾಪಂಚಿಕ ಅರ್ಥ ಸಿದ್ಧಿಗಾಗಿ ದೇವತೆಗಳು ಹಾಗೂ ಪೂಜೆಯಲ್ಲಿ ಶ್ರದ್ಧೆ ಇಟ್ಟವರು ಮುಕ್ತಿಯನ್ನು ಪಡೆಯುವುದರ ಬದಲಾಗಿ ಈ ಸಂಸಾರಚಕ್ರದಲ್ಲೇ ಸುತ್ತುತ್ತಿರುತ್ತಾರೆ ಎಂಬುದಾಗಿ ಉಪನಿಷತ್ತುಗಳೂ, ಅವುಗಳ ಭಾಷ್ಯಕಾರರೂ ಒತ್ತಿ ಹೇಳಿದ್ದಾರೆ.
ಸಾಂಸಾರಿಕ ಉಪಾಧಿಗಳಿಂದ ಬಿಡುಗಡೆ ಪಡೆಯುವುದಕ್ಕಾಗಿ ಭಾರತೀಯ ಆಧ್ಯಾತ್ಮಿಕ ಪರಂಪರೆಯು ಸನ್ಯಾಸ, ಶ್ರಮಣ ಇತ್ಯಾದಿ ವೈವಿಧ್ಯಪೂರ್ಣವಾದ ವಿರಕ್ತ ಮಾರ್ಗಗಳನ್ನು ಬೆಳೆಸಿತು. ಈ ವಿರಕ್ತ ಪರಂಪರೆಯೇ ಬೌದ್ಧ, ಜೈನರಲ್ಲೂ ಇರುವುದರಿಂದ ಸಂಸಾರ ಚಕ್ರದಿಂದ ಬಿಡುಗಡೆಯನ್ನು ಹೊಂದುವುದೇ ನಿಜವಾದ ಮೋಕ್ಷ ಎಂಬುದಾಗಿ ಅವರೂ ಪ್ರತಿಪಾದಿಸುತ್ತಾರೆ. ಸಂಸಾರಸ್ಥರು ಮುಖ್ಯ ಎಂಬುದಾಗಿ ಭಾವಿಸಿಕೊಂಡ ಅನೇಕ ಪದ್ಧತಿಗಳನ್ನು ಹಾಗೂ ಆಚರಣೆಗಳನ್ನು ಆಧ್ಯಾತ್ಮ ಜ್ಞಾನಕ್ಕೆ ಅಡ್ಡಿಗಳೆಂಬುದಾಗಿ ಅವರು ಭಾವಿಸಿದರು.
ವರ್ಣ, ಜಾತಿಭೇದ ಅದರಲ್ಲಿ ಮುಖ್ಯವಾದುದು. ಬ್ರಾಹ್ಮಣರು ಸನ್ಯಾಸ ಸ್ವೀಕರಿಸಬೇಕಾದರೆ ವರ್ಣದ ಸಂಕೇತವಾದ ಜನಿವಾರವನ್ನೂ, ಕರ್ಮಗಳನ್ನೂ ತ್ಯಜಿಸಿ ತಮ್ಮ ಶ್ರಾದ್ಧವನ್ನೂ ಮಾಡಿಕೊಳ್ಳವುದು ಇವತ್ತಿಗೂ ಪ್ರಚಲಿತದಲ್ಲಿರುವ ಆಚರಣೆ. ಶಿವ ಶರಣರು ಶಿವಭಕ್ತಿಯನ್ನು ಆಧ್ಯಾತ್ಮಿಕ ಮಾರ್ಗವನ್ನಾಗಿ ಭಾವಿಸಿದವರು. ಇಲ್ಲಿ ಮುಕ್ತಿ ಎಂಬುದು ಈಶ್ವರ ಸಾಯುಜ್ಯದ ರೂಪದಲ್ಲಿ ಇದೆ. ಹಾಗಾಗಿ ಬ್ರಾಹ್ಮಣ ಜಾತಿಯನ್ನು ವಿರೋಧಿಸಲಿಕ್ಕೆ ಬಸವಣ್ಣನು ಜನಿವಾರವನ್ನು ಕಿತ್ತು ಹಾಕಿದ ಎಂಬುದೇ ಪ್ರೊಟೆಸ್ಟಾಂಟ್ ವಿವರಣೆ.
