25 March 2013

* ಮೊಗಳ್ಳಿ ಗಣೇಶ್‌

ನಿಸ್ಸಂದೇಹವಾಗಿ ವಚನ ಸಾಹಿತ್ಯ ಚಳವಳಿಯು ಜಾತ್ಯತೀತವಾದ  ಅವೈದಿಕ ಸಮುದಾಯಗಳ ನಾಡಿ ಬಡಿತದ ಸಂವೇದನೆ. ಬಸವಣ್ಣನವರ ವಚನಗಳಂತೂ ಇಡೀ ಜಾತಿ ವ್ಯವಸ್ಥೆಯ ವಿನಾಶದ ಕಹಳೆಯನ್ನು ಆತ್ಯಂತಿಕವಾಗಿ ಆರ್ದ್ರವಾಗಿ ಮಾರ್ದನಿಸುತ್ತವೆ. ಬ್ರಾಹ್ಮಣ್ಯದ ಮನು ಪ್ರಣೀತವಾದ ಜಾತಿ ನೆಲೆಯ ಆಚಾರ ವಿಚಾರಗಳನ್ನು ವಚನಕಾರರು ಒಕ್ಕೊರಲಲ್ಲಿ  ಸಮಗ್ರವಾಗಿ ನಿರಾಕರಿಸುತ್ತಾರೆ.  ವೈದಿಕ ಜಾತಿ ವ್ಯವಸ್ಥೆಯ ಪ್ರತಿರೋಧವನ್ನು ವಿರಾಟ್ ಪ್ರಮಾಣದಲ್ಲಿ ವಚನಕಾರರು ಅಭಿವ್ಯಕ್ತಿಸಿರುವುದು ಅಸಾಮಾನ್ಯ ಚಾರಿತ್ರಿಕವಾದುದು. ಜಾತಿ ಕೂಪದಿಂದ ಪಾರಾಗಲು ಅಧ್ಯಾತ್ಮದ ಬೆಳಗಿಗಾಗಿ  ಇಡೀ ವಚನ ಪರಂಪರೆ ಉತ್ಕಟವಾಗಿ ಪರಿತಪಿಸುತ್ತದೆ.

ವಚನ ಚಳವಳಿ ಮೂಲತಃ ದಲಿತರದು. ಮಾದರ ಚನ್ನಯ್ಯ ಹೊಲೆಯರ ಹೊನ್ನಯ್ಯರಂತವರು ತಮ್ಮ ಹಟ್ಟಿಗಳಲ್ಲಿ, ಕೇರಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ಜಾತ್ಯತೀತ ಅಧ್ಯಾತ್ಮದ ಹದವನ್ನು ಆ ವೇಳೆಗಾಗಲೇ ಕಂಡುಕೊಂಡು; ಜಾತಿ ವಿನಾಶದ ವಿರುದ್ಧದ ದಂಗೆಯನ್ನು ವ್ಯಾಪಕವಾಗಿ ಮೊಳಗಿಸಲು  `ಕುಲ ಹದಿನೆಂಟು ಜಾತಿ'ಗಳ ಮುಂದೆ ವಿನಂತಿಸುತ್ತಾ ನಿಂದಿದ್ದಾಗ ಇದ್ದಕ್ಕಿದ್ದಂತೆ ಬಸವಣ್ಣ ನಾಯಕನಾಗಿ ಮುಂದೆ ಒಂದು ಜಾತ್ಯತೀತವಾದ ಕನಸನ್ನು ವ್ಯಾಪಕವಾಗಿ ಎಲ್ಲ ತಬ್ಬಲಿ ಜಾತಿಗಳ ಮುಂದೆ ಅರ್ಥಪೂರ್ಣವಾಗಿ, ಪ್ರಾಮಾಣಿಕವಾಗಿ ಆರ್ದ್ರವಾಗಿ ಆದೇಶಿಸಿದ.