ಇವರೆಲ್ಲ ತಮ್ಮ ಮಾರ್ಗವನ್ನು ತುಳಿಯುವವರಿಗೆ ಮಾತ್ರವೇ ಅಂಥ ಜೀವನವನ್ನು ವಿಧಿಸಿದ್ದರು ಎಂಬುದನ್ನು ಮರೆಯಬಾರದು. ಸಂಸಾರವೆಂದರೆ ಈ ಭೇದಗಳೆಲ್ಲ ಇರುವವೇ, ಆದರೆ ಅದರಿಂದ ಮುಕ್ತಿಯನ್ನು ಪಡೆಯಲು ಬಯಸುವವರು ಈ ಭೇದಗಳನ್ನು ಮರೆಯಬೇಕು. ವಚನಗಳು ಕೂಡ ಶಿವ ಶರಣರಲ್ಲಿ ಜಾತಿ ಭೇದ ಎಣಿಸಬಾರದು ಎಂದು ನಿರ್ದಿಷ್ಟವಾಗಿ ಹೇಳುತ್ತಿವೆ ಎಂಬುದನ್ನು ತರ್ಕಬದ್ಧವಾಗಿ ತೋರಿಸಬಹುದು.
ಅವರು ಜಾತಿಗಳೇ ಹೋಗಬೇಕು ಎಂಬುದಾಗಿಯೂ ಹೇಳುತ್ತಿರಲಿಲ್ಲ ಅಥವಾ ಇಲ್ಲದ ಜಾತಿ ವ್ಯವಸ್ಥೆಯ ಕುರಿತೂ ಹೇಳುತ್ತಿರಲಿಲ್ಲ. ಜಾತಿವಿನಾಶ ಚಳವಳಿಯನ್ನು ಮಾಡುತ್ತಿರುವ ಆಧುನಿಕರು ತಾವು ಇಂಥವರ ಜೊತೆಗೆ ಎಲ್ಲಿಯವರೆಗೆ ನಿಲ್ಲುತ್ತೇವೆಂಬುದನ್ನು ಸರಿಯಾಗಿ ನೋಡಿಕೊಳ್ಳಬೇಕು. ನೀವು ಜಾತಿಯನ್ನು ತಲೆಯೊಳಗಿಟ್ಟುಕೊಂಡಿರೆಂದರೆ ಅವರ ಲೋಕವನ್ನು ತ್ಯಜಿಸಿದಂತೆಯೇ. ` ಪರಚಿಂತೆ ಎನಗೇಕಯ್ಯ' , `ಲೋಕದ ಡೊಂಕ ನೀವೇಕೆ ತಿದ್ದುವಿರಯ್ಯ' ಇಂಥ ವಚನಗಳನ್ನು ಸಾಮಾಜಿಕ ಹೋರಾಟಗಾರರು ರಚಿಸಲು ಸಾಧ್ಯವಿಲ್ಲ.
ಆಧ್ಯಾತ್ಮ ಸಂಪ್ರದಾಯಗಳು, ಬ್ರಾಹ್ಮಣ ಆಚರಣೆಗಳು, ಯಜ್ಞಯಾಗಾದಿಗಳು, ಮಂತ್ರ ತಂತ್ರಗಳು, ದೇವಾಲಯ, ಪೂಜೆ ಇತ್ಯಾದಿಗಳನ್ನೇ ಕೇಂದ್ರವಾಗಿಟ್ಟುಕೊಂಡು ಟೀಕೆಗಳನ್ನು ಮಾಡಲೂ ಒಂದು ಕಾರಣವಿದೆ. ಇವೂ ಕೂಡ ಆಧ್ಯಾತ್ಮ ಮಾರ್ಗಗಳೇ. ಆದರೆ ಈ ಆಚರಣೆಗಳಿಂದ ಹುಟ್ಟಿದ ಅಹಂಕಾರ, ಮೋಹ, ಇತ್ಯಾದಿಗಳೇ ಆತ್ಮಜ್ಞಾನಕ್ಕೆ ಅಡ್ಡಿಯಾಗುತ್ತವೆ ಎಂಬುದನ್ನು ಈ ಟೀಕೆಗಳು ತಿಳಿಸುತ್ತಿವೆ.