ಬಸವಣ್ಣನ ಅಂತರಂಗದಲ್ಲಿದ್ದ ಮುಕ್ತಿಯ ದನಿಯು ದಲಿತರದು. ಜಾತಿಯನ್ನು ಹುಟ್ಟುಹಾಕಿದ ವ್ಯವಸ್ಥೆಯ ವಿರುದ್ಧ ಬಂಡೇಳಲು ಬಸವಣ್ಣ ಜಾತಿ ವ್ಯವಸ್ಥೆಯ ತಳದಲ್ಲಿದ್ದ ಹೊಲೆ ಮಾದಿಗರನ್ನೇ ತನ್ನವರು ಎಂದು ಗುರುತಿಸಿಕೊಂಡು ಹೋರಾಟಕ್ಕೆ ಇಳಿಯಬೇಕಾಗಿತ್ತು. ಯಾಕೆಂದರೆ ಜಾತಿ ವ್ಯವಸ್ಥೆಯ ಅಪಾರ ಒತ್ತಡ, ಹೊರೆ, ಹಿಂಸೆ, ಅನ್ಯಾಯ ದಲಿತರ ತಲೆ ಮೇಲೆಯೇ ಬಿದ್ದಿತ್ತು. ಆ ಹೊರೆಯ ಹಿಂಸೆಯನ್ನು ಭಾವನಾತ್ಮಕವಾದ ಮಾತಿನಿಂದಾದರೂ (ವಚನದಿಂದ) ಒಂದಿಷ್ಟು ಇಳಿಸಲು ಬಸವಣ್ಣ ತಾನು `ಇಂತವರ ಸಂಗದಿಂದ ಹುಟ್ಟಿದವನು'ಎಂದು ಹೇಳಿಕೊಳ್ಳುವ ಮೂಲಕ ಜಾತಿಯ ಹಿಂಸೆಯ ಕಣ್ಣು ತೆರೆಸಲು ಯತ್ನಿಸುವನು. ದುರ್ದೈವ ಎಂದರೆ ಬಸವಣ್ಣನ ಈ ಪರಿಯ ಕಣ್ಣು ತೆರೆಸುವ ಯತ್ನವೇ ಹಲವರಿಗೆ ಕುತ್ತಾಗಿ ಪರಿಣಮಿಸಿದೆ. ಬಸವಣ್ಣನ ಜಾತ್ಯತೀತ ತತ್ವವನ್ನೇ ಇಡೀ ವಚನಕಾರರು ಅನುಸರಿಸಿದ್ದಾರೆ.

ದಲಿತ ವಚನಕಾರರು ಜಾತಿ ವ್ಯವಸ್ಥೆಯ ಬಗ್ಗೆ ವ್ಯಕ್ತಪಡಿಸಿರುವ ಸಂಗತಿಗಳು ಎಲ್ಲರಿಗೂ ತಿಳಿದಿವೆ. ಇದನ್ನು ಮತ್ತೆ ಉಲ್ಲೇಖಿಸುವುದಿಲ್ಲ. ಆದರೆ ಅವತ್ತಿನ ಮಧ್ಯಕಾಲೀನ ವಚನಕಾರರಂತೆ, ತತ್ವಪದಕಾರರಂತೆ, ಭಕ್ತಿಪಂಥದ ಕವಿಗಳಂತೆ, ಹಳ್ಳಿಗಾಡಿನ ನಾಥ ಪಂಥದ ಅಲಕ್ಷಿತ ಅವಧೂತರಂತೆ ಇದ್ದ ನನ್ನ ಕಾಲದ ಬಾಲ್ಯ ಕಾಲದ ದಲಿತ ಕೇರಿಯ ನನ್ನ ಸಂಬಂಧಿಕರು ವಚನಕಾರರ ಮುಂದುವರಿದ ಭಾಗದಂತೆಯೇ ಮಂಟೇಸ್ವಾಮಿ, ಮಾದೇಶ್ವರರಂಥಹ ಅನೇಕರ ಕುರಿತು ಕಾವ್ಯ ನಿರೂಪಿಸುತ್ತ ಜಾತಿ ವ್ಯವಸ್ಥೆಯ ಬಗೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದನ್ನು ಇಲ್ಲಿ ನೆನಪಿಸಬೇಕಾದುದಿದೆ.

ದಲಿತರ ಕಾವ್ಯಗಳಾದ ಮಾದೇಶ್ವರ ಹಾಗೂ ಮಂಟೇಸ್ವಾಮಿ ಕಾವ್ಯಗಳು ಸ್ವತಃ ವಚನಕಾರರ ಕಾಲದ ಕೊನೆಗಳಿಗೆಯಲ್ಲಿ ಲಿಂಗಾಯತ ಜಾತಿಯು ತಲೆ ಎತ್ತುತ್ತಿದ್ದುದರ ಬಗ್ಗೆ ತೀವ್ರವಾಗಿ ಆಕ್ಷೇಪಿಸುತ್ತವೆ. ಯಾರು ನಿಜವಾದ ಶೈವರು, ಲಿಂಗವಂತರು ಎಂದು  ಅಲಕ್ಷಿತ ಜಾತಿಗಳ ವಚನಕಾರರು ಪ್ರಶ್ನಿಸುತ್ತಾರೆ. ಅಂತಹ ಅಂಚಿನ ದನಿಯ ವಚನಕಾರರ ಅಳಿದುಳಿದ ಪಳೆಯುಳಿಕೆಯಂತಿದ್ದ ಎಷ್ಟೋ ತತ್ವ ಪದಕಾರರು, ಕಲಾವಿದರು, ಜನಪದ ಅಧ್ಯಾತ್ಮವಾದಿಗಳು ಜಾತ್ಯತೀತತೆಯನ್ನು ಸಾರಿದ ಬಸವಣ್ಣನ ಯತ್ನದಲ್ಲೂ ಹುಳುಕು ಹುಡುಕುವರು.

ಇದನ್ನು ಇಲ್ಲಿ ಯಾಕೆ ಪ್ರಸ್ತಾಪಿಸಿದೆನೆಂದರೆ; ಅಂತಹ ಜಾತ್ಯತೀತ ವಚನ ಚಳವಳಿಯೂ ಹೊಸ ಜಾತಿವಾದದತ್ತ ಹೊರಳಿದ ದುರಂತವನ್ನು ನೆನಪಿಸಲು. ಪಂಚಾಚಾರ್ಯರು ಅರ್ಥಾತ್ ಉತ್ತರದಿಂದ ಬಂದ ವೈದಿಕ ನೆಲೆಯ ಶೈವರು ಬಸವಣ್ಣನ ಜಾತ್ಯತೀತ ನೆಲೆಯ ಸಮಾಜವನ್ನು ಜಾತಿ ಸಮಾಜಗಳಾಗಿ ವಿಂಗಡಿಸಲು ಬೇಕಾದ ಧಾರ್ಮಿಕ ರಾಜಕಾರಣವನ್ನು ಮಾಡಿದ್ದಾರೆ. ಈ ಬಗ್ಗೆ ಗಾಢವಾಗಿ ಬಲ್ಲವರಾದ ಎಂ.ಎಂ. ಕಲಬುರ್ಗಿ ಅವರೂ, ಚಿದಾನಂದಮೂರ್ತಿ ಅವರೂ ತಿಳಿ ಹೇಳಬೇಕಾದುದಿದೆ. ಜಾತ್ಯತೀತ ಚಳವಳಿಗೆ ಜಾತಿಯ ಪೆಟ್ಟು ಬಿದ್ದ ಮೇಲೆ ಅಲ್ಲಿದ್ದ ಅಸಂಖ್ಯ ದಲಿತರು ಮರಳಿ ತಮ್ಮ ಜಾತಿಗಳ ಒಡಲಿಗೆ ಬಂದು ಜಾತ್ಯತೀತವಾದ ಅಭಿವ್ಯಕ್ತಿಗಳನ್ನು ಬೇರೆ ಬೇರೆ ರೀತಿಯಲ್ಲಿ ಕಂಡುಕೊಂಡಿದ್ದಾರೆ.