ಅಂದರೆ ಹೆಚ್ಚೆಂದರೆ ಒಂದು ರೀತಿಯಲ್ಲಿ ಆಧ್ಯಾತ್ಮ ಮಾರ್ಗವನ್ನಿಟ್ಟುಕೊಂಡು ದಾರಿ ತಪ್ಪಿಸುವವರ ಖಂಡನೆ ಎಂಬುದಾಗಿ ಇಂಥ ಟೀಕೆಗಳನ್ನು ಪರಿಗಣಿಸಬಹುದು. ಇಂಥ ಟೀಕೆಗಳು ಆಯಾ ಸಂಪ್ರದಾಯಗಳಿಗೆ ಆಂತರಿಕವಾದವುಗಳು ಎಂಬುದನ್ನೂ ಗಮನಿಸಬೇಕು. ಉದಾಹರಣೆಗೆ ಇಡೀ ವಚನ ಸಾಹಿತ್ಯದಲ್ಲಿ ಯಾವುದನ್ನು ಕ್ರಾಂತಿಕಾರಕ ವಿಷಯ ಎನ್ನುತ್ತಾರೋ ಅವೆಲ್ಲವೂ ಸಂಸ್ಕೃತ ಆಗಮಗಳಲ್ಲಿ ಬಂದಿರುವ ವಿಚಾರಗಳ ಕನ್ನಡ ರೂಪಗಳೇ ಆಗಿವೆ ಎಂಬುದು ಸ್ಪಷ್ಟ.
ಶಿವಶರಣರ ಮಾರ್ಗವನ್ನು ಭಾರತೀಯ ಆಧ್ಯಾತ್ಮಿಕ ಪರಂಪರೆಯ ಅಖಂಡತೆಯಲ್ಲಿ ಇಟ್ಟರೆ ಮಾತ್ರವೇ ಅಲ್ಲಿ ನಾವು ಯಾವ ಪ್ರಶ್ನೆಗಳನ್ನು ಕೇಳಬೇಕು, ಉತ್ತರವನ್ನು ಹೇಗೆ ಪಡೆಯಬೇಕು ಎಂಬುದಕ್ಕೆ ವಿಧಾನಗಳು ಸಿಗುತ್ತವೆ. ಬದಲಾಗಿ ಈ ಜಾತಿವಿರೋಧದ ಸಿದ್ಧಾಂತವು ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಬ್ರಾಹ್ಮಣ, ಬ್ರಾಹ್ಮಣೇತರ ಎಂಬುದಾಗಿ ಜಾತಿಯನ್ನೇ ಆಧಾರವಾಗಿಟ್ಟುಕೊಂಡು ವಿಭಾಗಿಸುವುದರ ಮೂಲಕ ಅದನ್ನು ತಿಳಿವಳಿಕೆಗೆ ದಕ್ಕದಂತೆ ಮಾಡುತ್ತದೆ. ವಚನ ಚಳವಳಿ ಇದಕ್ಕೊಂದು ಜ್ವಲಂತ ಉದಾಹರಣೆ.
ವಚನಕಾರರು ಜಾತಿವಿರೋಧಿ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು ಎಂದು ವಾದಿಸುವವರು ಈ ಮುಂದಿನ ಕೆಲಸವನ್ನು ಮಾಡಲೇಬೇಕು:
1) 0.3% ವಚನಗಳಲ್ಲಿ ಏನು ಹೇಳುತ್ತಾರೊ ಅವು ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಸಾಮಾನ್ಯವಾಗಿ ಕಾಣಿಸುವಂಥ ಪ್ರತಿಪಾದನೆಗಳಲ್ಲ ಎಂಬುದನ್ನು ತೋರಿಸಬೇಕು.
2) ಅಷ್ಟರ ನಂತರ ಅದು ಜಾತಿ ವಿರೋಧ ಹಾಗೂ ಜಾತಿ ವ್ಯವಸ್ಥೆಯ ವಿರೋಧ ಹೇಗಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ತೋರಿಸಬೇಕು. ಈ ಎರಡು ಹೆಜ್ಜೆಗಳನ್ನು ಇಡದೇ ಹೇಳಿದ ಮಾತುಗಳೆಲ್ಲ ಪ್ರೊಟೆಸ್ಟಾಂಟ್ ಪೂರ್ವಗ್ರಹಗಳೇ ಹೊರತೂ ಬೇರೇನೂ ಆಗಲು ಸಾಧ್ಯವಿಲ್ಲ.
Posted in ಡಂಕಿನ್ ಝಳಕಿ, ದೇವನೂರು ಮಹಾದೇವ, ಪ್ರೊ.ರಾಜಾರಾಮ ಹೆಗಡೆ, ವಚನ ಸಂವಾದ
ಸಂಶೋಧನೆಯ ದಾರಿಯನ್ನು ಯಾರು ನಿರ್ಧರಿಸಬೇಕು?