ಆದರೆ ಆ ಹೊತ್ತಿಗಾಗಲೇ ಜಾತಿ ವ್ಯವಸ್ಥೆಯು ಅಪರೋಕ್ಷ ಪುರೋಹಿತ ಹಾಗೂ ಬ್ರಾಹ್ಮಣಶಾಹಿಯ ಮೂಲಕ ಎಲ್ಲ ಬಗೆಯ ಅವೈದಿಕ ನೆಲೆಗಳಿಗೂ ನುಗ್ಗಿ ದಾಳಿ ಮಾಡಿ ಜಾತಿಯ ಆಚಾರ ವಿಚಾರಗಳನ್ನು ಒಪ್ಪಿಸಿ ಬೇರೊಂದು ಬಗೆಯಲ್ಲಿ ವರ್ಣಾಶ್ರಮ ಜಾತಿ ವ್ಯವಸ್ಥೆಯನ್ನು ಕುಲಗಳ ಮೂಲಕ, ಮತ ಭೇದಗಳ ಮೂಲಕ ವಿಚ್ಛಿದ್ರಕಾರಿಯಾಗಿ ವಿಂಗಡಿಸಿ ಅಸಂಖ್ಯವಾದ ರೀತಿಯಲ್ಲಿ ಜಾತಿ ವ್ಯವಸ್ಥೆಯನ್ನು ಹಬ್ಬಿಸಿದೆ. ಇದರಿಂದಲೇ ಕೇವಲ ನಾಲ್ಕೇ ನಾಲ್ಕು ವರ್ಣಗಳಿದ್ದ ಶ್ರೇಣಿಯು ಒಡೆದು ಸಾವಿರಾರು ಜಾತಿ, ಒಳಜಾತಿಗಳು ಹುಟ್ಟಿಕೊಳ್ಳಲು ಸಾಧ್ಯವಾದದ್ದು.

ಅಂದರೆ ವಚನ ಚಳವಳಿಯು ಜಾತ್ಯತೀತತೆಯನ್ನು ಬಿತ್ತಲು ಮುಂದಾದಂತೆಯೇ, ಆ ಜಾತ್ಯತೀತ ದರ್ಶನವನ್ನೇ ನಾಶಪಡಿಸಿ ಮರಳಿ ಜಾತಿ ವ್ಯವಸ್ಥೆಯ ಸೂತ್ರವನ್ನು ಊಳಿಗಮಾನ್ಯ ಜಾತಿಗಳ ಯಜಮಾನರ ಮೂಲಕ ವಿಕೃತವಾಗಿ ವ್ಯಾಪಿಸಿದ್ದುದು ಜಾತಿವಾದದ ದಿಗ್ವಿಜಯದ ಪರಿಸ್ಥಿತಿಯನ್ನು ಹೇಳುತ್ತಿದೆ ಹಾಗೂ ಯಾವತ್ತೂ ಕೂಡ ಮೇಲ್ಜಾತಿಗಳು ಯಾವ ಕಾರಣಕ್ಕೂ ತಮ್ಮ ಸ್ಥಾನಮಾನಗಳನ್ನು ಬಿಟ್ಟುಕೊಡಲು ಸಿದ್ಧವಿರುವುದಿಲ್ಲ ಎಂಬ ವಾಸ್ತವವನ್ನು ನೆನಪಿಸುತ್ತಿದೆ. ವಚನ ಚಳವಳಿಯ ಕಾಲದ ಜಾತಿ ವ್ಯವಸ್ಥೆಯ ಒತ್ತಡಗಳ ಮೂಲವನ್ನು ಅರಿಯದೆಯೇ ಅಲ್ಲಿನ ಜಾತಿ ಸೂಚಕ ವಿವರಗಳನ್ನು ಪಟ್ಟಿ ಮಾಡಬಾರದು. ಆಗಿನ್ನೂ ಊಳಿಗಮಾನ್ಯ ಜಾತಿ ವ್ಯವಸ್ಥೆಯು ಚಲಾವಣೆಯಲ್ಲಿತ್ತು. ಕೆಲವು ಭೂಪರು ಊಳಿಗಮಾನ್ಯ ವ್ಯವಸ್ಥೆ ಎಂಬುದೇ ಕರ್ನಾಟಕದಲ್ಲಿ ಇರಲಿಲ್ಲ ಎಂದು ಹೇಳುವುದಿದೆ. ಸಂಪತ್ತಿನ ಮೇಲಿನ ಅಧಿಕಾರ ಹಿಡಿದಿದ್ದ ಭೂಮಾಲೀಕ ಜಾತಿಗಳ ನೀತಿಯೇ ಊಳಿಗಮಾನ್ಯ ವ್ಯವಸ್ಥೆ.

ಇಂತಹ ಅಧಿಕಾರದ ನಡುವೆ ಬಸವಣ್ಣ ಜಾತ್ಯತೀತ ಕಾಯಕ ಹೇಳಿದ. ಕುಲಕಸುಬುಗಳು ಇದರಿಂದ ಜಾತಿ ಕೂಪವಾಗುವುದು ತಪ್ಪುತ್ತಿತ್ತು. ಆದರೆ ಊಳಿಗಮಾನ್ಯ ಜಾತಿಗಳು ಪುರೋಹಿತಶಾಹಿ ಬ್ರಾಹ್ಮಣ್ಯದ ಜಾತಿ ನೀತಿಯ ಚಿಲ್ಲರೆ ಆಕರ್ಷಣೆಗಳಿಗೆ ಒಳಗಾಗಿ ಜಾತ್ಯತೀತತೆಯನ್ನು ನಿರಾಕರಿಸಿತು. ಇದರಿಂದಲೇ ವಚನಕಾರರ ಜಾತ್ಯತೀತ ಕನಸುಗಳು ಭಗ್ನವಾದುದು. ವಚನಕಾರರು ತಮ್ಮ ಕಾಲದಲ್ಲೆೀ ಈ ಬಗೆಯ ವಿಕೋಪಗಳನ್ನು ತೀವ್ರವಾಗಿ ಪ್ರಶ್ನಿಸುವರು. ಬಸವಣ್ಣನ ಜಾತ್ಯತೀತ ನಡತೆಯು ಜಾತಿನಿಷ್ಠವಾಗಿದ್ದ ಮೇಲ್ಜಾತಿಗಳಿಗೆ ಅಪಥ್ಯವಾಗಿತ್ತು. ಅದರಿಂದಲೇ ಅವರೆಲ್ಲ ಬ್ರಾಹ್ಮಣ್ಯದ ಕುಟಿಲತೆಯ ಜೊತೆಗೂಡಿ ಜಾತ್ಯತೀತ ಕ್ರಾಂತಿಯ ಅಧ್ಯಾತ್ಮ ದಂಗೆಯ ನಡತೆಯನ್ನು ಹದಗೆಡಿಸಿದ್ದುದು.

ವಚನ ಚಳವಳಿಯ ನಂತರದ ಕರ್ನಾಟಕದಲ್ಲಿ ನೂರಾರು ಒಳ ಜಾತಿಗಳು ಹುಟ್ಟಿಕೊಂಡದ್ದನ್ನು ಜಾತಿ ವ್ಯವಸ್ಥೆಯ ಹುನ್ನಾರದ ಭಾಗವಾಗಿಯೇ ಗ್ರಹಿಸಬೇಕು. ಈ ಕಾಲಮಾನದಲ್ಲೇ ಹೊಸ ಬಗೆಯ ಅನೇಕ ಜಾತಿಗಳು, ಜಾತಿಯ ತಾರತಮ್ಯಗಳು, ಅಸ್ಪೃಶ್ಯತೆಯ ವಿವಿಧ ಒಳ ಬಗೆಗಳು ಕುಲಮೂಲ ಸಂಬಂಧಗಳಲ್ಲೂ ಉಂಟಾದುದು. ಇದನ್ನೆಲ್ಲ ವಚನಗಳ ಜಾತ್ಯತೀತತೆಯ ಹಂಬಲದ  ಭಾಗವಾಗಿ ಗಮನಿಸಬೇಕು.  `ಕುಲವೆರಡಲ್ಲದೆ ಹಲವಿಲ್ಲ, ದಿನವೆರಡಲ್ಲದೆ ಸಪ್ತ ದಿನವಿಲ್ಲ.  ಜಾತಿ ಜಾತಿಯ ಕೂಡಿದಲ್ಲದೆ ನಿಹಿತ ಸುಖವಿಲ್ಲ . ಜಾತಿ ಜಾತಿಯ ಕೊಂದು ನಿಹಿತ, ಅನಿಹಿತವ ಕೆಡಿಸಿ, ಜಾತ ಅಜಾತನ ಕಂಡು ನಿಹಿತವಾಗಿರಿ ,  ಹೊಲೆ ಹದಿನೆಂಟು ಜಾತಿಯೆಂಬ ಕುಲವಿಲ್ಲ'  ಎಂದು ಸಾರುವ ವಚನಕಾರರು ಅಖಂಡವಾಗಿ ಜಾತಿ ವಿರೋಧಿ ಆಂದೋಲನವನ್ನು ಸಾಮಾಜಿಕ ನ್ಯಾಯದ ಭಾಗವಾಗಿ ನ್ಯಾಯ ನೀತಿಯ ಅಧ್ಯಾತ್ಮವನ್ನು ಬಾಳಿ ಬದುಕಿ ಬಿತ್ತರಿಸಿದರು.

`ಜಾತಿವಿಡಿದು ಸೂತಕವನರಸುವೆ, ಜ್ಯೋತಿವಿಡಿದು ಕತ್ತಲೆಯನರಸುವೆ, ಇದೇಕೊ ಮರಳು ಮಾನವ' ಎಂದು ಕೇಳುವ ವಚನಗಳ ಈ ದನಿ ಜಾತಿಯ ಬೇರನ್ನು ಕಿತ್ತುಕೊಳ್ಳಿ ಎಂಬುದರ ಹಂಬಲವಲ್ಲವೇ...  `ಕುಲಗೋತ್ರ ಜಾತಿ ಸೂತಕದಿಂದ ಕೆಟ್ಟವರೊಂದು ಕೋಟ್ಯಾನು ಕೋಟಿ'  ಎಂದು ವಿಷಾದಿಸುವುದರ ಹಿಂದೆ ಜಾತ್ಯತೀತತೆಯ ಆರ್ದ್ರತೆ ಅಖಂಡ ಮಾನವತ್ವದ ಪರವಾಗಿ ಇಲ್ಲವೇ ಇಲ್ಲವೇ... ಇದೆಲ್ಲ ಜಾತಿ ವಿರೋಧಿ ಅಭಿವ್ಯಕ್ತಿಗಳಲ್ಲವೇ... ಈ ಜಾತಿ ವಿರೋಧಿ ವಚನಾಂದೋಲನದ ನಂತರ ಸ್ವತಃ ದಲಿತರು ಜನಪದ ಮಹಾಕಾವ್ಯಗಳ ಮೂಲಕ ಮತ್ತೊಮ್ಮೆ ವಿವಿಧ ಬಗೆಯಲ್ಲಿ ಜಾತಿವ್ಯವಸ್ಥೆಯ ವಿರುದ್ಧ ದಂಗೆ ಏಳುವರು. ದಲಿತರ ಆ ಬಗೆಯ ಅಪರೋಕ್ಷ ದಂಗೆಯನ್ನು ಮನಗಾಣಲು ಭಾಗಶಃ ಬಲು ಬುದ್ಧಿ ಜೀವಿಗಳಿಗೆ ಬೇರೆಯದೇ ಆದ ಪಂಚೇಂದ್ರಿಯಗಳು ಬೇಕೇನೊ.

ನಮ್ಮ ಸಂವಿಧಾನದ ಆರಂಭದಲ್ಲಿ ಜಾತ್ಯತೀತ  ಗಣರಾಜ್ಯದ ಮುಖ್ಯವಾದ ಒಂದು ಪ್ರತಿಧ್ವನಿ ಇದೆ. ಈ ದನಿಯ ಆಧಾರದಲ್ಲೇ ಇಡೀ ಸಂವಿಧಾನ ರಚನೆಯಾಗಿದೆ. ಕೇವಲ ಒಂದು ಬಾರಿ ಮಾತ್ರ  ಜಾತ್ಯತೀತ ಪದ ಬಳಕೆಯಾಗಿದೆ ಎಂದ ಮಾತ್ರಕ್ಕೆ ಸಂವಿಧಾನವು ಜಾತ್ಯತೀತತೆಯ ಪರವಾಗಿಲ್ಲ ಎಂದು ಹೇಳಲಾಗುವುದೇ... ಸ್ವತಃ ಪೇಜಾವರಶ್ರೀ ಅವರು ಜಾತಿ ವ್ಯವಸ್ಥೆಯ ಇರುವಿಕೆಯನ್ನು ಒಪ್ಪಿ ಸುಧಾರಣೆಗೆಂದು ದಲಿತರ ಕೇರಿಗಲ್ಲಿ ಪಾದಯಾತ್ರೆಯನ್ನು ಪ್ರಾಯಶ್ಚಿತ್ತ ಎಂಬಂತೆ ಮಾಡಿ ಸ್ವತಃ ವೈದಿಕ ಜಾತಿ ಮತಿಗಳಿಗೆ ತಿಳಿ ಹೇಳುವ ಕಾಯಕದಲ್ಲಿ ಮುಂದಾಗಿದ್ದಾರೆ. ಅಂತಹ ಬ್ರಾಹ್ಮಣ್ಯವೇ ಜಾತಿ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳುವ ಸಲುವಾಗಿ `ಮತಾಂತರ ಬೇಡ, ನಾವೆಲ್ಲ  ಹಿಂದೂ'ಗಳು ಎಂಬ ಹೊಸ ಒಪ್ಪಂದಕ್ಕೆ ಮುಂದಾಗುತ್ತಿದೆ. ಭಕ್ತಿಪಂಥದ ಕವಿಗಳು, ತತ್ವಪದಕಾರರು, ಮೌಖಿಕ ಪರಂಪರೆಯ ಅದೆಷ್ಟೋ ಅನಾಮಿಕ ನಿರೂಪಕರು ಜಾತಿ ವ್ಯವಸ್ಥೆಯ ವಿರುದ್ಧವಾಗಿಯೇ ಧ್ವನಿತಾರ್ಥದಲ್ಲಿ ದಂಗೆಯ ಸೊಲ್ಲೆತ್ತಿದವರು. ಆ ಸಲುವಾಗಿಯೇ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಹಾಗೂ ತತ್ವ ದರ್ಶನಗಳು ಜಾತ್ಯತೀತವಾದ ವಿರಾಟ್ ಅಭಿವ್ಯಕ್ತಿಗಳನ್ನು ಮಾಡಿದ್ದುದು. ಈ ಬಗೆಯನ್ನು ಅರಿಯದವರು ಮನುವಾದಿಗಳಿಗಿಂತಲೂ ಅಪಾಯಕಾರಿಯಾದವರು. ಅವರ ಈ ರೀತಿಯು ಬೌದ್ಧಿಕ ಅಸ್ಪೃಶ್ಯತೆಯನ್ನು ಪ್ರತಿಪಾದಿಸುವ ಪರೋಕ್ಷ ಜಾಣ್ಮೆಯ ವಿಧಾನವಾಗಿದೆ.

`ತಾಯ ಮೊಲೆಹಾಲೆ ನಂಜಾಗಿ ಕೊಲುವೊಡೆ ಇನ್ನಾರ ದೂರುವೆಯೊ ತಂದೇ' ಎಂಬ ಆರ್ತದನಿ ಆಗಲೂ ಇಂತವರ ನಡುವಿನಿಂದಲೇ ಹುಟ್ಟಿಬಂದಿರಬೇಕು. ಜ್ಞಾನಿಗಳು, ಸಂಶೋಧಕರು ವರ್ತಮಾನದ ಕುರುಡನ್ನು ಸರಿಪಡಿಸಿ ಬೆಳಕಿನತ್ತ ಮುನ್ನಡೆಸುವರು ಎಂಬುದು ಒಂದು ಆದರ್ಶ. ಆದರೆ ಇಂತಹ ಚಿಂತಕರು ಕಗ್ಗತ್ತಲ ಕ್ರೌರ್ಯದ ಹೆಪ್ಪುಗಟ್ಟಿದ ಜಾತಿ ನೆತ್ತರ ಹತ್ಯೆಯನ್ನೇ `ಇಲ್ಲ ಇಲ್ಲಾ... ಇದೆಲ್ಲ ಕಗ್ಗೊಲೆಯ ಜಾತಿ ಕ್ರೌರ್ಯ ಅಲ್ಲ' ಎಂದು ಹೇಳಿದರೆ; ಆ ಕಗ್ಗೊಲೆಯಿಂದ ನೆಲಕಚ್ಚಿ ಬೆಳಕಿಗಾಗಿ ದಾಹದಲಿ ತವಕಿಸುವವರ ಎದೆಯ ನಡುಕ ಹೇಗಿರಬಹುದು... ದಮನಿತರ ದನಿಯ ಎದೆಗೂ, ಕೊರಳಿಗೂ ಬರ್ಜಿಯ ತಿವಿಯಲು ಮುಂದಾಗುವ ಬೌದ್ಧಿಕತೆಯ ಧೀಮಂತಿಕೆಗೂ ಏನೆಂದು ಹೇಳುವುದೂ... ಇಷ್ಟು ಸಾವಿರ ವರ್ಷಗಳ ಅಸ್ಪೃಶ್ಯತೆ, ಜಾತೀಯತೆ, ಮತೀಯತೆಯ ಬೇಟೆಗಳಿಂದಲೂ ನಾವಿನ್ನೂ ಬದುಕಿರುವುದು ಇಂತವರಿಗೆ ಮುಳ್ಳಾಗಿದೆಯೆ... ಹೋಗಲಿ... ಈ ವಿದ್ವಾಂಸರು, ವರ್ತಮಾನದ ಹೊಸ ಹೊಸ ಜಾತಿ ರೂಪಗಳ ಬಗ್ಗೆ ಕುರುಡಾಗಿರುವರೇ... ಬೌದ್ಧಿಕವಾದ ತಾಯ್ತನದ ಸಾಮಾಜಿಕ ಅರಿವೂ ಕೂಡ ಇಂತಹವರಿಗೆ ಜಾಗತಿಕ ಮಾರಾಟದ ಯೋಜನೆಗಳ ಸರಕೇ... ಇಂತಹ ಅಧ್ಯಯನ ಕೂಡ ಜಾತಿವಾದವನ್ನು ಹಿಂದುತ್ವದ ಹಂಗಿನಲ್ಲಿ ಪರೋಕ್ಷವಾಗಿ ಮಂಡಿಸುವ ಚಮತ್ಕಾರವಾಗಿದೆ. ಈ ಚಮತ್ಕಾರವನ್ನು ಹೇಗೆ ಅರ್ಥೈಸುವುದು... .. ದಲಿತರ ಪರವಾದ ವಚನ ಚಳವಳಿಯನ್ನೇ ಅಪವ್ಯಾಖ್ಯಾನಗೊಳಿಸಿ ಬಿಟ್ಟರೆ ತಮ್ಮ ವೈದಿಕ ಹಾದಿಗೆ ಪಯಣ ಸುಲಭ ಎಂದು ಇಂತವರು ತಿಳಿದಿರಬಹುದು... ಸಾಧ್ಯವಿಲ್ಲ, ಈ ಬಗೆಯ ವಿದ್ವಾಂಸರನ್ನು ಕಂಡು ಅಯ್ಯೋ ಎನಿಸುವುದು.

0 comments:

Post a Comment